ಬೈಂದೂರಿನಲ್ಲಿ 3 ದಿನ ಹಲಸು ಮೇಳದ ಸಂಭ್ರಮ..!
– ಹೊಸ ಬಗೆಯ ಮಾವು, ಹಲಸು ತಳಿಗಳ ಪ್ರದರ್ಶನ
– ಬೈಂದೂರು ಉತ್ಸವ ಸಮಿತಿ, ರೈತೋತ್ಥಾನ ಬಳಗ, ಸಮಷ್ಠಿ ಪ್ರತಿಷ್ಠಾನ ಮತ್ತು ರೋಟರಿ ಕ್ಲಬ್ ಸಹಯೋಗದೊಂದಿಗೆ ಕಾರ್ಯಕ್ರಮ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್, ಬೈಂದೂರು
ವರದಿ: ಅಣ್ಣಪ್ಪ ಬೈಂದೂರು
ಬೈಂದೂರು: ಬೈಂದೂರಿನಲ್ಲಿ ಜೂನ್ 27,28, 29ರಂದು ಮೂರು ದಿನಗಳ ಕಾಲ ಹಲಸು ಮತ್ತು ಕೃಷಿ ಮೇಳ ನಡೆಯಲಿದೆ. ಈ ಮೇಳಕ್ಕೆ ಈಗಾಗಲೇ ಅಂತಿಮ ಹಂತದ ಸಿದ್ಧತೆ ನಡೆದಿದೆ.
ಬೈಂದೂರು ಉತ್ಸವ ಸಮಿತಿ, ರೈತೋತ್ಥಾನ ಬಳಗ, ಸಮಷ್ಠಿ ಪ್ರತಿಷ್ಠಾನ ಮತ್ತು ರೋಟರಿ ಕ್ಲಬ್ ಗಳ ನೇತೃತ್ವದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ತಾಲ್ಲೂಕಿನ ಇತಿಹಾಸದಲ್ಲೇ ಇದು ಮೊದಲ ಬಾರಿಗೆ ನಡೆಸಲಾಗುತ್ತಿದೆ. ಸಮಸ್ತ ಜನತೆಗೆ ಆಹ್ವಾನ ನೀಡಲಾಗಿದೆ.
ಏನೇನಿದೆ ಕಾರ್ಯಕ್ರಮ?: ಮಾವು ಮತ್ತು ಹಲಸಿನ ವಿವಿಧ ತಳಿಗಳ ಪ್ರದರ್ಶನ, ಹಲಸಿನ ಉತ್ಪನ್ನಗಳ ಮಾರಾಟ, ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರಿಗೆ ಸನ್ಮಾನ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಬೈಂದೂರು ಶಾಸಕರಾದ ಗಂಟಿಹೊಳೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮೇಳದಲ್ಲಿ ಹಲಸು ಮಾವಿನ ಉತ್ಪನ್ನಗಳ ಮಳಿಗೆ, ವಿವಿಧ ತಳಿಗಳ ಹಲಸು ಮತ್ತು ಮಾವಿನ ಗಿಡಗಳ ಮಳಿಗೆ, ಹಣ್ಣಿನ ಮಳಿಗೆ, ಕೃಷಿ ಯಂತ್ರೋಪಕರಣ ಮಳಿಗೆ,
ಗೊಬ್ಬರ ಮಾರಾಟ ಮಳಿಗೆ, ತರಕಾರಿ ಬೀಜಗಳ ಮಳಿಗೆ, ಕರಕುಶಲ ವಸ್ತುಗಳು ಮತ್ತು ಬಟ್ಟೆ ಮಳಿಗೆ ಸೇರಿದಂತೆ ಹಲವು ಬಗೆಯ ಮಳಿಗೆಗಳಲ್ಲಿ ವೈವಿಧ್ಯಮಯ ಪರಿಕರಗಳು ನೋಡಲು, ಖರೀದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಘಟಕರಾದ ಶ್ರೀಧರ ಮರವಂತೆ ಅವರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಕುಂದಾಪುರ, ಬ್ರಹ್ಮಾವರ, ಉಡುಪಿ, ಮಂಗಳೂರು ಸೇರಿ ಹಲವೆಡೆ ಹಲಸು ಮೇಳ ಯಶಸ್ವಿ ಆಗಿದ್ದು, ಬೈಂದೂರಲ್ಲಿ ಮೊದಲ ಬಾರಿಗೆ ನಡೆಯಲಿದೆ. ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮ ಕೂಡ ಸರ್ವರನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದೆ.
