ಆರಂಭಿಕ ಶಿಕ್ಷಣವೇ ಉನ್ನತ ಶಿಕ್ಷಣಕ್ಕೆ ಬುನಾದಿ: ಎಚ್. ನಾಗರಾಜ್ ಶೆಟ್ಟಿ
ಕಾರ್ಕಳ: “ಮಕ್ಕಳ ಬಾಲ್ಯದ ಆರಂಭಿಕ ಶಿಕ್ಷಣವು ಉತ್ತಮ ಗುಣಮಟ್ಟದದ್ದಾಗಿದ್ದರೆ, ಅವರ ಭವಿಷ್ಯದಲ್ಲಿ ಉನ್ನತ ಶಿಕ್ಷಣಕ್ಕೆ ಅದು ಬಲವಾದ ಆಧಾರವಾಗುತ್ತದೆ” ಎಂದು ಎಸ್.ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ್ ಶೆಟ್ಟಿ ಹೇಳಿದರು.
ಎಸ್.ಆರ್ ಪಬ್ಲಿಕ್ ಸ್ಕೂಲಿನಲ್ಲಿ ನಡೆದ ಎಲ್.ಕೆ.ಜಿ ತರಗತಿಯ ಆರಂಭೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪೋಷಕರು ತಮ್ಮ ಮಕ್ಕಳ ಶಿಕ್ಷಣವನ್ನು ಮೊದಲ ಸ್ಥಾನದಲ್ಲಿ ಇಡಬೇಕು. ಗುಣಮಟ್ಟದ ಹಾಗೂ ಆಧುನಿಕ ಸೌಕರ್ಯಗಳೊಂದಿಗೆ ನಮ್ಮ ಸಂಸ್ಥೆ ಆರಂಭಿಕ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಸಪ್ನಾ ಎನ್. ಶೆಟ್ಟಿ ಅವರು, “ಮಕ್ಕಳನ್ನು ಸ್ವತಂತ್ರವಾಗಿ ಬೆಳೆಯಲು ಪೋಷಕರು ಪ್ರೋತ್ಸಾಹ ನೀಡಬೇಕು. ಬಾಲ್ಯದ ಮನಸ್ಸು ಒತ್ತಡಕ್ಕೆ ಒಳಪಡದಂತೆ ನೋಡಿಕೊಳ್ಳಬೇಕು. ಮಕ್ಕಳಿಂದ ಸಾಧ್ಯವಾಗುವ ಕೆಲಸಗಳನ್ನು ಅವರಿಂದಲೇ ಮಾಡಿಸಬೇಕು. ಇದು ಅವರ ಆತ್ಮವಿಶ್ವಾಸವನ್ನು ಬೆಳೆಸುತ್ತದೆ” ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್.ಆರ್. ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲ ಭಗವತಿ, ಉಪ ಪ್ರಾಂಶುಪಾಲ ದೀಪಕ್ ಎನ್., ಎಸ್.ಆರ್. ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗೋಪಾಲ ಆಚಾರ್ಯ ಹಾಗೂ ಕೋಓರ್ಡಿನೇಟರ್ ಸುಜಾತ ಉಪಸ್ಥಿತರಿದ್ದರು.
ಮೂರನೇ ತರಗತಿ ವಿದ್ಯಾರ್ಥಿನಿ ಪ್ರಿಶಾ ನಿರೂಪಣೆಯೊಂದಿಗೆ ಕಾರ್ಯಕ್ರಮಕ್ಕೆ ಸ್ವಾಗತ ನೀಡಿದರೆ, ಶಿಕ್ಷಕಿ ಸುಜಾತಾ ವಂದಿಸಿದರು.