Categories
ಕೊಪ್ಪ ಚಿಕ್ಕಮಗಳೂರು ಶೃಂಗೇರಿ

ಕಾಫಿನಾಡಲ್ಲಿ ಪುನೀತ್ ರಾಜ್‌ಕುಮಾರ್ ಪ್ರತಿಮೆ ಅನಾವರಣ

ಕಾಫಿನಾಡಲ್ಲಿ ಪುನೀತ್ ರಾಜ್‌ಕುಮಾರ್ ಪ್ರತಿಮೆ ಅನಾವರಣ

* ನಟನೆ ಹಾಗೂ ನಡವಳಿಕೆಯಲ್ಲಿ ಡಾ.ರಾಜ್‌ರನ್ನ ಮೀರಿಸಿದ್ದ ಪುನೀತ್
* ಕೇಂದ್ರ ಸರ್ಕಾರ ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ -ಸಾ ರಾ ಗೋವಿಂದ್

NAMMMUR EXPRESS NEWS
ಚಿಕ್ಕಮಗಳೂರು: ನಗರದ ಆಜಾದ್‌ ಪಾರ್ಕ್‌ ವೃತ್ತದಲ್ಲಿ ಪುನೀತ್ ರಾಜ್ ಕುಮಾರ್ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಾ ರಾ ಗೋವಿಂದ್ ಪುನೀತ್ ಪ್ರತಿಮೆ ಅನಾವರಣಗೊಳಿಸಿದರು.
‘ಪುನೀತ್ ಇರದಿದ್ದರೂ, ಅವರ ಸಮಾಜ ಸೇವೆ, ಆದರ್ಶಗಳು ನಮ್ಮ ಮುಂದಿವೆ. ಅವುಗಳನ್ನು ಪಾಲಿಸಿದರೆ ಅದೇ ಅವರಿಗೆ ನೀಡುವ ಗೌರವ’ ಎಂದರು.
ಡಾ.ರಾಜ್‌ರವರ ನಟನೆ ಹಾಗೂ ನಡವಳಿಕೆಯನ್ನು ಪುನೀತ್ ಮೀರಿಸಿದ್ದರು,ಪುನೀತ್ ಮಾಡಿದ ಎಲ್ಲ ಕೆಲಸಗಳನ್ನು ಅವರ ಪತ್ನಿ ಅಶ್ವಿನಿ ಮುಂದುವರೆಸುತ್ತಿರುವುದು ಹೆಮ್ಮೆಯ ವಿಚಾರ. ಕರ್ನಾಟಕದಲ್ಲಿ ಕನ್ನಡ ಉಳಿದು, ಕನ್ನಡ ತಲೆ ಎತ್ತಿ ನಡೆಯುತ್ತಿದ್ದರೆ ಅದು ರಾಜ್ ಕುಮಾರ್ ಹೋರಾಟದ ಫಲ. ಇದಕ್ಕೆ ಗೋಕಾಕ್ ಚಳುವಳಿಯೇ ಉದಾಹರಣೆ. ಕೇಂದ್ರ ಸರ್ಕಾರ ಕನ್ನಡದ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನ ಮಾಡುತ್ತಿದೆ. ಅದಕ್ಕೆ ಅವಕಾಶ ನೀಡಕೂಡದು ಎಂದರು.
ರಾಜಕೀಯ ಸೇರಿದಂತೆ ದೇಶ, ವಿದೇಶಗಳಲ್ಲಿ ನಟಿಸುವ ಅವಕಾಶ ಇದ್ದರೂ ಬೇರೆ ಭಾಷೆ ಕಡೆ ನೋಡದ ಏಕೈಕ ವ್ಯಕ್ತಿ ರಾಜ್ ಕುಮಾರ್. ಹಾಗಾಗಿಯೇ ಪಕ್ಷಾತೀತವಾಗಿ ಎಲ್ಲರೂ ಅವರ ಕುಟುಂಬವನ್ನು ಗೌರವಿಸುತ್ತಾರೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಮಾತನಾಡಿ, ‘ಕನ್ನಡ ಚಲನಚಿತ್ರಗಳು ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿಯಾಗಿದ್ದರೆ ಅದಕ್ಕೆ ದೊಡ್ಡ ಕೊಡುಗೆ ನೀಡಿದವರು ರಾಜ್ ಕುಮಾರ್’ ಎಂದರು.
ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಿಲ್ಲಾ ರಾಜ್‌ಕುಮಾ‌ರ್ ಅಭಿಮಾನಿ ಸಂಘದ ಅಧ್ಯಕ್ಷ ಓಂಕಾರೇಗೌಡ, ಶಾಸಕ ಎಚ್.ಡಿ. ತಮ್ಮಯ್ಯ, ಟಿ.ಡಿ. ರಾಜೇಗೌಡ, ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಸದಸ್ಯೆ ರೂಪಾ ಕುಮಾ‌ರ್, ಜೆ.ಪಿ. ಕೃಷ್ಣಗೌಡ, ಉಮಾ ಐ.ಬಿ. ಶಂಕರ್, ಎಂ.ಎಲ್. ಮೂರ್ತಿ, ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಗೌಡ ಉಪಸ್ಥಿತರಿದ್ದರು.

 

 

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.