ಕಸ್ತೂರಿ ರಂಗನ್ ವರದಿ ಮಲೆನಾಡ ಮರಣ ಮೃದಂಗ
– ತೀರ್ಥಹಳ್ಳಿಯಲ್ಲಿ ಬಿಜೆಪಿ ಬೃಹತ್ ಹೋರಾಟ
– ಅರಣ್ಯ ಸಚಿವರನ್ನು ಸಂಪುಟದಿಂದ ಕೈಬಿಡಲು ಪಟ್ಟು
– ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವುದಿಲ್ಲ: ಆರಗ
NAMMUR EXPRESS NEWS
ತೀರ್ಥಹಳ್ಳಿ: ರಾಜ್ಯ ಕಾಂಗ್ರೆಸ್ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಮಲೆನಾಡಿಗರ ಬದುಕಿಗೆ ಮರಣ ಶಾಸನದಂತಿರುವ ಕಸ್ತೂರಿ ರಂಗನ್ ವರದಿ ಜಾರಿಯ ಕುರಿತು ವರದಿ ಜಾರಿಗೊಳಿಸಲು ಪೂರಕವಾದ ಅಭಿಪ್ರಾಯ ವ್ಯಕ್ತ ಪಡಿಸಿರುವುದು ಮಲೆನಾಡಿಗರ ಅದರಲ್ಲೂ ತೀರ್ಥಹಳ್ಳಿ ಜನರ ಬದುಕಿನ ಮೇಲೆ ಮರಣ ಮೃದಂಗ ಭಾರಿಸಿದಂತೆ ಆಗಿದೆ ಎಂದು ಅಗ್ರಹಿಸಿ ತೀರ್ಥಹಳ್ಳಿ ಬಿಜೆಪಿ ತೀರ್ಥಹಳ್ಳಿಯಲ್ಲಿ ಪ್ರತಿಭಟನೆ ನಡೆಸಿತು.
ಲಕ್ಷಾಂತರ ಜನರ ಬದುಕಿಗೆ ಕೊಳ್ಳಿ ಇಡುವಂತಹ ಪ್ರಯತ್ನಕ್ಕೆ ಅರಣ್ಯ ಸಚಿವರು ಕೈ ಹಾಕಿರುವುದು ಖಂಡನೀಯ. ಈ ಕೂಡಲೇ ಮಾನ್ಯ ಮುಖ್ಯಮಂತ್ರಿಗಳು ಸದರಿ ಅರಣ್ಯ ಸಚಿವರನ್ನು ಸಂಪುಟದಿಂದ ವಜಾಗೊಳಿಬೇಕೆಂದು ಆಗ್ರಹಿಸುತ್ತೇವೆ. ಈ ಹಿಂದಿನ ಬಿಜೆಪಿ ಸರ್ಕಾರ ಕಸ್ತೂರಿ ರಂಗನ್ ವರದಿ ಅವೈಜ್ಞಾನಿಕವಾಗಿರುವುದಲ್ಲದೇ ರಾಜ್ಯದ ಕೊಟ್ಯಾಂತರ ಜನರ ಬದುಕು ಬವಣೆಗಳ ಮೇಲೆ ಸವಾರಿ ಮಾಡುವಂತಿದೆ ಎನ್ನುವ ಕಾರಣಕ್ಕಾಗಿಯೇ ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ವರದಿಯನ್ನು ತಿರಸ್ಕರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿಕೊಟ್ಟಿತ್ತು.
ಆದ್ದರಿಂದ ಪ್ರಸ್ತುತ ತಮ್ಮ ರಾಜ್ಯ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಮತ್ತೆ ಈ ವರದಿ ವಿಚಾರದಲ್ಲಿ ತಮ್ಮ ನಿಲುವನ್ನು ಸಡಿಲಗೊಳಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಕೈ ಹಾಕಿದಲ್ಲಿ ಕಸ್ತೂರಿ ರಂಗನ್ ವರದಿಯ ಪರಿಣಾಮ ಎದುರಿಸುವ ಎಲ್ಲಾ ಜಿಲ್ಲೆಗಳ ನಾಗರಿಕರನ್ನು ಸಂಘಟಿಸಿ ಹೋರಾಟವನ್ನು ತೀವ್ರಗೊಳಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗದಂತೆ ಕ್ರಮವಹಿಸಬೇಕು ಎಂದು ಈ ಮೂಲಕ ತಮ್ಮಲ್ಲಿ ತೀರ್ಥಹಳ್ಳಿ ಬಿಜೆಪಿ ನಾಯಕರು ಅಗ್ರಹಿಸಿದರು.
ಪ್ರಮುಖ ನಾಯಕರಾದ ಮದನ್, ಅಶೋಕಮೂರ್ತಿ, ಬೇಗುವಳ್ಳಿ ಸತೀಶ್, ರಾಘವೇಂದ್ರ ಬಾಳೆಬೈಲು, ಸಾಲೆಕೊಪ್ಪ ರಾಮಚಂದ್ರ, ಸೋಮಶೇಖರ್ ಚಂದವಳ್ಳಿ, ರಕ್ಷಿತ್ ಮೇಗರವಳ್ಳಿ, ಡಾಕಮ್ಮ, ಗೀತಾ ಶೆಟ್ಟಿ ಇತರರು ಇದ್ದರು.
ಕಸ್ತೂರಿ ರಂಗನ್ ವರದಿ ಜಾರಿಗೆ ಬಿಡುವುದಿಲ್ಲ: ಆರಗ
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಆರಗ ಜ್ಞಾನೇಂದ್ರ, ಕಸ್ತೂರಿರಂಗನ್ ಒಬ್ಬ ವಿಶ್ವವಿಜ್ಞಾನಿ ಅವರು ಫಾರೆಸ್ಟ್ ವಿಜ್ಞಾನಿ ಅಲ್ಲ. ಯಾವುದೇ ಕಾರಣಕ್ಕೂ ಈ ವರದಿ ಜಾರಿಗೆ ಬಿಡುವುದಿಲ್ಲ. ಜನರಿಗಾಗಿ ಬೀದಿಗೆ ಇಳಿಯುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವನ್ನು ಕೊಡಗಿನಲ್ಲಿ ನಿಮಗೆ ಎರಡಕ್ಕೆ ಎರಡು ಸ್ಥಾನ ಗೆಲ್ಲಿಸಿದ್ದಾರೆ, ಚಿಕ್ಕಮಗಳೂರಿನಲ್ಲಿ ಗೆಲ್ಲಿಸಿದ್ದಾರೆ, ಶಿವಮೊಗ್ಗ ಜಿಲ್ಲೆಯಲ್ಲೂ ಕೂಡ ಕಾಂಗ್ರೆಸ್ ಮೂರು ಗೆದ್ದಿದೆ, ನೀವು ಕಸ್ತೂರಿ ರಂಗನ್ ವರದಿ ಜಾರಿ ಮಾಡುತ್ತೇವೆ ಎಂದು ಹೇಳಿ ಬನ್ನಿ ನೀವು. ಊರಿಗೆ ಸೇರಿಸುವುದಿಲ್ಲ ಜನ. ಏನು ತಿಳಿದುಕೊಂಡಿದ್ದೀರಿ ನೀವು? ಇವತ್ತು ನೂರಾರು ಕುಟುಂಬಗಳು ಹಿಂದೂ ಧರ್ಮದಿಂದ ಮತಾಂತರ ಆಗುತ್ತಿದೆ. ಎಲ್ಲವನ್ನು ಹೇರಿಕೆ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಕಸ್ತೂರಿರಂಗನ್ ವರದಿ ಜಾರಿಗೆ ಬರಬಾರದು ಎಂದರು.
ಇದನ್ನೂ ಓದಿ : ಕಾಳುಮೆಣಸು ಬೆಳೆಗಾರರಿಗೆ ಬಂಪರ್!
HOW TO APPLY : NEET-UG COUNSELLING 2023