ಕ್ರೈಸ್ಟ್ ಕಿಂಗ್ ಕಾಲೇಜು: ವಿಶ್ವ ಮಾದಕ ದ್ರವ್ಯ ವಿರೋಧಿ ದಿನ ಆಚರಣೆ ಜಾಥಾ
ಕಾರ್ಕಳ: ವಿಶ್ವ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ, ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸಲು ವಿಶೇಷ ಜಾಥಾವೊಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮವನ್ನು ಕಾರ್ಕಳ ನಗರ ಪೊಲೀಸ್ ಠಾಣೆಯ ಸಹಯೋಗದಲ್ಲಿ ರೋರ‍್ಸ್, ರೇಂಜರ್‌ಗಳು ಹಾಗೂ ಪ್ರೌಢಶಾಲಾ ವಿಭಾಗದ ಸ್ಕೌಟ್ ಮತ್ತು ಗೈಡ್ಸ್ ಘಟಕದ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದರು.
ಜಾಥಾ ಕಾರ್ಕಳದ ಬಂಡೀಮಠ ಬಸ್ಸು ನಿಲ್ದಾಣದಿಂದ ಆರಂಭವಾಗಿ ಗಾಂಧಿ ಮೈದಾನದವರೆಗೆ ನಡೆಯಿತು. ಈ ವೇಳೆ ವಿದ್ಯಾರ್ಥಿಗಳು “ಡ್ರಗ್ಸ್ ಬೇಡ”, “ಜೀವನದೊಂದಿಗೆ ಮೋಸ ಮಾಡೋಣ ಬೇಡ” ಎಂಬ ಘೋಷಣೆಗಳನ್ನು ಕೂಗುತ್ತಾ ಮಾದಕ ದ್ರವ್ಯ ಸೇವನೆಯ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಕಾರ್ಕಳ ನಗರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಶಿವಕುಮಾರ್ ಅವರು ಮಾತನಾಡಿ, ಮಾದಕ ದ್ರವ್ಯಗಳ ದೋಷಪೂರಿತ ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸ್ಪಷ್ಟನೆ ನೀಡಿದರು. ಅವರು, “ಡ್ರಗ್ಸ್ ಸೇವನೆ ಮಾತ್ರವಲ್ಲದೇ ಮಾರಾಟದ ಬಗ್ಗೆ ಮಾಹಿತಿ ಸಿಕ್ಕಲ್ಲಿ ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು,” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನೂತನ ಉಪನಿರೀಕ್ಷಕರಾದ ಮುರಳೀಧರ ನಾಯ್ಕ್, ಹಾಗೂ ಠಾಣೆಯ ಇತರ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.
ಜಾಥಾವನ್ನು ಯಶಸ್ವಿಯಾಗಿ ನಡೆಸಲು ಕ್ರೈಸ್ಟ್ ಕಿಂಗ್ ಕಾಲೇಜಿನ ಉಪನ್ಯಾಸಕರಾದ ಉಮೇಶ್ ಬೆಳ್ಳಿಪ್ಪಾಡಿ, ದೀಪಕ್, ಶ್ರೀಮತಿ ಸುಕನ್ಯಾ, ಕು. ಅಭಿನಯ ಮತ್ತು ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಪ್ರಸಾದ್ ಪ್ರಮುಖ ಪಾತ್ರವಹಿಸಿದ್ದರು.