ಅಡಿಕೆ ಫಸಲಲ್ಲಿ ಇಳಿಕೆ: ರೈತರ ಎದೆ ಢವ ಢವ!
– ಹಲವೆಡೆ ಉದುರುತ್ತಿರುವ ಅಡಿಕೆ ಹರಳು
•ಅಡಿಕೆ ಬೆಳೆಗಾರರಲ್ಲಿ ಮೂಡಿದ ಆತಂಕ
– ಮಳೆ ಕಣ್ಣಾ ಮುಚ್ಚಾಲೆ ಆಡಿದ್ರೆ ಅಡಿಕೆಗೆ ಕಂಟಕ!
NAMMUR EXPRESS NEWS
ಮಲೆನಾಡು ಎಂದರೆ ಮೊದಲಿಗೆ ನೆನಪಿಗೆ ಬರುವುದು ಅಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಮಲೆನಾಡಿನಲ್ಲಿ ಅಡಿಕೆ ಫಸಲಲ್ಲಿ ಬಾರಿ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.
ಹಿಂಗಾರ ಒಣಗುವುದು, ಎಳೆ ಅಡಿಕೆ ಫಲ ಕೊಡುವ ಮೊದಲೇ ಬಿದ್ದು ಹೋಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದರಿಂದ ಶೇಕಡ 40ರಷ್ಟು ಫಸಲು ಕಡಿಮೆಯಾಗಿದೆ ಎನ್ನಲಾಗಿದೆ. ಆದರೆ ಫಸಲಿನ ಕೊರತೆಯಿಂದಾಗಿ ದೊರೆತ ಅತ್ಯಲ್ಪ ಅಡಿಕೆಯ ದರದಲ್ಲಿ 480-490ರಷ್ಟು ಏರಿಕೆಯಾಗಿದೆ. ವರ್ಷ ಕಳೆದಂತೆ ಫಸಲು ಕಡಿಮೆಯಾಗುತ್ತಾ ಹೋದರೆ ಮುಂದೇನು ಎಂಬ ಚಿಂತೆ ಅಡಿಕೆ ಬೆಳೆಗಾರರನ್ನು ಕಾಡುತ್ತಿದೆ.
ಪೂರ್ವ ಎಚ್ಚರಿಕೆ ಕ್ರಮವಾಗಿ ಅಡಿಕೆ ಬೆಳೆಗಾರರು ಎಳೆ ಅಡಿಕೆ ಬೀಳುವುದನ್ನು, ಹಿಂಗಾರ ಒಣಗುವುದನ್ನು ತಡೆಗಟ್ಟಲು ಮಾರ್ಚ್ ತಿಂಗಳಿನಿಂದಲೇ ಔಷಧಿಯನ್ನು ಸಿಂಪಡಿಸುತ್ತಾ ಬಂದಿದ್ದರೂ ಕೂಡ ಜೂನ್ ಒಳಗಾಗಿ ಮತ್ತದೇ ಪುನರಾವರ್ತನೆಯಾಗಿರುವುದು ಕಂಡು ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಹೆಚ್ಚಿದ ಬಿರುಬಿಸಿಲು ಮತ್ತು ಕಡಿಮೆ ನೀರಿನ ಪರಿಣಾಮವಾಗಿ ಈ ರೀತಿ ಎಳೆ ಅಡಿಕೆ ಬೀಳುವುದು, ಹಿಂಗಾರು ಒಣಗುತ್ತಿರಬಹುದು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಔಷಧಿಯ ಪರಿಣಾಮವೋ, ಹವಾಮಾನದ ಪ್ರಭಾವವೋ ಅಡಿಕೆಗೆ ಆತಂಕ ಎದುರಾಗಿದೆ. ರೈತರು ಮುಂದೇನು ಎಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ಬಂದಿದೆ.
