ಅಡಿಕೆ ಕೊಯ್ಲು ಮುಹೂರ್ತಕ್ಕೆ ಸಜ್ಜು..!
– ವಿಜಯದಶಮಿಯಂದು ಬಹುತೇಕ ಕಡೆ ಅಡಿಕೆ ಮುಹೂರ್ತ
– ಮಲೆನಾಡಿನ ರೈತರಲ್ಲಿ ಅಡಿಕೆ ಕೊಯ್ಲಿನ ಖುಷಿ ಆರಂಭ
NAMMUR EXPRESS NEWS
ಮಲೆನಾಡು: ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅಡಿಕೆ ಕೊಯ್ಲಿನ ಸಂಭ್ರಮ ಶುರುವಾಗಲಿದೆ. ವಿಜಯದಶಮಿ ದಿನದಂದು ಮಲೆನಾಡಿನ ಬಹುತೇಕ ಕಡೆಗಳಲ್ಲಿ ಅಡಿಕೆ ಮುಹೂರ್ತದಲ್ಲಿ ರೈತರು ಸಜ್ಜಾಗಿದ್ದಾರೆ. ಇನ್ನೂ ಈಗಾಗಲೇ ಅಡಿಕೆ ಮುಂಬೆಳಸು ಬಂದಿದ್ದು, ಅನೇಕ ಭಾಗಗಳಲ್ಲಿ ಈಗಾಗಲೇ ಅಡಿಕೆ ಕೊಯ್ಲು ಶುರುವಾಗಿದೆ. ಅದರಲ್ಲೂ ಬಯಲು ಸೀಮೆ ಭಾಗದಲ್ಲಿ ಈಗಾಗಲೇ ಒಂದನೇ ಕೊಯ್ಲು ಮುಗಿಯುವ ಹಂತಕ್ಕೆ ಬಂದಿದೆ. ಈಗ ಮಲೆನಾಡಿನಲ್ಲಿ ಅಡಿಕೆ ಕೊಯ್ಲಿನ ಮುಹೂರ್ತ ವಿಜಯ ದಶಮಿ ಎಂದು ನಡೆಯಲಿದ್ದು ಅಡಿಕೆ ಬೆಳೆಗಾರರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.
ಮಲೆನಾಡಿನ ಜೀವನಾಡಿ ಅಡಿಕೆ, ಇಲ್ಲಿನವರ ಬದುಕು ಅಡಿಕೆಯ ಮೇಲೆ ನಿರ್ಧರಿತವಾಗಿದೆ. ಜೊತೆಗೆ ಈ ಬಾರಿ ಅಡಿಕೆಗೆ ಉತ್ತಮ ಬೆಲೆ ಇರುವುದರಿಂದ ಕೃಷಿಕರಲ್ಲಿ ಹೊಸ ಭರವಸೆ ಮೂಡಿಸಿದೆ. ಹಾಗಾಗಿ ಅಡಿಕೆ ಕೊಯ್ಲಿನ ಸಂಭ್ರಮ ಎಲ್ಲೆಡೆ ಕಾಣುತ್ತಿದೆ. ಈಗಾಗಲೇ ಅಡಿಕೆ ಕೊಯ್ಲಿಗೆ ಸಿದ್ಧತೆ ನಡೆಸಿದ್ದು ಮಂಗಳವಾರ ಬಹುತೇಕ ಮುಹೂರ್ತ ಆಗಲಿದೆ.
ಅಡಿಕೆ ಮಿಷನ್ ಡಿಮ್ಯಾಂಡ್..!
ಕಾರ್ಮಿಕರ ಕೊರತೆಯಿಂದಾಗಿ ಅಡಿಕೆ ಮಿಷನ್ ಗಳಿಗೆ ಭರ್ಜರಿ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಮಲೆನಾಡಿನ ತೀರ್ಥಹಳ್ಳಿಯ ಸಂಸ್ಥೆಯಾದ ವಿ.ಟೆಕ್ ಸಂಸ್ಥೆ ಬಹುತೇಕ ಕಡೆ ಅಡಿಕೆ ಮಿಷನ್ಗಳನ್ನ ರೈತರಿಗೆ ರಿಯಾಯಿತಿ ದರದಲ್ಲಿ ಸರಬರಾಜು ಮಾಡುತ್ತಿದೆ. ಇನ್ನೂ ಅಡಿಕೆ ಕೊಯ್ಲಿಗಾಗಿ ರೈತರು ಮನೆ ಹತ್ತಿರ ಚಪ್ಪರ, ಜೊತೆಗೆ ಸಲಕರಣೆಗಳನ್ನು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಅಡಿಕೆ ಕೊಯ್ಲಿನ ಸಂಭ್ರಮ ಎಲ್ಲಾ ಕಡೆ ದಸರಾ ಸಂದರ್ಭದಲ್ಲಿ ಕಾಣುತ್ತಾ ಇದೆ.