ಡಾ.ವಿಷ್ಣುವರ್ಧನ್ ಅಭಿಮಾನ ಕ್ಷೇತ್ರದ ಬ್ಲೂಪ್ರಿಂಟ್ ರಿಲೀಸ್
* ನಟ ಸುದೀಪ್ ನೇತೃತ್ವದಲ್ಲಿ ನಿರ್ಮಾಣಗೊಳ್ಳುತ್ತಿರುವ ಸ್ಮಾರಕ
* ಹೇಗಿರಲಿದೆ ಡಾ.ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ
NAMMMUR EXPRESS NEWS
ಬೆಂಗಳೂರು: ನಟ ಸುದೀಪ್ ಅವರ ನೇತೃತ್ವದಲ್ಲಿ ಕೆಂಗೇರಿ ಸಮೀಪ ನಿರ್ಮಾಣವಾಗಲಿರುವ ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ರವರ ಸ್ಮಾರಕ “ಡಾ.ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ”ದ ಬ್ಲೂಪ್ರಿಂಟ್‌ನ್ನು ಡಾ.ವಿಷ್ಣು ಸೇನಾ ಸಮಿತಿಯ ವೀರಕಪುತ್ರ ಶ್ರೀನಿವಾಸ್ ಬಿಡುಗಡೆಗೊಳಿಸಿದರು.
‘ಡಾ.ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ’ದ ನಿರ್ಮಾಣಕ್ಕೆ ಸುದೀಪ್, ಅಶೋಕ್ ಖೇಣಿ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ, ನೈಸ್ ಸಂಸ್ಥೆಯ ಎಂ.ರುದ್ರೇಶ್ ಹಾಗೂ ಅಭಿಮಾನಿಗಳು ಕೈಜೋಡಿಸಿದ್ದಾರೆ.
ಕಲಾವಿದರೊಬ್ಬರ ಹೆಸರಿನಲ್ಲಿ ಅವರ ಅಭಿಮಾನಿಗಳೇ ನಿರ್ಮಿಸುತ್ತಿರುವ ದೇಶದ ಮೊಟ್ಟ ಮೊದಲ ಅಭಿಮಾನ ಕ್ಷೇತ್ರವಿದಾಗಿದೆ’ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
* ಹೇಗಿರಲಿದೆ ಡಾ.ವಿಷ್ಣುವರ್ಧನ್ ಅಭಿಮಾನ ಕ್ಷೇತ್ರ ?
‘ಜ್ಞಾನ, ಧ್ಯಾನ ಮತ್ತು ದರ್ಶನ’ ಎಂಬ ವಿಷಯವನ್ನಿಟ್ಟುಕೊಂಡು ಈ ಕೇಂದ್ರ ನಿರ್ಮಾಣವಾಗಲಿದ್ದು, ಇಲ್ಲಿ ವಿಷ್ಣುವರ್ಧನ್ ಅವರ 25 ಅಡಿ ಎತ್ತರದ ಅಮೃತ ಶಿಲೆಯ ಪ್ರತಿಮೆಯ ಜೊತೆಗೆ ಧ್ಯಾನ ಮಂದಿರವಿರಲಿದೆ. ಈ ಧ್ಯಾನ ಮಂದಿರದ ವಿಶೇಷತೆ ಏನೆಂದರೆ ಮಧ್ಯಾಹ್ನ ಎರಡು ಗಂಟೆಗೆ ಸೂರ್ಯನ ಕಿರಣಗಳು ಪ್ರತಿಮೆಯ ಮೇಲೆ ಮೂಡುವಂತೆ ಇದನ್ನು ವಿನ್ಯಾಸ ಮಾಡಲಾಗುವುದು.
ಗ್ರಂಥಾಲಯ, ಫೋಟೋ ಗ್ಯಾಲರಿ ಕೂಡ ವಿಶೇಷವಾಗಿ ವಿನ್ಯಾಸಗೊಂಡಿದೆ. ಜೊತೆಗೆ ಪ್ರತಿದಿನ ಸಂಜೆ 6.30ಕ್ಕೆ ಲೇಸರ್ ಶೋ ನಡೆಯುವಂತೆ ವ್ಯವಸ್ಥೆಯನ್ನು ಮಾಡಲಾಗಿದೆ.
ಮುಂದಿನ ಒಂದು ವರ್ಷದಲ್ಲಿ ಈ ಕ್ಷೇತ್ರದ ನಿರ್ಮಾಣ ಮುಗಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುತ್ತಿದ್ದು, ಮುಂಜಾಗ್ರತೆ ಕಾರಣಕ್ಕಾಗಿ ಆ ಜಾಗ ಎಲ್ಲಿದೆ ಎನ್ನುವ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಎಂದು ಶ್ರೀನಿವಾಸ್ ಹೇಳಿದ್ದಾರೆ.