ಟಾಪ್ ನ್ಯೂಸ್ ಮಲ್ನಾಡ್
ಕೊಪ್ಪದಲ್ಲಿ 9ನೇ ಕ್ಲಾಸ್ ಹುಡುಗಿ ಆತ್ಮಹತ್ಯೆ!!
– ಶಾಲೆಯ ವಸತಿ ನಿಲಯದಲ್ಲಿ ಘಟನೆ: ತನಿಖೆ ಶುರು
– ಸೊರಬ: ಮದುವೆಗೆ ಮುನ್ನ ಗರ್ಭಿಣಿ, ಮಗಳ ಕೊಲೆಗೆ ಯತ್ನಿಸಿದ ತಂದೆ!
– ಹೊಸನಗರ: ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು
– ತೀರ್ಥಹಳ್ಳಿ: 2 ದಿನದ ಬಳಿಕ ಹೆಚ್ಚಾಯ್ತು ಮಳೆ!
NAMMUR EXPRESS NEWS
ಕೊಪ್ಪ: ನೇಣು ಬಿಗಿದುಕೊಂಡು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ನಡೆದಿದೆ. ಕೊಪ್ಪ ತಾಲೂಕಿನ ಬೊಮ್ಮಲಾಪುರದ ಹೊಕ್ಕಳಿಕೆ ಮೂಲದ ವಿದ್ಯಾರ್ಥಿನಿ ಶಮಿತ ಮೃತ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.
ಕೊಪ್ಪದ ಮೊರಾರ್ಜಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಚೂಡಿದಾರ್ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮದುವೆಗೆ ಮುನ್ನ ಗರ್ಭಿಣಿ, ಮಗಳ ಕೊಲೆಗೆ ಯತ್ನಿಸಿದ ತಂದೆ!
ಮದುವೆಗೂ ಮುನ್ನವೇ ಮಗಳು ಗರ್ಭಿಣಿಯಾಗಿದ್ದಾಳೆ ಎಂಬ ವಿಷಯದಲ್ಲಿ ಮರ್ಯಾದೆಗೆ ಅಂಜಿ ಮಗಳನ್ನ ತಂದೆಯೇ ಕೊಲೆ ಮಾಡಲು ಯತ್ನಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉಳವಿ ಗ್ರಾಮದಲ್ಲಿ ನಡೆದಿದೆ.
ಪುತ್ರಿ ಗರ್ಭಿಣಿಯಾದ ವಿಷಯ ವಿಷಯ ತಿಳಿದ ತಂದೆ ಧರ್ಮಾನಾಯ್ಕ ಸಿಟ್ಟಾಗಿದ್ದರು. ಆಸ್ಪತ್ರೆಗೆ ಹೋಗೋಣವೆಂದು ಹೇಳಿ ಪತ್ನಿ ಹಾಗೂ ಮಗಳನ್ನ ಉಳವಿ ಸಮೀಪದ ಕಾನಹಳ್ಳಿ ಬಳಿಯ ಕಣ್ಣೂರು ಅರಣ್ಯ ಪ್ರದೇಶಕ್ಕೆ ಕರೆದೊಯ್ದಿದ್ದರು.ಅರಣ್ಯ ಪ್ರದೇಶದಲ್ಲಿ ಮಗಳ ಕುತ್ತಿಗೆಗೆ ಹಗ್ಗ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಲು ಯತ್ನಿಸಿದ್ದಾರೆ. ಈ ವೇಳೆ ಪತ್ನಿ ಮಗಳನ್ನ ಸಾಯಿಸ ಬೇಡಿ ಎಂದು ಪತಿ ಧರ್ಮನಾಯ್ಕರ ಕಾಲಿಗೆ ಬಿದ್ದಿದ್ದಾರೆ. ಕಾಲಿಗೆ ಬಿದ್ದರೂ ಪತಿ ಒಪ್ಪಿಕೊಳ್ಳಲಿಲ್ಲ. ಈ ವೇಳೆ ಮಗಳು ಪ್ರಜ್ಞೆತಪ್ಪಿ ಬಿದ್ದಿದ್ದಾಳೆ.
ಪ್ರಜ್ಞೆ ತಪ್ಪಿದ ಮಗಳನ್ನ ಸತ್ತಿದ್ದಾಳೆ ಎಂದು ಭಾವಿಸಿ ತಂದೆ ತಾಯಿ ಊರಕಡೆ ಹೊರಟಿದ್ದಾರೆ. ನಂತರ ಪ್ರಜ್ಞೆ ಬಂದ ಯುವತಿ ಕಾಡಿನಿಂದ ರಸ್ತೆಯ ವರೆಗೆ ನಡೆದುಕೊಂಡು ಬಂದು ಸ್ಥಳೀಯರ ಸಹಾಯದಿಂದ ಉಳವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದಾಳೆ. ಅಲ್ಲಿಂದ ಶಿವಮೊಗ್ಗದ ಮೆಗ್ಗಾನ್ ಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ಹೊಸನಗರ: ಹಸುವಿನ ಕೆಚ್ಚಲು ಕೊಯ್ದ ದುಷ್ಕರ್ಮಿಗಳು
ಹೊಸನಗರ ; ವಿಕೃತ ಮನಸ್ಥಿತಿಯ ಪಾಪಿಗಳು ಮೇಯಲು ಬಿಟ್ಟ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತೋಟದಕೊಪ್ಪ ಗ್ರಾಮದ ವಿಜಾಪುರ ಎಂಬಲ್ಲಿ ಶನಿವಾರ ನಡೆದಿದೆ.
ಹಸುವಿನ ಮಾಲೀಕ ನವೀನ್ ಎಂಬುವರು ಹೊಸನಗರ ಠಾಣೆಯಲ್ಲಿ ದೂರು ನೀಡಿದ್ದು, ‘ಎಂದಿನಂತೆ ನಮ್ಮ ದನಗಳನ್ನು ಮೇಯಲು ಬಿಟ್ಟಿದ್ದು ಶನಿವಾರ ಸಂಜೆ 4:30ರ ಸುಮಾರಿಗೆ ಊರಿನ ಜನರು ಫೋನ್ ಕರೆ ಮಾಡಿ, ನಿಮ್ಮ ದನದ ಕೆಚ್ಚಲಿನಲ್ಲಿ ರಕ್ತ ಸೋರುತ್ತಿರುವುದಾಗಿ ವಿಷಯ ತಿಳಿಸಿದ್ದು ತಕ್ಷಣ ಸ್ಥಳಕ್ಕೆ ಧಾವಿಸಿ ನೋಡಿದಾಗ 9 ವರ್ಷ ಪ್ರಾಯದ ಕರು ಹಾಕಿದ ಮಲೆನಾಡು ಗಿಡ್ಡ ತಳಿಯ ನಮ್ಮ ದನದ ಕೆಚ್ಚಲಿನಿಂದ ರಕ್ತ ಸೋರುತ್ತಿರುವುದು ಕಂಡು ಬಂದಿದ್ದು ಯಾರೋ ದನದ ಕೆಚ್ಚಲು ಕೊಯ್ದಿರುವ ಬಗ್ಗೆ ಅನುಮಾನ ಬಂದಿದೆ. ನಂತರ ಗ್ರಾಮಸ್ಥರ ಸಹಾಯದಿಂದ ದನವನ್ನು ಮನೆಗೆ ಕರೆತಂದು ಪಶು ವೈದ್ಯರಿಂದ ಹೊಲಿಗೆ ಹಾಕಿಸಿ ಚಿಕಿತ್ಸೆ ಕೊಡಿಸಿದ್ದೇವೆ’.
ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ. ಈ ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೀರ್ಥಹಳ್ಳಿ: 2 ದಿನದ ಬಳಿಕ ಹೆಚ್ಚಾಯ್ತು ಮಳೆ..!
ಮೂರು ದಿನದ ಬಳಿಕ ತೀರ್ಥಹಳ್ಳಿ ಸೇರಿ ಮಲೆನಾಡಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಶನಿವಾರ ರಾತ್ರಿಯಿಂದ ಮಳೆ ಜೋರಾಗಿದೆ. ಕೊಪ್ಪ, ಶೃಂಗೇರಿ ಭಾಗದಲ್ಲಿ ಕೂಡ ಮಳೆ ಹೆಚ್ಚಾಗಿದೆ.