Categories
ಮಲ್ನಾಡ್

ಮಲೆನಾಡಿನ ಜೀರಿಗೆ ಮೆಣಸಿಗೆ ಡಿಮ್ಯಾಂಡ್!

ಮಲೆನಾಡಿನ ಜೀರಿಗೆ ಮೆಣಸಿಗೆ ಡಿಮ್ಯಾಂಡ್!
– ಕೆಜಿ ಜೀರಿಗೆ ಮೆಣಸಿಗೆ ಈಗ 1250 ರೂ.
– ಬಾಳೆಹೊನ್ನೂರು, ಕಳಸ, ಶೃಂಗೇರಿ, ಕೊಪ್ಪ, ಜಯಪುರ ಭಾಗದ ಲಾಭದಾಯಕ ಬೆಳೆ

NAMMUR EXPRESS NEWS
ಚಿಕ್ಕಮಗಳೂರು/ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಬೆಳೆಯುವ ಅತಿ ಹೆಚ್ಚು ಖಾರ ಹೊಂದಿರುವ ಜೀರಿಗೆ ಮೆಣಸಿಗೆ (ಗಾಂಧಾರಿ ಮೆಣಸು) ಇದೇ ಮೊದಲ ಬಾರಿಗೆ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಬಂದಿದೆ.
ಕೆ.ಜಿಗೆ 1250 ರೂ. ದಾಖಲೆ ಬಂದಿದ್ದು ಮಲೆನಾಡಲ್ಲಿ ಅಡಿಕೆ ನಂತರ ಅತೀ ಹೆಚ್ಚು ಬೆಲೆ ಬಾಳುವ ಕೃಷಿ ಇದಾಗಿದೆ.
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯ ಬಹುತೇಕ ಮಲೆನಾಡು ಭಾಗದ ಅಡಿಕೆ ತೋಟ, ಮನೆ ಬಳಿ ಈ ಜೀರಿಗೆ ಮೆಣಸು ಸಿಗುತ್ತದೆ.ಇಂಗ್ಲಿಷ್‌ನಲ್ಲಿ ‘ಬರ್ಡ್ ಐ ಚಿಲ್ಲಿ’ ಎಂದು ಕರೆಯಲಾಗುವ ಈ ಮೆಣಸಿಗೆ ಈಗ ಎಲ್ಲಿಲ್ಲದ ಬೇಡಿಕೆ. ಹಪ್ಪಳ, ಉಪ್ಪಿನಕಾಯಿ, ಕಷಾಯ, ಸಾಂಬಾರಿನಲ್ಲಿ ಬಳಸಲಾಗುತ್ತದೆ. ಗರಿಷ್ಠ ಔಷಧ ಗುಣ ಹೊಂದಿರುವ ಈ ಮೆಣಸನ್ನು ಹಣ್ಣಾದಾಗ ಕೊಯ್ದು ಒಣಗಿಸಿ ಮಾರಾಟ ಮಾಡಲಾಗುತ್ತದೆ. ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರದಿಂದಲೂ ಬೇಡಿಕೆ ಇದೆ.

ಈ ಬಾರಿ ಮಳೆ ಕೊರತೆಯಿಂದಾಗಿ ಬೆಳೆ ನಾಶವಾಗಿದ್ದು, ಇಳುವರಿ ಕುಂಠಿತವಾಗಿದೆ. ತೋಟಗಳಲ್ಲಿ ಕಳೆನಾಶಕ ಸಿಂಪಡಣೆ, ಯಂತ್ರಗಳ ಸಹಾಯದಿಂದ ಕಳೆ ತೆಗೆಯುವ ಸಂದರ್ಭದಲ್ಲಿ ಮೆಣಸಿನ ಗಿಡಗಳು ನಾಶವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಳಸ, ಶೃಂಗೇರಿ, ಕೊಪ್ಪ, ಜಯಪುರದ ಮಾರುಕಟ್ಟೆಯಲ್ಲಿ ಈ ಹಿಂದೆ ತಿಂಗಳಿಗೆ ಕ್ವಿಂಟಲ್‌ಗಟ್ಟಲೆ ಸಂಗ್ರಹವಾಗುತ್ತಿದ್ದ ಗಾಂಧಾರಿ ಮೆಣಸು ಈ ವರ್ಷ ಕೆ.ಜಿ. ಲೆಕ್ಕಕ್ಕೆ ಇಳಿದಿದೆ.ಕೊಡಗು ಜಿಲ್ಲೆಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಗಾಂಧಾರಿ ಮೆಣಸು ಬೆಳೆಯಲಾಗುತ್ತದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಾಳೆಹೊನ್ನೂರು ಅತಿ ದೊಡ್ಡ ಮಾರುಕಟ್ಟೆಯಾಗಿದ್ದು ಹಾವೇರಿ, ಸಕಲೇಶಪುರ, ಶಿರಸಿ, ಆಂಧ್ರಪ್ರದೇಶದಿಂದ ವ್ಯಾಪಾರಿಗಳು ಬಂದು ಇಲ್ಲಿಂದ ಮೆಣಸು ಖರೀದಿಸುತ್ತಾರೆ. ಕೇರಳ, ತಮಿಳುನಾಡಿನಿಂದಲೂ ಸಣ್ಣವ್ಯಾಪಾರಿಗಳೂ ಜೀರಿಗೆ ಮೆಣಸು ತಂದು, ಇಲ್ಲಿನ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ.

ಬಾಳೆಹೊನ್ನೂರಿನಿಂದ ವಿವಿಧ ರಾಜ್ಯಗಳಿಗೆ ಹಾಗೂ ರಾಜ್ಯದೊಳಗೆ ವರ್ಷಕ್ಕೆ ಸುಮಾರು 80 ರಿಂದ 90 ಕ್ವಿಂಟಲ್‌ನಷ್ಟು ಜೀರಿಗೆ ಮೆಣಸು ಮಾರಾಟವಾಗುತ್ತದೆ. ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ಈ ಮೆಣಸಿನ ತೀವ್ರ ಕೊರತೆ ಇರುವುದಿಂದ ಬೆಲೆಯಲ್ಲಿ ಏರಿಕೆಯಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.