– ಹೊಸನಗರ: ಕೋಳಿ ಪಡೆ ನಡೆಸುತ್ತಿದ್ದವರ ಮೇಲೆ ಪೊಲೀಸರ ದಾಳಿ !
– ಚಿಕ್ಕಮಗಳೂರು : ಹುಲಿ ಅಂಗಾಂಗ ಮಾರಾಟ ಯತ್ನ, ಇಬ್ಬರ ಬಂಧನ
– ಶಿವಮೊಗ್ಗ : ಮಾದಕ ವಸ್ತು ಗಾಂಜಾ ಮಾರಾಟ; 4 ಕೆಜಿ 470 ಗ್ರಾಂ ಗಾಂಜಾ ವಶ
– ಭದ್ರಾವತಿ : ಭದ್ರಾವತಿ ಬಾಲಕಿಗೆ ದಾವಣಗೆರೆ ಯುವಕನ ಕಿರುಕುಳ!
NAMMUR EXPRESS NEWS
ಹೊಸನಗರ: ಖಚಿತ ಮಾಹಿತಿ ಮೇರೆಗೆ ಸೋಮವಾರ ಸಂಜೆ ವೇಳೆಗೆ ತಾಲೂಕಿನ ಬಟ್ಟೆಮಲ್ಲಪ್ಪ ಸಮೀಪದ ನೀರೇರಿ ಗ್ರಾಮದ ಅಕೇಶಿಯಾ ಪ್ಲಾಂಟೇಷನ್‌ನಲ್ಲಿ ಅಕ್ರಮವಾಗಿ ಕೋಳಿ ಹುಂಜಗಳನ್ನು ಪಣಕ್ಕಿಟ್ಟು ಜೂಜಾಟವಾಡುತ್ತಿದ್ದ ತಂಡದ ಮೇಲೆ ದಾಳಿ ನಡೆಸಿದ ಪೊಲೀಸರು 11,170 ರೂ. ಹಣವನ್ನು ವಶಕ್ಕೆ ಪಡೆದು, 08 ಮಂದಿ ಆರೋಪಿಗಳು ಸಹಿತ ನಾಲ್ಕು ಕೋಳಿ ಹುಂಜ, ಎರಡು ಕತ್ತಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಸಂಬಂಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಲಿ ಅಂಗಾಂಗ ಮಾರಾಟ ಯತ್ನ, ಇಬ್ಬರ ಬಂಧನ
ಚಿಕ್ಕಮಗಳೂರು : ಹುಲಿ ಅಂಗಾಂಗ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಚಿಕ್ಕಮಗಳೂರು ವಲಯದ ಮತ್ತಾವರ ಬಳಿ ಹುಲಿ ತಲೆ, ನಾಲ್ಕು ಉಗುರು, ಎರಡು ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ವಿಚಾರ ತಿಳಿದು ಡಿಎಫ್‌ಒ ರಮೇಶ್ ಬಾಬು ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದಾರೆ. ಈ ವೇಳೆ, ಹುಲಿ ಅಂಗಾಂಗ ಮಾರಾಟ ಮಾಡಲು ಮುಂದಾಗಿದ್ದ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದ ಸತೀಶ್, ಚಂದ್ರೇಗೌಡ ಎಂಬುವರನ್ನು ಬಂಧಿಸಿದ್ದಾರೆ. ಮೂಡಿಗೆರೆ ಅರಣ್ಯ ಇಲಾಖೆಯ ಕಚೇರಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಂದ ಹುಲಿ ತಲೆ, ಹುಲಿ ಉಗುರು, ಹಲ್ಲು, ಬೈಕ್ ಸೇರಿದಂತೆ ನಾಲ್ಕು ಮೊಬೈಲ್ಗಳನ್ನ ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಈ ಹಿಂದೆಯೂ ಹುಲಿ ಅಂಗಾಂಗ ಮಾರಾಟ ಮಾಡುವಾಗ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದರು.
ಮಾದಕ ವಸ್ತು ಗಾಂಜಾ ಮಾರಾಟದ 4 ಕೆಜಿ 470 ಗ್ರಾಂ ಗಾಂಜಾ ವಶ
ಶಿವಮೊಗ್ಗ: ಮಾದಕ ವಸ್ತು ಗಾಂಜಾ ಮಾರಾಟದ ವಿರುದ್ಧ ಸೆನ್ ಪೊಲೀಸರ ಭೇಟೆ ಮುಂದುವರೆದಿದೆ. ಈ ಬಾರಿ 4 ಕೆಜಿ 470 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ 2,25,000/- ರೂ. ಎಂದು ಅಂದಾಜಿಸಲಾಗಿದೆ. ಶಿವಮೊಗ್ಗ ನಗರದಲ್ಲಿ ಮಾದಕ ವಸ್ತು ಗಾಂಜಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ಎಸ್ಪಿ ಮಿಥುನ್ ಕುಮಾರ್ ಜಿ ಕೆ, ಅಡಿಷನಲ್ ಎಸ್ಪಿಗಳಾದ ಅನಿಲ್ ಕುಮಾರ್ ಭೂಮಾರೆಡ್ಡಿ ಮತ್ತು ಕಾರಿಯಪ್ಪ ಎ.ಜಿ, ಮಾರ್ಗದರ್ಶದಲ್ಲಿ, ಪೊಲೀಸ್ ನಿರೀಕ್ಷಕರು ಸಿಇಎನ್ ಕ್ರೈಂ ಪೊಲೀಸ್ ಠಾಣೆರವರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು.
ನಿನ್ನೆ ಬೆಳಿಗ್ಗೆ ನಗರದ ಮಲವಗೊಪ್ಪದಿಂದ ಶುಗರ್ ಪ್ಯಾಕ್ಟರಿಗೆ ಸೇರಿದ ಖಾಲಿ ಜಾಗದಲ್ಲಿ 04 ಜನ ಆಸಾಮಿಗಳು ಗಾಂಜಾವನ್ನು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಸೆನ್ ಪಿಐ ದೀಪಕ್ ಎಂ ಎಸ್. ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ಧರ್ಮಾನಾಯ್ಕ್, ಚಂದ್ರಶೇಖರ್ ಡಿ,ಆರ್, ಕರಿಬಸಪ್ಪ, ಬಿ, ಎಸ್. ಪಿಸಿ ಫಿರ್ದೋಸ್ ಅಹಮ್ಮದ್, ರವಿ ಬಿ, ಚಿದಂಬರ್ ಡಿ. ಎನ್. ಹಾಗೂ ಚಾಲಕರಾದ ಪ್ರಕಾಶನಾಯ್ಕ ರವರುಗಳನ್ನು ಒಳಗೊಂಡ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದರು. ಆರೋಪಿತರಾದ 1) ಸುಹೇಲ್ ಖಾನ್ @ ಪಿನ್ನಿ, 20 ವರ್ಷ, ಅನ್ವರ್ ಕಾಲೋನಿ ಮೋಮಿನ್ ಮೊಹಲ್ಲಾ ಭದ್ರಾವತಿ 2) ಮೊಹಮ್ಮದ್ ಗೌಸ್ @ ಗುಂಡ, 23 ವರ್ಷ, ಅನ್ವರ್ ಕಾಲೋನಿ ಮೋಮಿನ್ ಮೊಹಲ್ಲಾ ಭದ್ರಾವತಿ, 3) ಖಲೀಲ್ ಅಹಮದ್ @ ಕಾಲು, 25 ವರ್ಷ, ಕೋಟೆ ಏರಿಯಾ ಖಾಝಿ ಮೊಹಲ್ಲಾ ಭದ್ರಾವತಿ ಟೌನ್ ಮತ್ತು 4) ಸೈಯದ್ ಹಸೈನ್ @ ಜಂಗ್ಲಿ @ ಸಾಹಿಲ್, 23 ವರ್ಷ, ಎಕಿನ್ಸಾ ಕಾಲೋನಿ ಭದ್ರಾವತಿ ರವರನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿತರಿಂದ ಅಂದಾಜು ಮೌಲ್ಯ 2,25,000/- ರೂಗಳ ಒಟ್ಟು 04 ಕೆಜಿ 470 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರಿಂದ ಸಿಇಎನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0009/2024 ಕಲಂ 20 (ಬಿ) (2) ಬಿ ಎನ್.ಡಿ.ಪಿ.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಭದ್ರಾವತಿ ಬಾಲಕಿಗೆ ದಾವಣಗೆರೆ ಯುವಕನ ಕಿರುಕುಳ!
ಶಿವಮೊಗ್ಗ ಕೋರ್ಟ್ ಲೈಂಗಿಕ ಕಿರುಕುಳದ ಪೋಸ್ಕೋ ಕೇಸ್ ನಲ್ಲಿ ಆರೋಪಿಗೆ 20 ವರ್ಷ ಶಿಕ್ಷೆ ವಿಧಿಸಿದೆ. 20 ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಗೆ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯಷ್ಟೆ ಅಲ್ಲದೆ ₹2.20 ಲಕ್ಷ ದಂಡವನ್ನು ಸಹ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ 6 ತಿಂಗಳು ಸಾದಾ ಸೆರೆವಾಸ ಶಿಕ್ಷೆ ನೀಡಿ ಆದೇಶಿಸಿದೆ. ದಂಡದ ಮೊತ್ತದಲ್ಲಿ ₹2 ಲಕ್ಷವನ್ನು ಪರಿಹಾರವಾಗಿ ಯುವತಿಗೆ ಪಾವತಿಸುವಂತೆ ಸೂಚಿಸಿದೆ. 2021ರಲ್ಲಿ ದಾವಣಗೆರೆ ಮೂಲದ 27 ವರ್ಷದ ಯುವಕ, 16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಯುವತಿ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆಗಿನ ಭದ್ರಾವತಿ ಪೊಲೀಸ್ ಠಾಣೆಯ ಪಿಐ ಚೈತನ್ಯ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರ ಹರಿಪ್ರಸಾದ್ ಮತ್ತು ಶ್ರೀಧರ್ ವಾದ ಮಂಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜೆ.ಎಸ್.ಮೋಹನ್, ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಅಪರಾಧಿಗೆ ಶಿಕ್ಷೆ ವಿಧಿಸಿದ್ದಾರೆ.