Categories
ಮಲ್ನಾಡ್

ಶಿವಮೊಗ್ಗ : ಸ್ನೇಹಿತರ ನಡುವೆ ಕಲಹ, ಕೊಲೆಯಲ್ಲಿ ಅಂತ್ಯ!

ಮಲ್ನಾಡ್ ಟಾಪ್ 3 ನ್ಯೂಸ್

ಶಿವಮೊಗ್ಗ : ಸ್ನೇಹಿತರ ನಡುವೆ ಕಲಹ, ಕೊಲೆಯಲ್ಲಿ ಅಂತ್ಯ!
– ಶಿಕಾರಿಪುರ : ಬೀಗ ಹಾಕಿದ್ದ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ..!!
– ಎನ್.‌ ಆರ್. ಪುರ: ನಿರ್ಜನ ಪ್ರದೇಶದಲ್ಲಿ ವ್ಯಕ್ತಿ ಆತ್ಮಹತ್ಯೆ..!!

NAMMUR EXPRESS NEWS
ಶಿವಮೊಗ್ಗ : ಸ್ನೇಹಿತರ ನಡುವೆ ಏರ್ಪಟ್ಟ ಕಲಹ ಓರ್ವನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ, ಶಿವಮೊಗ್ಗ ನಗರದ ಹೊರವಲಯ ತ್ಯಾವರಕೊಪ್ಪದಲ್ಲಿ ಏ. 2 ರಂದು ನಡೆದಿದೆ. ದೇವರಾಜ್ (31) ಕೊಲೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ವೆಂಕಟೇಶ್ (36) ಆರೋಪಿಯಾಗಿದ್ದು, ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ವೆಂಕಟೇಶ್ ಹಾಗೂ ಕೊಲೆಗೀಡಾದ ದೇವರಾಜ್ ಸ್ನೇಹಿತರಾಗಿದ್ದಾರೆ. ಇಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆಯಾಗಿದೆ. ಇದು ವಿಕೋಪಕ್ಕೆ ತಿರುಗಿ ಇಬ್ಬರ ನಡುವೆ ಕೈ ಕೈ ಬದಲಾವಣೆಯಾಗಿದೆ. ಈ ವೇಳೆ ವೆಂಕಟೇಶ್ ಗುದ್ದಲಿಯಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡ ದೇವರಾಜ್ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ‌ ಎಂದು ತಿಳಿದುಬಂದಿದೆ. ಘಟನೆ ನಡೆದ ಕೆಲ ಗಂಟೆಗಳಲ್ಲಿಯೇ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

– ಶಿಕಾರಿಪುರ : ಬೀಗ ಹಾಕಿದ್ದ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ..!!

ಶಿಕಾರಿಪುರ : ಶಿಕಾರಿಪುರ ಪಟ್ಟಣದ ಚನ್ನಕೇಶವ ನಗರದಲ್ಲಿ ಬೀಗ ಹಾಕಿದ್ದ ನಾಲ್ಕು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ. ಮೌಲ್ಯದ ನಗನಾಣ್ಯ ಕಳವು ಮಾಡಿ ಪರಾರಿಯಾಗಿರುವ ಘಟನೆ ಕಳೆದ ಸೋಮವಾರ ರಾತ್ರಿ ವೇಳೆ ನಡೆದಿದೆ. ಚನ್ನಕೇಶವ ನಗರದಲ್ಲಿರುವ 15 ನೇ ಕ್ರಾಸ್ ನ ಬಣಕಾರ್, ಮೆಸ್ಕಾಂ ಸಿಬ್ಬಂದಿ ಹಾಲೇಶಪ್ಪ, ಅದೇ ಬಡಾವಣೆಯ 14 ನೇ ಕ್ರಾಸ್ ನಲ್ಲಿರುವ ತಿಪ್ಪೇಶಪ್ಪ ಹಾಗೂ ವೆಂಕಟೇಶ್ ಎಂಬುವರ ಮನೆಯಲ್ಲಿ ಕಳ್ಳತನಗಳು ನಡೆದಿವೆ. ಸದರಿ ಮನೆಯವರ ಕುಟುಂಬದವರು ನಾನಾ ಕೆಲಸಕಾರ್ಯಗಳ ನಿಮಿತ್ತ, ಬಾಗಿಲಿಗೆ ಬೀಗ ಹಾಕಿಕೊಂಡು ಪರ ಊರುಗಳಿಗೆ ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದಿರುವುದನ್ನುಗಮನಿಸಿ ಕಳ್ಳರು ಸರಣಿ ಕಳವು ಕೃತ್ಯ ನಡೆಸಿದ್ದಾರೆ. ನೆರೆಹೊರೆಯವರು ಬೆನ್ನಟ್ಟಿ ಕಳ್ಳರನ್ನು ಹಿಡಿಯಲು ಮಾಡಿದ ಪ್ರಯತ್ನ ಸಫಲವಾಗಿಲ್ಲ. ಎಲ್ಲರೂ ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪಟ್ಟಣ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳಗಳಿಗೆ ಬೆರಳಚ್ಚು, ಶ್ವಾನದಳ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.

– ಎನ್.‌ ಆರ್. ಪುರ: ನಿರ್ಜನ ಪ್ರದೇಶದಲ್ಲಿ ವ್ಯಕ್ತಿ ಆತ್ಮಹತ್ಯೆ..!!

ಎನ್.‌ ಆರ್. ಪುರ: ಚಿಕ್ಕಮಗಳೂರು ಜಿಲ್ಲೆಯ ಎನ್.‌ ಆರ್.‌ ಪುರ ತಾಲೂಕಿನ ಬಾಳೆಹೊನ್ನೂರು ವ್ಯಾಪ್ತಿಯ ಮಾಗುಂಡಿ ಸಮೀಪದ ಜಕಣಕ್ಕಿ-ಕಾರಕಿ ಫಾರೆಸ್ಟ್ ಟೆಂಟ್ ನ ಪಕ್ಕದ ಶೆಡ್ ನಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡು ತಿಂಗಳುಗಳೇ ಕಳೆದಿರುವ ಸಾಧ್ಯತೆ ಇದ್ದು, ಮೃತ ದೇಹ ಕೊಳೆತು ಹುಳವಾಗಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಹಾವೇರಿ ಮೂಲದವನು ಎಂಬ ಮಾಹಿತಿ ಲಭ್ಯವಾಗಿದ್ದು, ಫಾರೆಸ್ಟ್ ಟೆಂಟ್ ಕಳೆದ ಕೆಲವು ತಿಂಗಳುಗಳಿಂದ ಬಳಕೆಯಲ್ಲಿ ಇರಲಿಲ್ಲ ಎಂದು ತಿಳಿದುಬಂದಿದೆ. ಸದ್ಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಬಾಳೆಹೊನ್ನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.