ಎಲ್ಲಿ ನೋಡಿದರೂ ಕಾಡು ಆನೆಗಳು: ಆಗುಂಬೆಯಲ್ಲಿ ಪ್ರತ್ಯಕ್ಷ!
– ತೀರ್ಥಹಳ್ಳಿ, ಕೊಪ್ಪ, ಬಾಳೆಹೊನ್ನೂರು, ಶೃಂಗೇರಿ ಭಾಗದಲ್ಲಿ ಆನೆ ಹಾವಳಿ
– ಮಲೆನಾಡಿಗೆ ನುಗ್ಗಿದ ಆನೆಗಳು ಎಷ್ಟು? ಜನರಿಗೆ ಗೊಂದಲ
NAMMUR EXPRESS NEWS
ಮಲೆನಾಡು: ಮಲೆನಾಡಿನಲ್ಲಿ ಈಗ ಎಲ್ಲಿ ನೋಡಿದರೂ ಕಾಡು ಆನೆಗಳದ್ದೆ ಸುದ್ದಿ. ತೀರ್ಥಹಳ್ಳಿ, ಕೊಪ್ಪ ಸೇರಿದಂತೆ ಎನ್ ಆರ್ ಪುರ, ಕೊಪ್ಪ,ಶೃಂಗೇರಿ ತಾಲೂಕುಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು,ಅಪಾರ ಪ್ರಮಾಣ ಬೆಳೆನಾಶವಾಗಿದೆ ಹಾಗೂ ಭಯದಿಂದ ಮನೆಯಿಂದ ಹೊರಬರಲು ಜನ ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣಕ್ಕೆ ಆನೆಗಳು ನುಗ್ಗುತ್ತಿವೆ. ಅಚ್ಚರಿ ಎಂದರೆ ನಾಡಿನ ಪ್ರಸಿದ್ಧ ಪ್ರವಾಸಿ ತಾಣ ಆಗುಂಬೆಯಪ್ರವಾಸಿ ಮಂದಿರದ ಬಳಿಯೇ ಕಾಡು ಆನೆ ಪ್ರತ್ಯಕ್ಷವಾಗಿ ಎಲ್ಲರಲ್ಲೂ ಭಯ ಹುಟ್ಟಿಸಿದೆ.
ಅರಣ್ಯ ಸಮೀಪವಿರುವ ಹಳ್ಳಿ,ಊರು,ಅಲ್ಲಿನ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದ ಕಾಡಾನೆಗಳು ಈಗ ಹಳ್ಳಿಗಳನ್ನು ದಾಟಿ ಪಟ್ಟಣದ ಸಮೀಪ ಬರತೊಡಗಿದೆ.
ಶೃಂಗೇರಿ ಶ್ರೀಮಠದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಾಣಿಸಿಕೊಂಡು, ಜಯಪುರ ಮಾರ್ಗವಾಗಿ ಸಂಚರಿಸಿ ಬಾಳೆಹೊನ್ನೂರಿನಲ್ಲಿ ಅಪಾರ ಪ್ರಮಾಣ ಬೆಳೆನಾಶ ಮಾಡಿ ರೈತರೇ ಸೇರಿ ಆನೆಗಳನ್ನು ಓಡಿಸಲು ಮುಂದಾದರು,ಹೀಗೆ ಬಾಳೆಹೊನ್ನೂರು ದಾಟಿದ ಆನೆಗಳು ಮೇಲ್ಪಾಲ್ ಮೂಲಕ ಕೊಪ್ಪ ತಾಲೂಕು ಪ್ರವೇಶಿಸಿ ಕೊಪ್ಪ ನಗರಕ್ಕೂ ಬಂದಿವೆ.ಬೆಳಗಿನ ಜಾವ ಆನೆಗಳು ಪಟ್ಟಣಕ್ಕೆ ಬಂದಿದ್ದರಿಂದ ಯಾವುದೇ ಹಾನಿ ಸಂಭವಿಸಿರಲಿಲ್ಲ,ಹೀಗೆ ಪ್ರಯಾಣ ಮುಂದುವರರೆಸಿದ ಕಾಡಾನೆಗಳು ಕುದ್ರೆಗುಂಡಿ ಮೂಲಕ ಕೊಪ್ಪ, ತೀರ್ಥಹಳ್ಳಿ ಗಡಿ ಭಾಗವಾದ ಮೃಗವಧೆ ಮೂಲಕ ತೀರ್ಥಹಳ್ಳಿ ಪ್ರವೇಶಿಸಿ ಅಲ್ಲಿ ಪಟ್ಟಣದಲ್ಲೇ ಸದ್ದು ಮಾಡಿದ್ದವು. ಬೆಜ್ಜವಳ್ಳಿ,ಕಟ್ಟೆಹಕ್ಲು,ಕುರುವಳ್ಳಿ ಭಾಗಗಳಲ್ಲಿ ಓಡಾಡಿ ಅಪಾರ ಬೆಳೆಹಾನಿ ಸಂಭವಿಸಿದೆ.
ಹರಿಹರಪುರ ಭಾಗದಿಂದ ಶೃಂಗೇರಿ ತಾಲೂಕಿನ ಅಡ್ಡಗದ್ದೆ,ಕಾವಡಿ,ಧರೆಕೊಪ್ಪ ಗ್ರಾ ಪಂ ವ್ಯಾಪ್ತಿಯಲ್ಲಿ ಓಡಾಡಿದ ಕಾಡಾನೆಯು ನಂತರ ಅಣ್ಣುಕೊಡಿಗೆ ಎಸ್ಟೇಟ್ ಮಾರ್ಗವಾಗಿ ಮತ್ತೆ ಕೊಪ್ಪ ತಾಲೂಕಿನ ಕಡೆ ಹೋಗಿದ್ದು ಸದ್ಯ ಎಲ್ಲಿದೆ ಎಂಬ ಸ್ಪಷ್ಟ ಮಾಹಿತಿ ತಿಳಿದಿಲ್ಲ.
ಶೃಂಗೇರಿ ತಾಲೂಕಿನ ಬೇಗಾರು ಗ್ರಾ ಪಂ ವ್ಯಾಪ್ತಿಯ ತಾರೊಳ್ಳಿಕೊಡಿಗೆ ಗ್ರಾಮದಲ್ಲಿ ಕಾಣಿಸಿಕೊಂಡ ಆನೆಯೊಂದು ಆ ಭಾಗದ ಜನರಲ್ಲಿ ಆತಂಕ ಸೃಷ್ಠಿಸಿ,ಅಪಾರ ಬೆಳೆ ನಾಶ ಮಾಡಿ ಹಾಗೆ ಆಗುಂಬೆ ಭಾಗದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಠಿಮಾಡಿದೆ.
ಕಾಡಾನೆಗಳ ಜೊತೆಗೆ ಕಾಡು ಕೋಣಗಳ ಕಾಟ!
ಒಂದೆಡೆ ಕಾಡಾನೆಗಳ ಕಾಟ ವಿಪರೀತವಾಗಿದ್ದರೆ ಇನ್ನೊಂದೆಡೆ ಕಾಡುಕೋಣಗಳ ಹಾವಳಿ ಜಾಸ್ತಿಯಾಗಿದೆ. ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ, ತೀರ್ಥಹಳ್ಳಿ ಸೇರಿದಂತೆ ಕೊಪ್ಪ ತಾಲೂಕಿನಲ್ಲಿ,ಮೂಡಿಗೆರೆ,ಚಿಕ್ಕಮಗಳೂರಿನಲ್ಲಿ ಕಾಡುಕೋಣಗಳ ಹಾವಳಿ ವಿಪರೀವಾಗಿದೆ. ಚಿಕ್ಕಮಗಳೂರಿನ ಮಲ್ಲಂದೂರಿನಲ್ಲಿ ಕಾಫಿತೋಟದಲ್ಲಿ ಕೆಲಸ ಮಾಡುತ್ತಿದ್ದ ಮಾಲೀಕ ಟಿ ಎಮ್ ಸುನಿಲ್ ಕುಮಾರ್ ಎಂಬುವರ ಮೇಲೆ ದಾಳಿ ಮಾಡಿ ಭುಜ ಹಾಗೂ ಭುಜದ ಮೇಲ್ಭಾಗ ದಲ್ಲಿ ಗಂಭೀರ ಗಾಯಗಳಾಗಿದ್ದು,ಸುನಿಲ್ ಕುಮಾರ್‌ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
* ಮಾನವ ಕಾಡುಪ್ರಾಣಿಗಳ ಸಂಘರ್ಷಕ್ಕೆ ಮುಕ್ತಿ ಯಾವಾಗ?
ಮಲೆನಾಡಿನಾದ್ಯಂತ ಶುರುವಾಗಿರುವ ಮಾನವ ಕಾಡುಪ್ರಾಣಿಗಳ ಸಂಘರ್ಷಕ್ಕೆ ಶಾಶ್ವತ ಪರಿಹಾರಕ್ಕಾಗಿ ಎಲ್ಲೆಡೆಯಿಂದ ಒತ್ತಾಯ ಕೇಳಿಬಂದಿದ್ದು,ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯವರು ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಸದ್ಯ ಕಾಡು ಪ್ರಾಣಿಗಳ ಭಯದಿಂದ ಜನ ಮನೆಯಿಂದ ಹೊರಬರಲು ಹೆದರುತ್ತಿದ್ದು ಕೃಷಿ ಚಟುವಟಿಕೆಗಳಿಗೆ ತುಂಬಾ ತೊಂದರೆಯುಂಟಾಗಿದೆ. ಆದಷ್ಟುಬೇಗ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಸರ್ಕಾರ ಮಟ್ಟದಲ್ಲಿ ಚರ್ಚಿಸಿ ಶಾಶ್ವತ ಪರಿಹಾರ ಒದಗಿಸಬೇಕಿದೆ.
