ಕೋಣಂದೂರು ಆಸ್ಪತ್ರೆ ಸಿಬ್ಬಂದಿ ಇಲ್ಲ!.. ಚಿಕಿತ್ಸೆಯೂ ಇಲ್ಲ!
* ಜನರ ಕಣ್ಣೀರಿನಲ್ಲಿ ಮುಳುಗಿಸಿದ ಆಸ್ಪತ್ರೆ ಅವ್ಯವಸ್ಥೆ
* ಜನರ ತೆರಿಗೆ ಕಟ್ಟಡವಾಯಿತು, ಆರೋಗ್ಯ ಸೇವೆ ಮಾಯವಾಯಿತೇ ?
ವರದಿ:ಉಮೇಶ್ ದೇಮ್ಲಾಪುರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕೋಣಂದೂರು ಪಟ್ಟಣ ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿದೆ, ಸಣ್ಣ ಸಣ್ಣ ಹಳ್ಳಿ ಪ್ರದೇಶದಲ್ಲಿ ವಾಸಿಸುವ ಜನರು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಕೋಣಂದೂರು ಸರಕಾರಿ ಆಸ್ಪತ್ರೆಗೆ ಬರುತ್ತಾರೆ, ಜನರಿಗೆ ಆರೋಗ್ಯ ಸೇವೆ ಒದಗಿಸುವ ಸರ್ಕಾರದ ಯೋಜನೆಗಳು ಕೇವಲ ಕಟ್ಟಡವಷ್ಟೇ ಇರುವ ಸ್ಥಿತಿಗೆ ತಲುಪಿವೆ. ಹೊಸದಾಗಿ ನಿರ್ಮಿಸಿರುವ ಕೋಣಂದೂರು ಸರಕಾರಿ ಆಸ್ಪತ್ರೆ ಸಿಬ್ಬಂದಿ ಇಲ್ಲದೆ ಜನರ ಜೀವದ ಭದ್ರತೆಗೆ ಬೆಲೆ ಇಲ್ಲದ ಪರಿಸ್ಥಿತಿಯಾಗಿದೆ. ಈ ಕೋಣಂದೂರು ಸರ್ಕಾರಿ ಆಸ್ಪತ್ರೆಗೆ ದಿನಕ್ಕೆ ನೂರಾರು ಸಂಖ್ಯೆಯಲ್ಲಿ ಜನರು ಅನಾರೋಗ್ಯ ಕಾರಣದಿಂದ ಬರುತ್ತಾರೆ ಆದರೆ ಇಲ್ಲಿನ ಪರಿಸ್ಥಿತಿ ಒಬ್ಬರು ವೈದ್ಯರು, ಮೂರು ಜನ ನರ್ಸ್ ಹಾಗೂ ಇಬ್ಬರು ಸಿಬ್ಬಂದಿಗಳನ್ನು ಮಾತ್ರ ಈ ಆಸ್ಪತ್ರೆ ಹೊಂದಿದೆ.
ವೈದ್ಯರು, ನರ್ಸ್ ಮತ್ತು ತಂತ್ರಜ್ಞಾನ ಸಿಬ್ಬಂದಿಯ ಕೊರತೆಯಿಂದ ರೋಗಿಗಳ ತುರ್ತು ಚಿಕಿತ್ಸೆ ವಿಫಲವಾಗುತ್ತಿದೆ. ಸ್ಥಳೀಯರು ಈ ಸಮಸ್ಯೆಯನ್ನು ಹಲವಾರು ಬಾರಿ ಅಧಿಕಾರಿಗಳ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ. ಆದರೆ ಸದ್ಯದಲ್ಲೇ ವೈದ್ಯರನ್ನು ಹಾಗೂ ಸಿಬ್ಬಂದಿಗಳನ್ನು ನೇಮಕ ಮಾಡುತ್ತೇವೆ ಎಂಬ ಮಾತುಗಳು ಸಂಬಂಧಪಟ್ಟ ಅಧಿಕಾರಿಗಳಿಂದ ಕೇಳಿ ಬರುತ್ತಿದೆ.
ಹೈಟೆಕ್ ಆಸ್ಪತ್ರೆ.. ಆದ್ರೆ ಸೌಲಭ್ಯ ಬರೀ ಭರವಸೆ?!
ಹೊಸದಾಗಿ ನಿರ್ಮಾಣಗೊಂಡ ಕಟ್ಟಡ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಆ ಭವ್ಯವಾದ ಕಟ್ಟಡ ಯಾವಾಗ ಕಾರ್ಯರೂಪಕ್ಕೆ ಬರುತ್ತದೆ ಎಂಬುದು ಆ ಆಸ್ಪತ್ರೆ ಕಟ್ಟಡದಲ್ಲಿ ರಿಬ್ಬನ್ ಕಟ್ ಮಾಡಿ ಫೋಟೋ ತೆಗೆಸಿಕೊಂಡ ರಾಜಕಾರಣಿಗಳಿಗೆ ಗೊತ್ತಿರಬೇಕು. ಆಸ್ಪತ್ರೆಯ ಕಟ್ಟಡವು ಆಕರ್ಷಕವಾಗಿದ್ದರೂ, ಚಿಕಿತ್ಸೆ ಇಲ್ಲದ ಹಿನ್ನೆಲೆಯಲ್ಲಿ ಕೆಲವರನ್ನು ಸಾವಿಗೆ ನೂಕುವ ಪರಿಸ್ಥಿತಿ ಉಂಟಾಗುತ್ತಿದೆ.
ಹೋರಾಟಕ್ಕೆ ಸಿದ್ಧವಾದ ಜನ!
ಜನರ ತೆರಿಗೆ ಹಣದಲ್ಲಿ ನಿರ್ಮಿಸಿರುವ ನೂತನ ಕಟ್ಟಡ ಬೀದಿ ನಾಯಿಗಳ ವಾಸ ಸ್ಥಳವಾಗಿ ನಿರ್ಮಾಣವಾಗುತ್ತಿದೆ, ಜನರ ತೆರಿಗೆ ಹಣಕ್ಕೆ ಬೆಲೆ ಇಲ್ಲವೇ..? ಸಿಬ್ಬಂದಿ ಇಲ್ಲದ ಆಸ್ಪತ್ರೆ ಎಂದರೆ ಕೇವಲ ಕಟ್ಟಡವಲ್ಲ, ಇದು ಜೀವ ಸಂಕಟಕ್ಕೆ ಬಾಗಿಲು ತೆರೆಯುವ ಸಾವಿನ ಜಾಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ಸರ್ಕಾರ ಮತ್ತು ಆರೋಗ್ಯ ಇಲಾಖೆಗೆ ಜನ ತಕ್ಷಣ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಬೇಕು, ತುರ್ತು ಸೇವೆಯನ್ನು ಪ್ರಾರಂಭಿಸಬೇಕು. ಇಲ್ಲದಿದ್ದರೆ, ಹೋರಾಟಕ್ಕೆ ಮುಂದಾಗುತ್ತೇವೆ,ಎಂದು ಸಾರ್ವಜನಿಕರು ನಮ್ಮೂರ್ ಎಕ್ಸ್ ಪ್ರೆಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
