Categories
ತೀರ್ಥಹಳ್ಳಿ ಮಲ್ನಾಡ್

ಅಯ್ಯೋ… ನೀರಿಲ್ಲ ದೇವ್ರೇ..!

ಅಯ್ಯೋ… ನೀರಿಲ್ಲ ದೇವ್ರೇ..!
– ಬರಿದಾದ ತುಂಗೆ ಒಡಲು…!
– ಮಳೆಯೂರಲ್ಲೆ ಬರಗಾಲ: ಪಾತಾಳಕ್ಕಿಳಿದ ಅಂತರ್ಜಲ!
– ಅಪಾಯದ ಅಂಚಿನತ್ತ ಮಲೆನಾಡಿಗರು

NAMMUR EXPRESS NEWS
ತಿರ್ಥಹಳ್ಳಿ: ಮಲೆನಾಡಿನಲ್ಲಿ ಕಳೆದ ಬಾರಿ ಮಳೆ ಕೊರತೆಯ ಕಾರಣ ಅಂತರ್ಜಲ ಪಾತಾಳಕ್ಕೆ ಇಳಿದಿದ್ದು, ಕುಡಿಯುವ ನೀರಿಗೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಅಡಿಕೆ ತೋಟಗಳು ನೀರಿಲ್ಲದೆ ಒಣಗುತ್ತಿವೆ. ನದಿ, ಹಳ್ಳಗಳು, ಕೆರೆಗಳು ನೀರಿಲ್ಲದೆ ಜನ ಜಾನುವಾರುಗಳಿಗೆ ನೀರಿಲ್ಲದಂತಾಗಿದೆ. ಗ್ರಾಮಗಳಿಗೆ ಕುಡಿಯುವ ನೀರು ಪೂರೈಸಲು ಆಯಾ ಪಂಚಾಯಿತಿಗಳು 716 ಕೊಳವೆ ಬಾವಿಗಳನ್ನು ಅವಲಂಬಿಸಿವೆ. ಬೇಸಿಗೆ ಆರಂಭದಲ್ಲಿಯೇ 285 ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು, 431ರಲ್ಲಿ ನೀರು ಇದೆ.

ಬತ್ತಿ ಹೋದ ನದಿಗಳು..!

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹರಿದಿರುವ ತುಂಗಾ, ಮಾಲತಿ, ಕುಶಾವತಿ ನದಿಗಳು ಬಹುತೇಕ ಬತ್ತಿವೆ. ಮುಂಬರುವ ದಿನಗಳಲ್ಲಿ ನೀರಿನ ಅಭಾವ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಕಳೆದ ವರ್ಷ ಶೇಕಡ 53ರಷ್ಟು ವಾಡಿಕೆ ಮಳೆ ಸುರಿದಿದ್ದು, ಜನವರಿ ತಿಂಗಳ ಆರಂಭದಲ್ಲೇ ನೀರಿಗೆ ಅಭಾವ ಸೃಷ್ಟಿಯಾಗಿದೆ.

ಸಾವಿರ ಅಡಿ ಕೊರೆದರೂ ಬೋರ್ ನೀರು ಬರಲಿಲ್ಲ..!

ಸಾವಿರ ಅಡಿ ಆಳದವರೆಗೂ ಕೊಳವೆ ಬಾವಿ ಕೊರೆದರೂ ನೀರಿನ ಪಸೆ ಪತ್ತೆಯಾಗುತ್ತಿಲ್ಲ. ಹಲವೆಡೆ ಕಳೆದ ಬೇಸಿಗೆಯಲ್ಲಿ ಭರಪೂರ ನೀರು ನೀಡಿದ್ದ ಕೊಳವೆಬಾವಿಗಳು ಬತ್ತಿವೆ. ಗ್ರಾಮೀಣ ಭಾಗದ ಜನರು ಚಿಂತೆಗೀಡಾಗಿದ್ದಾರೆ. ತಾಲ್ಲೂಕಿನ 87 ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಇದೆ. ನೆರಟೂರು, ನೊಣಬೂರು, ಮೇಲಿನ ಕುರುವಳ್ಳಿ, ಹಣಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗಿಲ್ಲ ಎಂದು ಸರ್ಕಾರಕ್ಕೆ ತಾಲ್ಲೂಕು ಆಡಳಿತದಿಂದ ವರದಿ ಸಲ್ಲಿಕೆಯಾಗಿದೆ.

ದಕ್ಷಿಣದ ಚಿರಾಪುಂಜಿಯಲ್ಲೇ ಮಳೆಯಿಲ್ಲ!

ಅಕೇಶಿಯಾ ನೆಡುತೋಪು, ಮಿತಿಮೀರಿದ ಮರಳು ಸಾಗಣೆ, ತರಿ ಭೂಮಿ ಪರಿವರ್ತನೆ, ಹೆಚ್ಚಿದ ಅಡಿಕೆ ತೋಟ, ಜೀವ ವೈವಿಧ್ಯತೆ ನಾಶ, ಕಣ್ಮರೆಯಾದ ಬಿದಿರು, ಪರಿಸರ ಅಸಮತೋಲನ, ಮಾನವ ಹಸ್ತಕ್ಷೇಪ, ಅಭಿವೃದ್ಧಿ ಮುಂತಾದ ಕಾರಣಗಳಿಂದ ‘ದಕ್ಷಿಣದ ಚಿರಾಪುಂಜಿ’ ಎಂಬ ಖ್ಯಾತಿ ಪಡೆದಿದ್ದ ಆಗುಂಬೆಯ ಪರಿಸರದಲ್ಲೇ ಮಳೆಯ ಪ್ರಮಾಣ ಕಡಿಮೆಯಾಗಿ, ಕುಡಿಯುವ ನೀರಿಗೆ ತತ್ವಾರ ಉಂಟಾಗಿದೆ.

ಬಿದರಗೋಡು, ಆಗುಂಬೆ, ಹೊನ್ನೇತ್ತಾಳು, ನಾಲೂರು, ಮೇಗರವಳ್ಳಿ, ಅರೇಹಳ್ಳಿ, ಹೊಸಹಳ್ಳಿ, ತೀರ್ಥಮುತ್ತೂರು, ಹೆಗ್ಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳಲ್ಲಿ ನೀರಿಗೆ ತೀವ್ರ ಅಭಾವ ಉಂಟಾಗಿದೆ. ತುಂಗಾ, ಮಾಲತಿ ನದಿಗಳಲ್ಲಿ ನೀರಿನ ಹರಿವು ಸ್ಥಗಿತವಾಗಿರುವುದರಿಂದ ಸ್ಥಳೀಯರ ಆತಂಕ ಬಿಗಡಾಯಿಸುವಂತೆ ಮಾಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.