Categories
ಮಲ್ನಾಡ್ ರಾಜ್ಯ ಶಿವಮೊಗ್ಗ ಸಾಗರ

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮನಿಗೆ ನಾಗರ ಪಂಚೆ: ಚಿಕಿತ್ಸೆ ಫಲಿಸದೇ 2 ವರ್ಷದ ಮಗು ಸಾವು

ಮನೆಯಂಗಳದಲ್ಲಿ ಆಟವಾಡುತ್ತಿದ್ದ ಕಂದಮ್ಮನಿಗೆ ನಾಗರ ಪಂಚೆ: ಚಿಕಿತ್ಸೆ ಫಲಿಸದೇ 2 ವರ್ಷದ ಮಗು ಸಾವು
– ಆಟವಾಡುತ್ತಿದ್ದ ಕಂದಮ್ಮನ ಪಾಲಿಗೆ ಕಂಟಕವಾದ ಹಾವು
– ಪುಟ್ಟ ಜೀವ ಬಲಿ ಪಡೆದ ಘೋರ ದುರಂತ

ಸಾಗರ: ಮನೆಯ ಅಂಗಳದಲ್ಲಿ ನಿಶ್ಚಿಂತೆಯಿಂದ ಆಟವಾಡುತ್ತಿದ್ದ ಎರಡು ವರ್ಷದ ಹಸುಗೂಸಿಗೆ ಹಾವೊಂದು ಕಚ್ಚಿ, ಮಗು ಮೃತಪಟ್ಟಿರುವ ಅತ್ಯಂತ ಕರುಣಾಜನಕ ಘಟನೆ ಸಾಗರ ಪಟ್ಟಣದ ಎಸ್.ಎನ್. ನಗರದಲ್ಲಿ ನಡೆದಿದೆ. ನಗರದ ಎಸ್‌ಎನ್ ನಗರದ ನಿವಾಸಿಗಳಾದ ಅಕ್ಷತಾ ಮತ್ತು ಗಣೇಶ್ ದಂಪತಿಯ ಪುತ್ರ ಭವಿನ್ (2 ವರ್ಷ) ಮೃತಪಟ್ಟ ದುರ್ದೈವಿ. ಅಕ್ಷತಾ ಅವರು ಮಗುವಿನೊಂದಿಗೆ ಸಾಗರದಲ್ಲಿರುವ ತಮ್ಮ ತವರು ಮನೆಗೆ ಬಂದಿದ್ದರು. ಇಂದು ಮಗು ಮನೆಯ ಮುಂಭಾಗದ ಅಂಗಳದಲ್ಲಿ ಆಟವಾಡುತ್ತಿದ್ದಾಗ ಹಠಾತ್ತನೆ ಹಾವು ಕಚ್ಚಿದೆ.

ಮಗು ಜೋರಾಗಿ ಅಳತೊಡಗಿದ್ದನ್ನು ಕೇಳಿಸಿಕೊಂಡ ಕುಟುಂಬಸ್ಥರು ತಕ್ಷಣ ಹೊರಬಂದು ನೋಡಿದಾಗ ಹಾವು ಕಚ್ಚಿರುವುದು ಬೆಳಕಿಗೆ ಬಂದಿದೆ. ತೀವ್ರ ಆತಂಕಕ್ಕೊಳಗಾದ ಪೋಷಕರು ಕೂಡಲೇ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿದರು.ಮಗುವಿನ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಆದರೆ, ವಿಷದ ತೀವ್ರತೆ ಹೆಚ್ಚಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಮಗು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.

ಕಣ್ಣೆದುರೇ ಆಟವಾಡುತ್ತಿದ್ದ ಕಂದಮ್ಮನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ. ಈ ಕುರಿತು ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.