- ತೀರ್ಥಹಳ್ಳಿಯಲ್ಲಿ ಘಟನೆ: ಹಿಗ್ಗಾಮುಗ್ಗಾ ಥಳಿತ
- ಚುನಾವಣಾ ವಿಜಯೋತ್ಸವದ ವೇಳೆ ಕಳ್ಳನ ಆಟ
ತೀರ್ಥಹಳ್ಳಿ: ಮಾಮೂಲಿ ಜನರ ಜೇಬಿಗೆ ಕೈ ಹಾಕಿ ಕಡಿಯೋದು ಮಾಮೂಲಿ. ಆದರೆ ಇಲ್ಲೊಬ್ಬ ಕಳ್ಳ ಶಾಸಕರ ಜೇಬಿಗೆ ಕತ್ತರಿ ಹಾಕಲು ಹೋಗಿ ಇದೀಗ ಆಸ್ಪತ್ರೆಗೆ ಸೇರಿರುವ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಗುರುವಾರ ತೀರ್ಥಹಳ್ಳಿಯ ಟಿಎಪಿಸಿಎಂಎಸ್‍ನ ಚುನಾವಣೆ ಬೆಳಗ್ಗೆಯಿಂದ ಸಂಜೆವರೆಗೆ ನಡೆದಿತ್ತು. ರಾತ್ರಿ ವೇಳೆ ಫಲಿತಾಂಶ ಬಂದಿತ್ತು. ಈ ವೇಳೆ ಬಿಜೆಪಿ ನೇತೃತ್ವದ ಸಹಕಾರ ಭಾರತಿಯ ತಂಡ 10 ಸ್ಥಾನಗಳ ಮೂಲಕ ಗೆಲುವು ಸಾಧಿಸಿತ್ತು. ಈ ವೇಳೆ ಬಿಜೆಪಿ ನಾಯಕರು, ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ವಿಜಯೋತ್ಸವದ ವೇಳೆ ಅಭಿಮಾನಿಗಳು, ಕಾರ್ಯಕರ್ತರು ಶಾಸಕ ಆರಗ ಜ್ಞಾನೇಂದ್ರರನ್ನು ಹೆಗಲ ಮೇಲೆ ಹೊತ್ತು ಕುಣಿಯಲು ಶುರು ಮಾಡಿದರು. ಈ ವೇಳೆ ಕಳ್ಳನೊಬ್ಬ ಶಾಸಕರ ಜೇಬಿಗೆ ಕೈಹಾಕಿ ಹಣ ಕದಿಯಲು ಯತ್ನಿಸಿದ್ದಾನೆ. ಇದನ್ನು ಗಮನಿಸಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕಳ್ಳನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾರೆ. ಬಳಿಕ ಆತನನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.