ಮಲ್ನಾಡ್ ಟಾಪ್ 3 ನ್ಯೂಸ್
ಶಿವಮೊಗ್ಗ : ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ಯುವಕ ಆತ್ಮಹತ್ಯೆ..!!
– ಶಿವಮೊಗ್ಗ : ವಿದ್ಯುತ್ ಸ್ಪರ್ಶಸಿ ಕಾರ್ಮಿಕ ಸಾವು..!!
– ಸಾಗರ : ಹಣಕಾಸಿನ ವ್ಯವಹಾರಕ್ಕೆ ಮನನೊಂದು ಕಳೆ ನಾಶಕ ಸೇವಿಸಿ ಆತ್ಮಹತ್ಯೆ..!!
NAMMUR EXPRESS NEWS
ಶಿವಮೊಗ್ಗ: ಮೆಗ್ಗಾನ್ ಆಸ್ಪತ್ರೆಯ ಆವರಣದಲ್ಲಿ ನಾಮಫಲಕಕ್ಕೆ ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೇಣಿಗೆ ಶರಣಾದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುರಹೊನ್ನೆಯ ನಿವಾಸಿ ಆಕಾಶ್ (28) ನೇಣಿಗೆ ಶರಣಾಗಿದ್ದಾನೆ. ಆಕಾಶ್ ತಾಯಿಗೆ ಹುಷಾರಿಲ್ಲದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ತಾಯಿಯ ಅರೈಕೆಗಾಗಿ ಆಸ್ಪತ್ರೆಗೆ ಬಂದಿದ್ದ ಆಕಾಶ್ ಒಪಿಡಿಗೆ ಅಡ್ಮಿಷನ್ ಪತ್ರ ಪಡೆಯುವ ಪಕ್ಕದಲ್ಲಿ ಸೂಪರ್ ಸ್ಪೆಷಾಲಿಟಿಗೆ ದಾರಿ ಎಂಬ ನಾಮಫಲಕಕ್ಕೆ ನೇಣು ಬಿಗಿದುಕೊಂಡಿದ್ದಾನೆ. ಆಸ್ಪತ್ರೆ ಮುಂಭಾಗ ಈತ ನೇಣು ಬಿಗಿದುಕೊಳ್ಳುತ್ತಿದ್ದ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಶಿವಮೊಗ್ಗ : ವಿದ್ಯುತ್ ಸ್ಪರ್ಶಸಿ ಕಾರ್ಮಿಕ ಸಾವು..!!
ಶಿವಮೊಗ್ಗ : ವಿದ್ಯುತ್ ಸ್ಪರ್ಶದಿಂದ ಕಾರ್ಮಿಕನೋರ್ವ ಮೃತಪಟ್ಟ ಘಟನೆ, ಶಿವಮೊಗ್ಗ ತಾಲೂಕಿನ ಹೊಳಲೂರು ಗ್ರಾಮದ ಅಡಕೆ ತೋಟವೊಂದರಲ್ಲಿ ನಡೆದಿದೆ. ಹರಮಘಟ್ಟ ಗ್ರಾಮದ ನಿವಾಸಿ ವೆಂಕಟೇಶ್ (45) ಮೃತಪಟ್ಟ ಕಾರ್ಮಿಕ ಎಂದು ಗುರುತಿಸಲಾಗಿದೆ. ವಿದ್ಯುತ್ ಸ್ಪರ್ಶದಿಂದ ಗಂಭೀರ ಸ್ಥಿತಿಯಲ್ಲಿದ್ದ ವೆಂಕಟೇಶ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಕಾರ್ಮಿಕ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಮೃತ ಕಾರ್ಮಿಕನು ತೋಟದಲ್ಲಿ ಅಡಕೆ ಗೊನೆಗಳನ್ನು ಕೊಯ್ಯುವ ವೇಳೆ, ಅಡಕೆ ಕತ್ತರಿಸುವ ಫೈಬರ್ ಕೋಲು ಸಮೀಪದಲ್ಲಿಯೇ ಹಾದು ಹೋಗಿದ್ದ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ಸ್ಪರ್ಶವಾಗಿ ವಿದ್ಯುತ್ ಪ್ರವಹಿಸಿ ದುರಂತ ಸಂಭವಿಸಿದೆ ಎಂದು ಸ್ಥಳೀಯ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.
– ಸಾಗರ : ಹಣಕಾಸಿನ ವ್ಯವಹಾರಕ್ಕೆ ಮನನೊಂದು ಕಳೆ ನಾಶಕ ಸೇವಿಸಿ ಆತ್ಮಹತ್ಯೆ..!!
ಸಾಗರ : ತಾಲೂಕಿನ ಜನ್ನತ್ ನಗರದ ನಿವಾಸಿ ಇಬ್ರಾಹಿಂ (ಬಾಬು), ಸೋಮವಾರ ರಾತ್ರಿ ಕಳೆ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಲಿನ ಸ್ವಾಧಿನ ಕಳೆದುಕೊಂಡಿದ್ದರೂ ತ್ರಿಚಕ್ರ ಸೈಕಲಲ್ಲಿ ಓಡಾಡಿಕೊಂಡು ಇವರು, ಇನ್ನಿತರ ವ್ಯವಹಾರ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಕ್ರೀಯಾಶೀಲವಾಗಿ ಎಲ್ಲರೊಂದಿಗೆ ಆತ್ಮೀಯ ಸಂಬಂಧ ಇಟ್ಟುಕೊಂಡಿದ್ದರು. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕುಟುಂಬದ ಮೂಲಗಳು ಶಂಕೆ ವ್ಯಕ್ತಪಡಿಸಿದೆ. ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.