ಹೊಸ ನಗರ ಅಭಿವೃದ್ಧಿ ಕನಸಾಗಿಯೇ ಉಳಿಯಿತು..!
– ಯಾವ ಸರ್ಕಾರ, ಯಾವ ಎಂಎಲ್ಎ ಬಂದರೂ ಪ್ರಯೋಜನವಿಲ್ಲ
– ರಸ್ತೆ ಇಲ್ಲ ಸೇತುವೆ ಇಲ್ಲ, ಉದ್ಯೋಗಾವಕಾಶ ಇಲ್ಲವೇ ಇಲ್ಲ
– ಪ್ರವಾಸೋದ್ಯಮ ಅಭಿವೃದ್ಧಿಗೆ ಯಾವ ಸರ್ಕಾರಕ್ಕೂ ಮನಸ್ಸಿಲ್ಲ
– ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಜನರ ಪಟ್ಟು
NAMMUR EXPRESS NEWS
ಹೊಸನಗರ : ಹೊಸನಗರ ತಾಲೂಕು ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ಪ್ರತಿ ದಿನ ಒಂದಲ್ಲ ಒಂದು ಸಮಸ್ಯೆಯಿಂದ ಜನರು ಬದುಕನ್ನು ಕಳೆದುಕೊಂಡಂತಾಗಿದೆ.
ತಾಲೂಕಿನಲ್ಲಿ ಇತ್ತೀಚಿಗಷ್ಟೇ ಅನೇಕ ದುರಂತಗಳನ್ನು ನಾವು ನೋಡಿದ್ದೇವೆ. ಇದೀಗ ಮತ್ತೊಂದು ದುರಂತ ಹೊಸನಗರದಲ್ಲಿ ಸಂಭವಿಸಿದೆ. ಸೇತುವೆ ಇಲ್ಲದೆ ಊರಿಗೆ ತೆಪ್ಪದಲ್ಲಿ ಹೋಗಿರುವ ಯುವಕ ತೆಪ್ಪ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಜಕೀಯ ನಾಯಕರು, ಸರ್ಕಾರದ ಪ್ರತಿನಿಧಿಗಳು ಇನ್ನಾದರೂ ಬಡವರ ಊರಿಗೆ, ರಾಜ್ಯಕ್ಕೆ ಬೆಳಕು ಕೊಟ್ಟ ಊರಿಗೆ ಬೆಳಕು ನೀಡುವ ಮನಸು ಮಾಡಬೇಕಿದೆ.
ಹೊಸನಗರ ತಾಲೂಕು ಅರ್ಧ ತೀರ್ಥಹಳ್ಳಿ, ಅರ್ಧ ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತದೆ. ಆದರೆ ಯಾವುದೇ ಜನಪ್ರತಿನಿಧಿಗಳು ಕೂಡ ಹೊಸನಗರದ ಅಭಿವೃದ್ಧಿಗೆ ಹೆಚ್ಚು ಮನಸ್ಸು ಮಾಡಿಲ್ಲ. ಇನ್ನು ಜನಪ್ರತಿನಿಧಿಗಳೇ ಇರಲ್ಲಿ ಯಾವುದೇ ಸರ್ಕಾರಗಳು ಬಂದರೂ ಕೂಡ ಹೊಸನಗರದ ಅಭಿವೃದ್ಧಿಗೆ ಮನಸ್ಸು ಮಾಡುತ್ತಿಲ್ಲ.. ಹೊಸನಗರ ಇಡೀ ರಾಜ್ಯಕ್ಕೆ ಬೆಳಕು ಕೊಟ್ಟಂತಹ ತಾಲೂಕು. ಆದರೆ ಇದೀಗ ಅಭಿವೃದ್ಧಿ ವಿಚಾರದಲ್ಲಿ ಕತ್ತಲಲ್ಲಿ ಮುಳುಗಿದೆ. ಹೊಸನಗರ ತಾಲೂಕಿನ ಡ್ಯಾಮ್ ಗಳು ಭರ್ತಿಯಾಗಿ ಇಡೀ ನಾಡಿಗೆ ಬೆಳಕು ನೀಡುತ್ತಿದೆ. ಜೊತೆಗೆ ಗಿರಿ ಶಿಖರಗಳ ಸಿರಿ ಸಮೃದ್ಧಿ ಕೊಡುತ್ತಿದೆ. ಆದರೆ ಭೂಮಿಯನ್ನು ಕಳೆದುಕೊಂಡು ಜನ ಒಂದು ಕಡೆ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಮತ್ತೊಂದು ಕಡೆ ಯಾವುದೇ ಬೆಳೆ ಕೂಡ ಇಲ್ಲಿ ಬರುತ್ತಿಲ್ಲ. ಅಡಿಕೆಗೆ ಎಲೆ ಚುಕ್ಕಿ ರೋಗ, ಶುಂಠಿಗೆ ರೋಗಗಳು ಈ ಭಾಗದಲ್ಲಿ ಹೆಚ್ಚಾಗಿದೆ. ಇದರಿಂದಾಗಿ ಜನರ ಬದುಕು ಕತ್ತಲೆಯಾಗಿದೆ. ಇನ್ನು ಜನ ಸಾಧಾರಣವಾಗಿ ತಮ್ಮ ಬದಕನ್ನು ಸಾಗಿಸಲು ಕೂಡ ಮೂಲಸೌಕರ್ಯಗಳ ಕೊರತೆ ಎದುರಾಗಿದೆ.
ಉದ್ಯೋಗಾವಕಾಶ ಇಲ್ಲ…ಸರ್ಕಾರದ ಬೆಂಬಲ ಇಲ್ಲ..!
ಕೇಂದ್ರ, ರಾಜ್ಯ ಸರ್ಕಾರದ ಯಾವುದೇ ಯೋಜನೆಗಳು ಈ ಭಾಗಕ್ಕೆ ಸಮರ್ಪಕವಾಗಿ ತಲುಪುತ್ತಿಲ್ಲ. ಚುನಾವಣೆಗೆ ನಿಲ್ಲುವ ಅಬ್ಬರದಲ್ಲಿ ರಾಜಕೀಯ ನಾಯಕರು ಪ್ರಚಾರದ ಭಾಷಣವನ್ನು ಮಾಡುತ್ತಾರೆಯೇ ಹೊರತು ಹೊಸನಗರದ ಅಭಿವೃದ್ಧಿಯ ಬಗ್ಗೆ ನಿಜವಾದ ಕಾಳಜಿ ಕಾಣುತ್ತಿಲ್ಲ. ಕಳೆದ ಎರಡು ಮೂರು ದಶಕಗಳಿಂದ ಹೊಸನಗರ ಪ್ರತ್ಯೇಕ ವಿಧಾನಸಭಾ ಕ್ಷೇತ್ರಕ್ಕೆ ಮತ್ತೆ ಕೂಗು ಶುರುವಾಗಿದೆ. ಆದರೂ ಕೂಡ ಜನಪ್ರತಿನಿಧಿಗಳು ಅದನ್ನ ರಾಜಕೀಯವಾಗಿ ತಣ್ಣಗೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಹೊಸನಗರ ತಾಲೂಕಿನಲ್ಲಿ ಯಾವುದೇ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಕೈಗಾರಿಕೆಗಳು, ಕಾರ್ಪೊರೇಟ್ ಸಂಸ್ಥೆಗಳು ಬರುತ್ತಿಲ್ಲ. ಓದಿದ ಈ ಭಾಗದ ಯುವ ಜನತೆ ಬೆಂಗಳೂರು, ಶಿವಮೊಗ್ಗ ಸೇರಿ ಬೇರೆ ಕಡೆ ಬದುಕು ಕಟ್ಟಿ ಕೊಳ್ಳುವ ಅನಿವಾರ್ಯತೆ ಎದುರಾಗಿದೆ.
ಪ್ರವಾಸೋದ್ಯಮ ವಿಶೇಷ ಪ್ಯಾಕೇಜ್ ಘೋಷಣೆಗೆ ಪಟ್ಟು!
ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಲು ಅನೇಕ ಅವಕಾಶಗಳಿದ್ದರೂ ಕೂಡ ಸರ್ಕಾರ ಇಲ್ಲಿ ರಸ್ತೆ, ವಸತಿ, ಮೂಲಭೂತ ಸೌಲಭ್ಯಗಳನ್ನ ನೀಡಿಲ್ಲ. ಕೊಡಚಾದ್ರಿ, ಡ್ಯಾಮ್, ಕುಂಚಿಕಲ್ ಫಾಲ್ಸ್ ಸೇರಿ ಅನೇಕ ಸುಂದರ ತಾಣಗಳಿದ್ದರೂ ಪ್ರವಾಸೋದ್ಯಮ ಕೂಡ ಕುಂಠಿತವಾಗಿ ಸಾಗಿದೆ. ಹೀಗಾಗಿ ಹೊಸ ನಗರಕ್ಕೆ ವಿಶೇಷವಾಗಿ ಪ್ಯಾಕೇಜ್ ನೀಡಬೇಕೆಂಬ ಒತ್ತಾಯ ಹೊಸನಗರ ಭಾಗದ ಜನರಿಂದ ಕೇಳಿ ಬಂದಿದೆ.
ಹೊಸನಗರ ವಿಧಾನಸಭಾ ಕ್ಷೇತ್ರಕ್ಕೆ ಜನರ ಪಟ್ಟು ಹಿಡಿದಿದ್ದಾರೆ.
ಜೊತೆಗೆ ಇಲ್ಲಿನ ವಿದ್ಯಾವಂತ ಯುವ ಜನತೆ ಸಿಡಿದೆಳುವ ದಿನಗಳು ಶೀಘ್ರದಲ್ಲಿ ಬರಲಿದೆ.
ಹೊಸನಗರ ಭಾಗದ ಪ್ರತಿಯೊಬ್ಬರೂ ನಮ್ಮ ಹೊಸನಗರ ಅಭಿವೃದ್ಧಿ. ಅಭಿಯಾನಕ್ಕೆ ಕೈ ಜೋಡಿಸಿ..
