– ಶಿಕಾರಿಪುರ: ಬಸ್‌ನಿಂದ ಇಳಿಯುವಾಗ ಆಯತಪ್ಪಿ ಬಿದ್ದು ವಿದ್ಯಾರ್ಥಿ ಸಾವು !
– ಮೂಡಿಗೆರೆ: 30 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು!
– ಶಿವಮೊಗ್ಗ: ಸ್ವಿಫ್ಟ್ ಕಾರು , ಅಡಕೆಗೆ ಬೆಂಕಿ!
– ಹೊಸನಗರ: ಪ್ಲಾಂಟೇಷನ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
– ಭದ್ರಾವತಿ: ಈಜಲು ಹೋಗಿ ಮೃತಪಟ್ಟ ವಿದ್ಯಾರ್ಥಿ
– ಭದ್ರಾ ನದಿ, ನಾಲೆ ಸುತ್ತಮುತ್ತ 144 ಸೆಕ್ಷನ್ ನಿಷೇಧಾಜ್ಞೆ
NAMMUR EXPRESS NEWS
ಶಿಕಾರಿಪುರ : ಬಸ್‌ನಿಂದ ಇಳಿಯುವಾಗ ಆಯತಪ್ಪಿ ಬಿದ್ದು ಎಸ್‌ಎಸ್‌ಎಲ್ಸಿ ವಿದ್ಯಾರ್ಥಿ ಸಾವನ್ನಪ್ಪಿದ ಘಟನೆ ತಾಲೂಕಿನ ಸಿದ್ದನಪುರ ಗ್ರಾಮದಲ್ಲಿ ನಡೆದಿದೆ. ಆದಿತ್ಯ (15) ಮೃತ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಶಿಕಾರಿಪುರದ ಮೈತ್ರಿ ಶಾಲೆಯಲ್ಲಿ ಓದುತ್ತಿದ್ದ ಆದಿತ್ಯ ಭಾನುವಾರ ಶಿಕಾರಿಪುರಕ್ಕೆ ಬಂದಿದ್ದು, ಸಂಜೆ ಊರಿಗೆ ಮರಳುವಾಗ ಘಟನೆ ನಡೆದಿದೆ. ಬಸ್ ನಿಲ್ದಾಣ ಬರುತ್ತಿದ್ದಂತೆ ಆದಿತ್ಯ ಬಾಗಿಲ ಬಳಿ ಬಂದಿದ್ದಾನೆ. ಈ ವೇಳೆ ಬಸ್‌ನಲ್ಲಿದ್ದ ಶುಂಠಿ ಚೀಲಕ್ಕೆ ಎಡವಿ ಚಲಿಸುತ್ತಿದ್ದ ಬಸ್‌ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ವಿಠಲ ನಗರ ಗ್ರಾಮದ ಅಜ್ಜ ನಾಗಪ್ಪನವರ ಮನೆಯಲ್ಲಿದ್ದ ಆದಿತ್ಯ ಶಿಕಾರಿಪುರ ಶಾಲೆಗೆ ಹೋಗುತ್ತಿದ್ದ. ತಂದೆ, ತಾಯಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಆದಿತ್ಯ ಸಾವಿಗೆ ಗ್ರಾಮಸ್ಥರು, ವಿದ್ಯಾರ್ಥಿಗಳು, ಶಿಕ್ಷಕರು ತೀವ್ರ ಸಂತಾಪ ಸೂಚಿಸಿದ್ದಾರೆ.
30 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು!
ಮೂಡಿಗೆರೆ : ಚಾಲಕನ ನಿಯಂತ್ರಣ ತಪ್ಪಿ ಕಾರುವೊಂದು 30 ಅಡಿ ಆಳದ ಕಂದಕಕ್ಕೆ ಪಲ್ಟಿ ಹೊಡೆದ ಘಟನೆ ಚಾರ್ಮಾಡಿ ಘಾಟ್‌ನ ಮಲಯಮಾರುತ ಸಮೀಪದಲ್ಲಿ ನಡೆದಿದೆ. ಮೇಲಿಂದ ಬಿದ್ದ ರಭಸಕ್ಕೆ ಕಾರು ಸಂಪೂರ್ಣ ನಜ್ಜು- ಗುಜ್ಜಾಗಿದೆ. ಕಾರಿನಲ್ಲಿದ್ದವರಿಗೆ ಸಣ್ಣ-ಪುಟ್ಟ ಗಾಯವಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರು ಮಂದಿ ಪ್ರವಾಸಿಗರು ಚಿತ್ರದುರ್ಗದಿಂದ ಧರ್ಮಸ್ಥಳಕ್ಕೆ ಹೊರಟ್ಟಿದ್ದರು. ಈ ವೇಳೆ ತಡೆಗೋಡೆ ಇಲ್ಲದ ಕಾರಣಕ್ಕೆ ತಿರುವಿನಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದ. ಹೀಗಾಗಿ ಏಕಾಏಕಿ ಕಾರು ಕಂದಕ್ಕೆ ಬಿದ್ದಿತ್ತು. ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಂದಕ್ಕೆ ಬಿದ್ದಿದ್ದ ಕಾರನ್ನು ಮೇಲೆತ್ತುವ ಕೆಲಸವನ್ನು ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಬೆಂಕಿ ಅನಾಹುತ: ಸ್ವಿಫ್ಟ್ ಕಾರು , ಅಡಕೆಗೆ ಬೆಂಕಿ!
ಹುಂಡೈ ಶೋರೂಂನಲ್ಲಿ ಬೆಂಕಿ ಕಾಣಿಸಿದ ಘಟನೆ ಬೆನ್ನಲ್ಲೆ ಶಿವಮೊಗ್ಗದ ಮತ್ತೂರು ಮತ್ತೊಂದು ಅಗ್ನಿ ಆಕಸ್ಮಿಕದ ಘಟನೆ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಸ್ಥಳೀಯ ಗೋಡೌನ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಬೆಲೆ ಬಾಳುವ ವಸ್ತುಗಳು ಸುಟ್ಟುಹೋಗಿವೆ. ಇಲ್ಲಿನ ನಿವಾಸಿ ಬಾಬಯ್ಯ ಎಂಬುವರಿಗೆ ಸೇರಿ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಪರಿಣಾಮ ಅಲ್ಲಿ ನಿಲ್ಲಿಸಿದ್ದ ಸ್ವಿಫ್ಟ್ ಕಾರು, ಅಡಿಕೆ ಚೀಲಗಳು ಮತ್ತು ತೆಂಗಿನ ಕಾಯಿಗಳು ಬೆಂಕಿಗೆ ಆಹುತಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೀಗಾಗಿದೆ ಎಂದು ಹೇಳಲಾಗುತ್ತಿದೆ. ಘಟನೆ ಬೆನ್ನಲ್ಲೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸದ್ಯ ಈ ಸಂಬಂಧ ತುಂಗಾನಗರ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.
ಪ್ಲಾಂಟೇಷನ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ
ಹೊಸನಗರ ಪಟ್ಟಣದ ಮಾವಿನಕೊಪ್ಪ ನಿವಾಸಿ 45 ರ ಹರೆಯದ ಕಾರ್ಪೆಂಟರ್ ವೃತ್ತಿ ಮಾಡುವ ರಾಘವೇಂದ್ರ ಆಚಾರ್ ಮಧ್ಯಾಹ್ನ ಸಾಗರ ರಸ್ತೆಯ ಕಳೂರು ಗ್ರಾಮದ ಅಕೇಶಿಯ ಪ್ಲಾಂಟೇಶನ್ ನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಮೃತ ರಾಘವೇಂದ್ರ ಉತ್ತಮ ಮರಗೆಲಸ ಮಾಡುತ್ತಿದ್ದು ವಿವಾಹಿತನಾಗಿದ್ದು ಪತ್ನಿ ಇಬ್ಬರು ಪುತ್ರಿಯರನ್ನು ಅಪಾರ ಬಂಧು ಬಳಗದವರನ್ನು ಹೊಂದಿದ್ದು ಆತನು ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ತಾನು ಜೀವನದಲ್ಲಿ ಜಿಗುಪ್ಪೆ ಹೊಂದಿದ್ದು ನನ್ನ ಸಾವಿಗೆ ನಾನೇ ಕಾರಣ ನನ್ನ ದೇಹವನ್ನು ಯಾವು ದಾದರೂ ಆಸ್ಪತ್ರೆಗೆ ದಾನ ಮಾಡಿ ಎಂದು ಬರೆದಿಟ್ಟಿರುವುದಾಗಿ ತಿಳಿದು ಬಂದಿದೆ. ಹೊಸನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ಕ್ರಮ ಜರುಗಿಸಿ ಮುಂದಿನ ತನಿಖೆ ಕ್ರಮ ಕೈಗೊಂಡಿದ್ದಾರೆ.
ಭದ್ರಾ ಜಲಾಶಯದಲ್ಲಿ ಮುಳುಗಿ ವಿವಿಯ ವಿದ್ಯಾರ್ಥಿ ಸಾವು
ಶಂಕರಘಟ್ಟ : ಕುವೆಂಪು ವಿವಿಯ ಟೂರಿಸಂ ವಿಭಾಗದಲ್ಲಿ ದ್ವಿತೀಯ ವರ್ಷದಲ್ಲಿ ಓದುತಿದ್ದ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಭದ್ರಾವತಿ ಮೂಲದ ವಿದ್ಯಾರ್ಥಿ ರಾಕೇಶ್ (23) ಭಾನುವಾರ ರಜೆ ಇದ್ದದ್ದರಿಂದ ಸ್ನೇಹಿತರೊಂದಿಗೆ ಈಜಲು ತೆರಳಿದ ಸಂದರ್ಭದಲ್ಲಿ ಭದ್ರ ಅಣೆಕಟ್ಟಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಘಟನೆ ಮಧ್ಯಾಹ್ನ ಸುಮಾರು 2 ಗಂಟೆಗೆ ನಡೆದಿದ್ದು, ಸಂಜೆ 6 ಗಂಟೆಗೆ ಮೃತದೇಹವನ್ನು ಅಗ್ನಿಶಾಮಕ ಸಿಬ್ಬಂದಿಗಳ ಸಹಾಯದಿಂದ ಮೇಲಕ್ಕೆತ್ತಲಾಗಿದೆ. ಬಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾ ನದಿ, ನಾಲೆ ಸುತ್ತಮುತ್ತ 144 ಸೆಕ್ಷನ್ ನಿಷೇಧಾಜ್ಞೆಭದ್ರಾ ನದಿ ಮತ್ತು ನಾಲೆಗಳ ವ್ಯಾಪ್ತಿಯಲ್ಲಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ನದಿ ಮತ್ತು ನಾಲೆ ಸುತ್ತಮುತ್ತ 100 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಲಾಗಿದೆ. ಫೆ.26ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಹಾವೇರಿ ಮತ್ತು ಗದಗ ನಗರದ ಕುಡಿಯುವ ನೀರಿಗಾಗಿ ಫೆ.5ರಿಂದ ಭದ್ರಾ ಜಲಾಶಯದಿಂದ ನೀರು ಹರಿಸಲಾಗುತ್ತದೆ. ಆದರೆ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕರೆ ಮಾಡಿ ನೀರು ತಲುಪಿಲ್ಲ ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ತಿಳಿಸಿದ್ದಾರೆ.
ನದಿ ಪಾತ್ರದಲ್ಲಿ 20 ಸಾವಿರಕ್ಕೂ ಹೆಚ್ಚು ಪಂಪ್‌ಸೆಟ್‌ಗಳನ್ನು ಹಾಕಿ ನೀರೆತ್ತಲಾಗುತ್ತಿದೆ. ಕೆಲವು ಕಡೆ ನದಿಗೆ ಅಡ್ಡಲಾಗಿ ಅನಧಿಕೃತವಾಗಿ ಮಣ್ಣಿನ ಏರಿ ನಿರ್ಮಿಸಿ ನೀರೆತ್ತಲಾಗುತ್ತದೆ. ಆದ್ದರಿಂದ ಹೊಳೆಯ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ಭದ್ರಾ ನದಿ ಮತ್ತು ಕಾಲುವೆಯಿಂದ ಅನಧಿಕೃತವಾಗಿ ಪಂಪ್‌ಸೆಟ್ ಬಳಸಿ ಹೊಲಕ್ಕೆ ನೀರು ಹಾಯಿಸುವುದು ನಿಷೇಧಿಸಲಾಗಿದೆ. ನದಿ ಮತ್ತು ಕಾಲುವೆ ಬಳಿ ಐದಕ್ಕಿಂತಲು ಹೆಚ್ಚು ಜನ ಗುಂಪು ಸೇರುವಂತ್ತಿಲ್ಲ. ನಿಷೇಧಾಜ್ಞೆ ವಿಧಿಸಿದ ಪ್ರದೇಶದಲ್ಲಿ ಘೋಷಣೆ ಕೂಗುವುದು, ಮಾರಕಾಸ್ತ್ರ ಹಿಡಿದು ಓಡಾಡುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.