ಧರ್ಮಸ್ಥಳ ಪ್ರಕರಣಕ್ಕೆ ದೊಡ್ಡ ಜಯ!
– ನಾನು ಹೇಳಿದ್ದು ಸುಳ್ಳು ಎಂದ ಸುಜಾತಾ ಭಟ್
– ಲಾಯರ್ ಜಗದೀಶ್ ಅರೆಸ್ಟ್: ಮಟ್ಟಣ್ಣನವರ್ ಬಂಧನ?
NAMMUR EXPRESS NEWS
ಮಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣ ದಿನಕ್ಕೊಂದು ಸ್ವರೂಪ ಪಡೆದುಕೊಳ್ಳುತ್ತಿದ್ದು ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ ಕೂಡ ದೊಡ್ಡ ಸದ್ದು ಮಾಡಿತ್ತು. ಇನ್ನು ಪ್ರಕರಣವನ್ನು ಎಸ್‌ಐಟಿಗೆ ವಹಿಸುತ್ತಿದ್ದಂತೆ ದೂರು ನೀಡಿದ್ದ ಸುಜಾತಾ ಭಟ್ ಇದೀಗ ವರಸೆ ಬದಲಾಯಿಸಿದ್ದಾರೆ.
ಅನನ್ಯಾ ಭಟ್ ಕುರಿತಂತೆ ದಾಖಲೆಗಳನ್ನು ತೋರಿಸುವಂತೆ ಒತ್ತಡ ತೀವ್ರವಾಗಿದ್ದರಿಂದ ದಿಢೀರ್ ಅಂತ ಮಹಿಳೆಯೊಬ್ಬರ ಫೋಟೋವನ್ನು ಸುಜಾತಾ ಭಟ್ ತೋರಿಸಿದ್ದರು.
ಈ ಫೋಟೋದಲ್ಲಿರುವುದು ಅನನ್ಯಾ ಭಟ್ ಅಲ್ಲ. ಬದಲಿಗೆ ವಾಸಂತಿ ಎಂಬ ಆರೋಪಗಳು ಕೇಳಿಬಂದಿದ್ದವು. ಇದರ ಬೆನ್ನಲ್ಲೇ ಸುಜಾತಾ ಭಟ್ ಆರೋಪದ ಬಗ್ಗೆ ಅನುಮಾನಗಳು ಮೂಡಿದ್ದವು. ಇನ್ನು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅನನ್ಯಾ ಭಟ್ ನಾಪತ್ತೆ ಪ್ರಕರಣವನ್ನು ಎಸ್‌ಐಟಿಗೆ ರವಾನಿಸಲಾಗಿತ್ತು. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಪ್ರಕರಣದ ವಿವರ ನೀಡುವಂತೆ ಸುಜಾತಾ ಭಟ್‌ಗೆ ನೋಟಿಸ್ ನೀಡಿದೆ. ಆದರೆ ಎಸ್‌ಐಟಿ ನೋಟಿಸ್‌ಗೆ ಉತ್ತರಿಸದ ಸುಜಾತಾ ಭಟ್, ಆಡಿಯೋವೊಂದನ್ನು ಹರಿಬಿಟ್ಟು ಕೇಸ್ ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ.
2003ರಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಅನನ್ಯಾ ಭಟ್ ಕಾಣೆಯಾಗಿದ್ದಾಳೆ ಎಂದು ಆರೋಪಿಸಿ ಸುಜಾತಾ ಭಟ್ ಇದೇ ಜುಲೈ 15ಕ್ಕೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಿದ ದೂರು ದಾಖಲಿಸಿದ್ದರು. ನನ್ನ ಮಗಳು ಬದುಕಿದ್ದಾಳೆ ಇಲ್ಲವೋ ಗೊತ್ತಿಲ್ಲ. ಸತ್ತಿದ್ದರೆ ಆಕೆಯ ಕಳೇಬರವನ್ನಾದರೂ ಹುಡುಕಿಕೊಡಿ ಶಾಸ್ತೋಕ್ತವಾಗಿ ಅಂತ್ಯ ಸಂಸ್ಕಾರ ಮಾಡುವುದಾಗಿ ಹೇಳಿದ್ದರು
ಲಾಯರ್ ಜಗದೀಶ್ ಅರೆಸ್ಟ್!
ಸಾಮಾಜಿಕ ಜಾಲತಾಣದಲ್ಲಿ ಜಾತಿ ನಿಂದನೆ ಮಾಡಿದ ಆರೋಪದಡಿಯಲ್ಲಿ ಲಾಯರ್ ಜಗದೀಶ್ ಅವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಕೊಡಿಗೇಹಳ್ಳಿ ಪೊಲೀಸರು ಲಾಯರ್ ಜಗದೀಶ್ ಮನೆಗೆ ತೆರಳಿ ಅವರನ್ನು ಬಂಧಿಸಿದ್ದಾರೆ.
ಜಾಲತಾಣದಲ್ಲಿ ಮಾತನಾಡುವಾಗ ಜಾತಿ ನಿಂದನೆ ಮಾಡಲಾಗಿದೆ ಎಂದು ಮಂಜುನಾಥ ಎಂಬುವವರು ನೀಡಿದ್ದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಲಾಗಿತ್ತು. ಜಗದೀಶ್ ಅವರ ಬಂಧನಕ್ಕೆ ಸಂಬಂಧಿಸಿದಂತೆ, ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 196 ಮತ್ತು 299 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಕೀಲ ಜಗದೀಶ್ ಅವರಿಗೆ ಕೊಡಿಗೇಹಳ್ಳಿ ಠಾಣೆ ಪೊಲೀಸರು ನೋಟಿಸ್ ನೀಡಲು ಅವರ ಮನೆಗೆ ತೆರಳಿದ್ದಾಗ ಬಾಗಿಲು ತೆಗೆದಿರಲಿಲ್ಲ. ಹೀಗಾಗಿ ವಾಪಸ್ ಬಂದಿದ್ದರು. ಪೊಲೀಸರು ಮನೆಗೆ ಬಂದ ಬಗ್ಗೆ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದ ಜಗದೀಶ್ ನಾನು ಮನೆಯಲ್ಲಿ ಇಲ್ಲದಿರುವಾಗ ಕೊಡಿಗೇಹಳ್ಳಿ ಪೊಲೀಸರು ಯಾವುದೇ ನೋಟಿಸ್ ನೀಡದೆ ಮನೆ ಬಳಿ ಬಂದಿದ್ದಾರೆ. ಮನೆಯ ನಾಯಿಗಳಿಗೆ ಮಂಪರು ಔಷಧಿ ನೀಡಿ ಅನಧಿಕೃತವಾಗಿ ಕಾಂಪೌಂಡ್ ಜಿಗಿದು ಬಂದಿದ್ದಾರೆ. ನಮ್ಮ ಕುಟುಂಬದವರನ್ನು ಭಯಪಡಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದರು.
ಮಟ್ಟಣ್ಣನವರ್, ಜಯಂತ್ ಬಂಧನ ಸಾಧ್ಯತೆ..!
ಸುಜಾತಾ ಭಟ್ ಹೇಳಿಕೆ ಬೆನ್ನಲ್ಲೇ ಇದೀಗ ಧರ್ಮಸ್ಥಳ ವಿರುದ್ಧ ಹೋರಾಟದ ನಾಯಕತ್ವ ವಹಿಸಿದ್ದ ಗಿರೀಶ್ ಮಟ್ಟಣ್ಣನವರ್ ವಿರುದ್ಧ ಕೇಸು ದಾಖಲಾಗಬಹುದು. ಜೊತೆಗೆ ಅವರ ಬಂಧನ ಆಗಬಹುದು.
ತಿಮರೋಡಿಗೆ 14 ದಿನ ಜೈಲು!
ಬಿ. ಎಲ್ ಸಂತೋಷ್ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿ ಬಂಧನ ಆಗಿರುವ ತಿಮರೋಡಿಗೆ 14 ದಿನ ನ್ಯಾಯಾಂಗ ಬಂಧನವಾಗಿದೆ. ಈ ಮೂಲಕ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ.
