ಸುಹಾಸ್ ಶೆಟ್ಟಿ ಕೊಲೆಗೆ ವಿದೇಶಿ ಹಣ!
– ರಾಷ್ಟ್ರೀಯ ತನಿಖಾ ದಳದಿಂದ ಬಹಿರಂಗ
– ವಿದೇಶಕ್ಕೂ ಕರಾವಳಿಗೂ ಕೊಲೆ ಕೇಸ್ ನಂಟು
NAMMUR EXPRESS NEWS
ಮಂಗಳೂರು: ಮಂಗಳೂರಿನ ಕಿನ್ನಿಪದವುದಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆಗೆ ಸಂಬಂಧಿಸಿದಂತೆ ಮಾಹಿತಿಯೊಂದು ಹೊರಬಿದ್ದಿದೆ, ಈ ಹಿನ್ನೆಲೆಯಲ್ಲಿ ತನಿಖೆ ಮತ್ತಷ್ಟು ಚುರುಕುಗೊಂಡಿದೆ.
ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಎಂಟು ಜನ ಆರೋಪಿಗಳ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಆರೋಪಿಗಳು ಮತ್ತು ಕೊಲೆಗೆ ನೆರವು ನೀಡಿದ ಕೆಲವು ವಿದೇಶಿಯರು ಮತ್ತು ಸ್ಥಳೀಯರು ನಿಷೇಧಿತ ಸಂಘಟನೆಯಾದ ಪಿಎಫ್ಐ ಜೊತೆ ನಂಟು ಬೆಳೆಸಿದ್ದು, ಕೊಲೆಗೆ ವಿದೇಶ ಮತ್ತು ಸ್ಥಳೀಯರಿಂದ ಹಣದ ನೆರವು ದೊರೆತಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದು, ರಾಷ್ಟ್ರೀಯ ತನಿಖಾ ದಳದ ಡಿವೈಎಸ್ಪಿಯಾದ ಪವನ್ ಕುಮಾರ್ ಅವರ ನೇತೃತ್ವದಲ್ಲಿ ರಾಷ್ಟ್ರೀಯ ತನಿಖಾ ದಳದ ಡಿಜಿ ರಾಹುಲ್ ಮತ್ತು ಎಸ್ ಪಿ ಶಿವಕುಮಾರ್ ಅವರು ಸಂಪೂರ್ಣ ಮಾಹಿತಿ ಕಲೆ ಹಾಕಲು ಮುಂದಾಗಿದ್ದಾರೆ. ಈಗಾಗಲೇ ಆರೋಪಿಗಳು ವಿದೇಶಿ ಮತ್ತು ಸ್ಥಳೀಯರಾದ ಕೆಲವರ ಹೆಸರುಗಳನ್ನು ಬಹಿರಂಗಪಡಿಸಿದ್ದು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಅವರನ್ನು ಬಂಧನಕ್ಕೆ ಒಳಪಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.