ಮಹಿಳೆ ಹೊಟ್ಟೆಯಲ್ಲಿತ್ತು 6 ಕೆಜಿ ಗಡ್ಡೆ: ಆಪರೇಷನ್ ಸಕ್ಸಸ್!
– ತೀರ್ಥಹಳ್ಳಿ ಎಂ. ಐ. ಓ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ
– ಕ್ಯಾನ್ಸರ್ ರೋಗಿಗಳಿಗೆ ವರದಾನವಾದ ಆಸ್ಪತ್ರೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ತೀರ್ಥಹಳ್ಳಿ: ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ 81 ವರ್ಷದ ವೃದ್ಧೆಯ ಅಂಡಾಶಯದಲ್ಲಿ ಸುಮಾರು 40 ಸೆಂಟಿಮೀಟರ್ ಗಾತ್ರದ, 6ಕೆಜಿಯಷ್ಟು ಭಾರಿ ತೂಕವಿರುವ ಗಡ್ಡೆಯೊಂದು ಸೃಷ್ಟಿಯಾಗಿದ್ದು, ವೃದ್ಧೆಯ ಜೀವ ಅಪಾಯದಲ್ಲಿತ್ತು. ಆಗ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯ ತೀರ್ಥಹಳ್ಳಿ ಕೇಂದ್ರದಲ್ಲಿ ಸಮಗ್ರ ವೈದ್ಯಕೀಯ ತಯಾರಿ ಹಾಗೂ ಡಾ. ಸುರೇಶ್ ಕ್ಲೆಮೆಂಟ್ ಡಿಸೋಜಾ ಅವರ ನೇತೃತ್ವದಲ್ಲಿ ಡಾ. ದಿವ್ಯ ಜ್ಯೋತಿ ಅವರನ್ನೊಳಗೊಂಡ ನುರಿತ ವೈದ್ಯಕೀಯ ತಂಡದ ಸಮನ್ವಯದಲ್ಲಿ ಸ್ಟೇಜಿಂಗ್ ಲ್ಯಾಪರೋಟಮಿ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ತೆರವುಗೊಳಿಸಲಾಯಿತು.
ಇದೀಗ ರೋಗಿಯು ಚೇತರಿಸಿಕೊಳ್ಳುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿ, ಆರೋಗ್ಯದಲ್ಲಿ ಸ್ಥಿರತೆ ಕಂಡುಬಂದಿದೆ. ಈ ಮೂಲಕ ತೀರ್ಥಹಳ್ಳಿಯಂತಹ ಮಲೆನಾಡಿನ ಗ್ರಾಮೀಣ ಭಾಗದಲ್ಲಿ ಕೂಡ ಕ್ಯಾನ್ಸರ್ ನಂತಹ ದೊಡ್ಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಪ್ರೋಟೋಕಾಲ್ ಆಧಾರಿತ ಚಿಕಿತ್ಸೆಯನ್ನು ನೀಡುವ ಮೂಲಕ ರೋಗಿಗಳನ್ನು ಸಾವಿನಂಚಿನಿಂದ ಬದುಕಿನತ್ತ ತರಬಹುದು ಎನ್ನುವುದು ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿಯ ತೀರ್ಥಹಳ್ಳಿ ಕೇಂದ್ರವು ಗ್ರಾಮೀಣ ಭಾಗದ ಕ್ಯಾನ್ಸರ್ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವತ್ತ ಹೆಚ್ಚಿನ ಗಮನಹರಿಸುತ್ತಿದೆ.
