15 ದಿನದಲ್ಲಿ ನವೀಕೃತ ಸಮುದಾಯ ಭವನ ನಿರ್ಮಾಣ!
– ಮಲೆನಾಡಿನಲ್ಲೇ ಗಮನ ಸೆಳೆದ ಶ್ರೀ ಧರ್ಮಶ್ರೀ ಯುವಕ ಮಂಡಲ
– ಕುಪ್ಪಳ್ಳಿ ಸಮೀಪದ ಕಲ್ಲುಕೊಡಿಗೆ ಮುಸ್ಸಿನಕೊಪ್ಪದ ಗ್ರಾಮದಲ್ಲಿ ನಿರ್ಮಾಣ
– ಗ್ರಾಮಸ್ಥರ ಸಹಕಾರದೊಂದಿಗೆ 5 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ
– ಅದ್ದೂರಿ ಗಣೇಶೋತ್ಸವಕ್ಕೆ ಸಿದ್ಧತೆ: ಮಾದರಿಯಾಯಿತು ಗ್ರಾಮ
NAMMUR EXPRESS NEWS
ತೀರ್ಥಹಳ್ಳಿ / ಕೊಪ್ಪ : ತೀರ್ಥಹಳ್ಳಿ ಹಾಗೂ ಕೊಪ್ಪ ಗಡಿ ಭಾಗದ ಕುಪ್ಪಳಿ ಸಮೀಪದ ಬೆಕ್ಕನೂರು ಗ್ರಾಮ ವ್ಯಾಪ್ತಿಯ ಕಲ್ಲುಕೊಡಿಗೆ ಮುಸ್ಸಿನಕೊಪ್ಪ ಗ್ರಾಮದ ಶ್ರೀ ಧರ್ಮಶ್ರೀ ಯುವಕ ಮಂಡಲ ಈ ಸಾರಿ ಗಣೇಶೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ನಡೆಸಲು ಸಿದ್ಧತೆ ನಡೆಸಿದೆ. ಈ ನಡುವೆ ಸುಮಾರು 15 ದಿನಗಳಲ್ಲೇ ಬೆಕ್ಕನೂರು ಗ್ರಾಮದಲ್ಲೇ ಸುಸಜ್ಜಿತ ನವೀಕೃತ ಸಮುದಾಯ ಭವನವನ್ನು ಸುಮಾರು 5 ಲಕ್ಷ ವೆಚ್ಚದಲ್ಲಿ ದಾನಿಗಳು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಮಾಡುವ ಮೂಲಕ ಇದೀಗ ಮಲೆನಾಡಿಗೆ ಮಾದರಿಯಾಗಿದೆ. ಜೊತೆಗೆ ಈ ಬಾರಿ 37ನೇ ವರ್ಷದ ಗಣೇಶೋತ್ಸವವನ್ನುಅದ್ದೂರಿಯಾಗಿ ಆಚರಣೆ ಮಾಡಲು ಈಗಾಗಲೇ ಶ್ರೀ ಧರ್ಮ ಶ್ರೀ ಯುವಕ ಮಂಡಲ ಸದಸ್ಯರು ಹಾಗೂ ಗ್ರಾಮಸ್ಥರು ಸಜ್ಜಾಗಿದ್ದಾರೆ.
ಗ್ರಾಮಸ್ಥರ ಸಹಕಾರದೊಂದಿಗೆ ಇದೀಗ ನವೀಕೃತ ಸಮುದಾಯ ಭವನದಲ್ಲಿ ಇತ್ತೀಚೆಗೆ ವರಮಹಾಲಕ್ಷ್ಮಿ ಪೂಜೆ ಕೂಡ ನಡೆದಿದ್ದು ಗ್ರಾಮದ ಅಭಿವೃದ್ಧಿ ಜೊತೆಗೆ ಸಮುದಾಯ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ.
ವಿಶೇಷ ಯೋಜನೆ, ವಿಶೇಷ ಕಾರ್ಯಕ್ರಮ
37 ನೇ ಗಣೇಶೋತ್ಸವ ಮತ್ತಷ್ಟು ವಿವಿಧ ಕಲ್ಪನೆಗಳ ಮೂಲಕ ಆಚರಿಸಲು ಶ್ರೀ ಧರ್ಮಶ್ರೀ ಯುವಕ ಮಂಡಲದ ಸದಸ್ಯರು ಸಿದ್ದರಾಗಿದ್ದು, ಸಮುದಾಯ ಭವನದ ಸುತ್ತಮುತ್ತ ಗಿಡಗಳನ್ನು ನೆಡುವ ಮೂಲಕ ಹೊಸ ಯೋಜನೆಯನ್ನು ರೂಪಿಸಿಕೊಂಡಿದೆ. ಅಲ್ಲದೇ ಲೈಬ್ರರಿ, ಸಮುದಾಯ ಭವನಕ್ಕೆ ರಂಗಮಂದಿರ, ಅಡುಗೆ ಕೋಣೆ, ಹೈಟೆಕ್ ಶೌಚಾಲಯ ಸೇರಿದಂತೆ ಇನ್ನೂ 10 ಹಲವು ಯೋಜನೆಗಳನ್ನ ಹಮ್ಮಿಕೊಂಡಿದ್ದು ಗ್ರಾಮಸ್ಥರ ಅನುಕೂಲಕ್ಕಾಗಿ ಈ ಯೋಜನೆಯನ್ನು ಮಾಡಲಾಗಿದೆ. ತಾಲೂಕಿನಲ್ಲಿ ಮಾದರಿಯಂಬಂತೆ ಈ ಗಣೇಶೋತ್ಸವದ ಹೆಸರಿನಲ್ಲಿ ಗ್ರಾಮಸ್ಥರೇ ಸೇರಿ ಮಾಡಿರುವಂತಹ ನವೀಕೃತ ಸಮುದಾಯ ಭವನ ಇದೀಗ ಗಮನ ಸೆಳೆದಿದೆ. ಇನ್ನು 37ನೇ ವರ್ಷದ ಗಣೇಶೋತ್ಸವದ ಅಂಗವಾಗಿ ವಿಶೇಷವಾಗಿ ಸಾಂಸ್ಕೃತಿಕ ಸ್ಪರ್ಧೆ, ಮಕ್ಕಳಿಗೆ ಕೃಷ್ಣ ಮತ್ತು ರಾಧೆ ವೇಷ ಸ್ಪರ್ಧೆ, ಗ್ರಾಮೀಣ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿದೆ. ಇನ್ನು ಮ್ಯೂಸಿಕ್ ನೈಟ್, ಕಾಮಿಡಿ ಶೋ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಮೂರು ದಿನದ ಈ ಕಾರ್ಯಕ್ರಮದಲ್ಲಿ ಅದ್ದೂರಿ ಕಲಾತಂಡಗಳ ಮೆರವಣಿಗೆ ಕೂಡ ನಡೆಯಲಿದೆ.
ಸರ್ವರಿಗೂ ಧನ್ಯವಾದ ಅರ್ಪಣೆ ಮಾಡಿದ ಅಧ್ಯಕ್ಷ ಸುಧಾಕರ್
ಎಲ್ಲಾ ಸಾಮಾಜಿಕ ಕಾರ್ಯಕ್ರಮಗಳನ್ನು ಗ್ರಾಮಸ್ಥರ ನೆರವಿನಲ್ಲಿ ನಡೆಸಲಾಗುತ್ತದೆ. ಎಲ್ಲಾರ ಸಹಕಾರದೊಂದಿಗೆ ನವೀಕೃತ ಸಮುದಾಯ ಭವನವನ್ನು ಕೇವಲ 15 ದಿನಗಳಲ್ಲಿ ನಿರ್ಮಾಣ ಮಾಡಲಾಗಿದೆ. ಇನ್ನಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಈ ಸಂಘದ ವತಿಯಿಂದ ಮಾಡಲು ನಿರ್ಧರಿಸಲಾಗಿದೆ ಎಂದು ಶ್ರೀ ಧರ್ಮ ಶ್ರೀ ಯುವಕ ಸಂಘದ ಅಧ್ಯಕ್ಷರಾದ ಕುಪ್ಪಳ್ಳಿ ಸುಧಾಕರ್ ತಟ್ಟಾಪುರ ಇವರು ಹೇಳಿದ್ದಾರೆ
