ಮಲೆನಾಡು ಉಳಿಸಲು “ನಮ್ಮ ಶಿವಮೊಗ್ಗ” ತಂಡ ಮಾಸ್ಟರ್ ಪ್ಲಾನ್!
– ಮಲೆನಾಡನ್ನು ಉಳಿಸಲು, ತುಂಗೆ ಬತ್ತದಂತೆ ಅನೇಕ ಕಾರ್ಯಕ್ರಮ
– ಸಸಿಗಳನ್ನು ನೆಟ್ಟು, ಟ್ರೀ ಗಾರ್ಡ್ ಗಳಿಂದ ಗಿಡ ಸಂರಕ್ಷಣೆ
NAMMUR EXPRESS NEWS
ತೀರ್ಥಹಳ್ಳಿ: ಕಳೆದ ಎರಡು ಮೂರು ವರ್ಷಗಳಿಂದ ಮಲೆನಾಡಿನ ತುಂಗೆಯು ಬೇಸಿಗೆಯಲ್ಲಿ ಬತ್ತಿಹೋಗುತ್ತಿದ್ದಾಳೆ, ಕಾರಣ ಹಲವಾರು. ಆದರೆ ಇದು ಹೀಗೆಯೇ ಮುಂದುವರಿದರೆ ಮಲೆನಾಡು ಅಳಿವಿನ ಅಂಚಿಗೆ ತಲುಪಲು ಹೆಚ್ಚಿನ ವರ್ಷಗಳು ಬೇಡ. ಈ ನಿಟ್ಟಿನಲ್ಲಿ ಎಚ್ಚೆತ್ತುಕೊಂಡ “ನಮ್ಮ ಶಿವಮೊಗ್ಗ” ತಂಡವು ಮಲೆನಾಡನ್ನು ಉಳಿಸಲು, ತುಂಗೆ ಬತ್ತದಂತೆ ನೋಡಿಕೊಳ್ಳಲು ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ.
ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಮಲೆನಾಡಿನ ಕಾಡುಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸಸಿಗಳನ್ನು ನೆಟ್ಟು, ಟ್ರೀ ಗಾರ್ಡ್ ಗಳಿಂದ ಆ ಸಸಿಗಳನ್ನು ಸಂರಕ್ಷಿಸಿ, ಪೋಷಿಸಿ ಬರಿದಾದ ಕಾಡುಗಳನ್ನು ದಟ್ಟ ಅರಣ್ಯವನ್ನಾಗಿಸುವ ಕಾರ್ಯಕ್ಕೆ ಮುನ್ನುಡಿ ಬರೆದಿದೆ.
ಪ್ರತಿ ವರುಷವೂ ಈ ಕಾರ್ಯಕ್ರಮವನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಪಣತೊಟ್ಟಿದೆ. ನಮ್ಮ ಶಿವಮೊಗ್ಗ ತಂಡದ ಗಗನ್ ಕೂಳೂರು, ಶರತ್ ಕೋಣೆಗದ್ದೆ, ಭರತ್ ಕೋಣೆಗದ್ದೆ, ತೇಜಸ್ವಿ ಹೊಳೆಕೊಪ್ಪ, ಯಶಸ್ವಿ ಹೊಳೆಕೊಪ್ಪ ಎಂಬ ಸಮಾನ ಮನಸ್ಕ ಯುವಕರು ಈಗಾಗಲೇ ಈ ಕೆಲಸ ಮಾಡುತ್ತಿದ್ದಾರೆ.
ಜೂ.22ರ ಶನಿವಾರದಂದು ತೀರ್ಥಹಳ್ಳಿ ತಾಲೂಕಿನ ಚಿಪ್ಪಲುಗುಡ್ಡೆ ಮತ್ತು ನವಿಲು ಕಲ್ಲು ಗುಡ್ಡದಲ್ಲಿ ಬೃಹತ್ ಪ್ರಮಾಣದಲ್ಲಿ ಗಿಡಗಳನ್ನು ನೆಟ್ಟು, ಟ್ರೀ ಗಾರ್ಡ್ ಹಾಕುವ ಕಾರ್ಯಕ್ರಮ ಮಾಡಿದ್ದಾರೆ.
ಅಧ್ಯಕ್ಷತೆಯನ್ನು ಹಿರಿಯರೂ, ಮಾರ್ಗದರ್ಶಕರೂ ಆದ ಉಪೇಂದ್ರ ಕೋಣೆಗದ್ದೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ತಾಯಿ ಮನೆಯ ಸಂಸ್ಥಾಪಕರು, ಜೆಸಿಐ ಶಿವಮೊಗ್ಗ ರಾಯಲ್ಸ್ ಅಧ್ಯಕ್ಷರು ಆದ ಜೆಎಫ್ಎಸ್ ಸುದರ್ಶನ್ ತಾಯಿಮನೆ ವಹಿಸಿದ್ದರು, ತೀರ್ಥಹಳ್ಳಿ ಅರಣ್ಯ ಇಲಾಖೆಯ ಆರ್.ಎಫ್.ಓ ಲೋಕೇಶ್ ರವರು, ಡಿ. ಆರ್.ಎಫ್.ಓ ಶಿವಕುಮಾರ್, ಪುನಿತ್ ಹಾಗೂ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು. ಜೆಸಿಐ ಸಂಸ್ಥೆ, ಮೇಳಿಗೆ ಮತ್ತು ಕಟ್ಟೆಹಕ್ಕಲು ಗ್ರಾಮ ಪಂಚಾಯತಿಹಾಗೂ ಇನ್ನಿತರ ಸಂಘ-ಸಂಸ್ಥೆಗಳು ಈ ಸತ್ಕಾರ್ಯಕ್ಕೆ ಕೈಜೋಡಿಸಿದ್ದವು. ಎಲ್ಲರ ಸಹಕಾರದಿಂದ 300ಕ್ಕೂ ಹೆಚ್ಚು ಹೆಮ್ಮರವಾಗಿ ಬೆಳೆಯುವ ಜಾತಿಗೆ ಸೇರಿದ, 25 ವಿವಿಧ ಬಗೆಯ ಗಿಡಗಳನ್ನು ನೆಡಲಾಯಿತು, ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿತು. ಈ ಸಂಘಟನೆ ಮಲೆನಾಡು ಉಳಿಸಲು ಅನೇಕ ಯೋಜನೆ ಹಮ್ಮಿಕೊಂಡಿದ್ದು, ಸರ್ವರ ಸಹಕಾರ ಕೋರಿದೆ.
ನಮ್ಮ ಶಿವಮೊಗ್ಗ ತಂಡದಲ್ಲಿ ಯಾರು ಯಾರು?
ನಮ್ಮ ಶಿವಮೊಗ್ಗ ತಂಡದ ಗಗನ್ ಕೂಳೂರು, ಶರತ್ ಕೋಣೆಗದ್ದೆ, ಭರತ್ ಕೋಣೆಗದ್ದೆ, ತೇಜಸ್ವಿ ಹೊಳೆಕೊಪ್ಪ, ಯಶಸ್ವಿ ಹೊಳೆಕೊಪ್ಪ ಎಂಬ ಸಮಾನ ಮನಸ್ಕ ಯುವಕರು ಈಗಾಗಲೇ ಈ ಕೆಲಸ ಮಾಡುತ್ತಿದ್ದಾರೆ.
