ಕ್ರೈಸ್ಟ್ ಕಿಂಗ್ ಮಾದಕ ದ್ರವ್ಯದ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ
– ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
– ಮಾದಕ ದ್ರವ್ಯ ಸೇವನೆಯಿಂದ ಜೀವನ ಸರ್ವನಾಶ : ಮುರಳೀಧರ ನಾಯ್ಕ್
NAMMUR EXPRESS NEWS
ಕಾರ್ಕಳ: ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಮಾದಕ ದ್ರವ್ಯ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ ನಡೆಯಿತು. ಕಾರ್ಕಳ ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮುರಳೀಧರ ನಾಯ್ಕ್ ಸಂಪನ್ಮೂಲ ವ್ಯಕ್ತಿಯಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, “ಹದಿಹರೆಯದಲ್ಲಿ ಆಕರ್ಷಣೆ ಹೆಚ್ಚಾಗಿದ್ದು, ದುಶ್ಚಟಗಳಿಗೆ ಬೇಗನೆ ಒಳಗಾಗುವ ಸಂಭವ ಹೆಚ್ಚು. ಮಾದಕ ದ್ರವ್ಯ ಸೇವನೆಯಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹಾಳಾಗಿ ಜೀವನವೇ ಸರ್ವನಾಶವಾಗುತ್ತದೆ. ಇದು ಸಮಾಜದಲ್ಲಿ ಅಶಾಂತಿ, ಅಪರಾಧ ಮತ್ತು ಅರಾಜಕತೆಯನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳು ಜಾಗೃತಿಯಿಂದ ನಡೆದು, ಮಾದಕ ದ್ರವ್ಯಗಳ ಬಗ್ಗೆ ಯಾವುದೇ ಮಾಹಿತಿ ಇದ್ದರೆ ತಕ್ಷಣ ಪೊಲೀಸರಿಗೆ ತಿಳಿಸಬೇಕು. ಸಾಮಾಜಿಕ ಜಾಲತಾಣದ ಕೆಟ್ಟ ಚಟುವಟಿಕೆಗಳಿಂದ ದೂರವಿದ್ದು ಓದಿನ ಕಡೆ ಗಮನಹರಿಸಬೇಕು” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾದಕ ದ್ರವ್ಯ ವಿರೋಧಿ ಸಮಿತಿಯ ಅಧ್ಯಕ್ಷ ಮತ್ತು ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್, ಉಪನ್ಯಾಸಕ ಸದಸ್ಯರಾದ ನಯನ (ರಸಾಯನಶಾಸ್ತ್ರ), ಪದ್ಮನಾಭ ನಾಯಕ್ (ಭೌತಶಾಸ್ತ್ರ), ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ ಮುಂತಾದವರು ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
