ಮತ್ತೆ ಬಂತು ಅಡಕೆಗೆ ಎಲೆಚುಕ್ಕಿ: ಫಸಲು ನಾಶ ಭೀತಿ..!?
– ಮಳೆ.. ಕೊಳೆ… ರೋಗ… ಮಲೆನಾಡು ರೈತರ ಗೋಳು
– ತೀರ್ಥಹಳ್ಳಿ, ಕೊಪ್ಪ, ಶೃಂಗೇರಿ, ಹೊಸನಗರ ತಾಲೂಕಲ್ಲಿ ಹೆಚ್ಚು
– ಸರ್ಕಾರ, ಇಲಾಖೆ ಏನೂ ಕೆಲಸ ಮಾಡ್ತಿಲ್ಲ: ರೈತರ ಆರೋಪ
NAMMUR EXPRESS NEWS
ಮಲೆನಾಡು: ಮುಂಗಾರು ಮಳೆ ಆರಂಭದ ಕೆಲ ದಿನಗಳಲ್ಲೇ ಮಲೆನಾಡು ಭಾಗದಲ್ಲಿ ವಿವಿಧ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಅಡಕೆಗೆ ಎಲೆಚುಕ್ಕಿ ರೋಗ ಬಾಧೆ ಕಾಣಿಸಿಕೊಂಡಿದೆ. ಅತಿ ಹೆಚ್ಚು ಮಳೆ ಸುರಿಯುವ ಗ್ರಾಮಗಳಲ್ಲಿ ರೋಗಬಾಧೆ ಉಲ್ಬಣದ ಸ್ಥಿತಿಗೆ ತಲುಪುವ ಸಾಧ್ಯತೆ ಗೋಚರಿಸಿದ್ದು, ರೈತರಲ್ಲಿ ವ್ಯಾಪಕ ಆತಂಕ ಮೂಡಿಸಿದೆ.
ಸತತ ನಾಲೈದು ವರ್ಷಗಳಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿಕಾಡುತ್ತಿರುವ ಅಡಕೆ ಎಲೆಚುಕ್ಕಿ ರೋಗಕ್ಕೆ ಸದ್ಯ ಮುಕ್ತಿ ಸಿಗುತ್ತಿಲ್ಲ. ಹಲವು ನಿಯಂತ್ರಣ ಔಷಧ ಬಳಕೆ ನಂತರವೂ ರೋಗ ಮಾತ್ರ ಬಿಟ್ಟೂಬಿಡದೆ ಕಾಡುತ್ತಿದೆ. ಸಸಿಗಳಲ್ಲಿಚುಕ್ಕಿ ರೋಗ ವಿಪರೀತವಾಗಿದ್ದು ಸಾಯುವ ಹಂತ ಮುಟ್ಟಿವೆ.
ಕೃಷಿ, ತೋಟಗಾರಿಕಾ ವಿಜ್ಞಾನಿಗಳ ಸಲಹೆ ಅನ್ವಯ ಎಲೆಚುಕ್ಕಿ ರೋಗ ನಿಯಂತ್ರಣಕ್ಕೆ ರೈತರು ಬಳಸಿದ ಬಹುತೇಕ ಔಷಧ ವಿಫಲವಾದಂತಿದೆ. ಮುಂಗಾರು ಮಳೆ ಅವಧಿಯ ಮಧ್ಯ ಇಲ್ಲವೆ ಕೊನೆ ಹಂತದಲ್ಲಿ ಹೆಚ್ಚಾಗಿ ಗೋಚರಿಸುತ್ತಿದ್ದ ಎಲೆಚುಕ್ಕಿ ರೋಗ ಈ ವರ್ಷ ಆರಂಭದಲ್ಲಿ ಕಂಡುಬಂದಿದೆ. ಅಡಕೆ ಹೆಡಲು ಸಂಪೂರ್ಣ ಚುಕ್ಕಿಮಯವಾಗಿದ್ದು ದೊಡ್ಡ ಮರ, ಸಸಿಗಳಲ್ಲೂರೋಗವಿದೆ. ಮೂರ್ನಾಲ್ಕು ವರ್ಷದ ಹಿಂದೆ ಕಂಡುಬಂದ ಎಲೆಚುಕ್ಕಿ ರೋಗ ನಿಯಂತ್ರಣಗೊಳ್ಳಬಹುದು ಎಂಬ ರೈತರ ನಿರೀಕ್ಷೆ ಬಹುತೇಕ ಹುಸಿ ಆಗಿದೆ. ಬೋರ್ಡೊ ಮಿಶ್ರಣ ಸಿಂಪಡಿಸಿದರೂ ಎಲೆಚುಕ್ಕೆ ರೋಗ ವ್ಯಾಪಕವಾಗಿ ಕಾಣಿಸುತ್ತಿದೆ. ಅಡಕೆ ಎಲೆಚುಕ್ಕಿ ರೋಗ ಇಲ್ಲಿಗೆ 5 ವರ್ಷ ಕಳೆದರೂ ನಿಯಂತ್ರಣಕ್ಕೆ ಬಂದಿಲ್ಲ.
