ಏ. 12ಕ್ಕೆ ಗುರುಪುರದಲ್ಲಿ ಜೋಡುಕರೆ ಕಂಬಳ!
– ಅದ್ಧೂರಿಯಾಗಿ ನಡೆಯಲಿರುವ ಕಂಬಳಕ್ಕೆ ಸಕಲ ಸಿದ್ಧತೆ
– ದೂಜ ಕೋಣದ ಹೆಸರಿನಲ್ಲಿ ಕಂಬಳದ ಅಂಚೆ ಚೀಟಿ ಬಿಡುಗಡೆ
NAMMUR EXPRESS NEWS
ಮಂಗಳೂರು: ಎರಡನೇ ವರ್ಷದ ಗುರುಪುರ ಮೂಳೂರು, ಅಡ್ಡೂರು, ಜೋಡುಕರೆ ಕಂಬಳ ಎಪ್ರಿಲ್ ಏ. 12ರಂದು ಶನಿವಾರ ನಡೆಯಲಿದೆ.
ಈ ಬಾರಿ ಹಲವು ವಿಶೇಷತೆಗಳೊಂದಿಗೆ ಕಂಬಳ ಅದ್ಧೂರಿಯಾಗಿ ನಡೆಯಲಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳು ಕೂಡ ಪೂರ್ಣಗೊಂಡಿದೆ.
ಉದ್ಯಮಿ ಹಾಗೂ ಕಾಂಗ್ರೆಸ್ ನಾಯಕ ಇನಾಯತ್ ಅಲಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಂಬಳದ ಸಮಾರೋಪದಲ್ಲಿ ರಾಜ್ಯದ ಡಿಸಿಎಂ ಡಿ ಕೆ ಶಿವಕುಮಾರ್ ಭಾಗವಹಿಸಲಿದ್ದಾರೆ.
ವಿಶೇಷವಾಗಿ ಅನೇಕ ಮೆಡಲ್ ಗಳನ್ನು ಪಡೆದಿರುವ ದೂಜ ಕೋಣದ ಹೆಸರಿನಲ್ಲಿ ಕಂಬಳದ ಅಂಚೆ ಚೀಟಿ ಬಿಡುಗಡೆ ನಡೆಯಲಿದೆ ಅಂತ ಅಧ್ಯಕ್ಷ ಇನಾಯತ್ ಅಲಿ ಹೇಳಿದ್ದಾರೆ.
ಈ ಭಾರಿ ಸುಮಾರು 200 ಕೋಣಗಳು ಭಾಗವಹಿಸುವ ನಿರೀಕ್ಷೆ ಹೊಂದಿದ್ದು ಭಾಗವಹಿಸುವ ಪ್ರತಿ ಕೋಣಗಳಿಗೆ ಬೆಳ್ಳಿಯ ನಾಣ್ಯ ನೀಡಲಿರುವುದಾಗಿ ಹೇಳಿದ್ದಾರೆ. ಗುರುಪುರ ಕಂಬಳ ಈ ವರ್ಷ ಜಿಲ್ಲೆಯಲ್ಲಿ ನಡೆಯುವ ಕೊನೆಯ ಕಂಬಳ ಆಗಿದ್ದು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ.
ಸಾರ್ವಜನಿಕರಿಗೆ ಅನ್ನ ಸಂತರ್ಪಣೆ, ಮಳೆ ಬಂದಲ್ಲಿ ಪ್ರೇಕ್ಷಕರಿಗೆ ಸಮಸ್ಯೆ ಆಗದಂತೆ ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗುವುದು.
– ಕಂಬಳದಲ್ಲಿ ದೂಜನ ಸಾಧನೆ
ಪದವು-ಕಾನಡ್ಕ ತಂಡದ ಚಾಂಪಿಯನ್ ದೂಜ ಕೋಣವು ಸಾವಿರಾರು ಅಭಿಮಾನಿಗಳನ್ನು ಪಡೆದುಕೊಂಡಿದೆ. ದೂಜನ ಓಟವನ್ನು ಕಂಡು ಕಂಬಳ ಲೋಕವೇ “ಭೇಷ್” ಅನ್ನುವಂತಿತ್ತು. ನಿರೀಕ್ಷೆಗೂ ಮೀರಿದ ಓಟದ ಸಾಧಕ ದೂಜ ಅನಾರೋಗ್ಯದ ಕಾರಣದಿಂದ ಕಳೆದ ಎರಡು ವರ್ಷದಿಂದ ಕಂಬಳ ಕೂಟದಲ್ಲಿ ಭಾಗವಹಿಸುತ್ತಿಲ್ಲ.
16ನೇ ವಯಸ್ಸಿನಲ್ಲೇ ಕಂಬಳ ಓಟದಿಂದ ನಿವೃತ್ತಿ ಪಡೆದ ದೂಜ ಕೋಣ 6 ಬಾರಿಯ ಚಾಂಪಿಯನ್ ಪಟ್ಟದೊಂದಿಗೆ ಒಟ್ಟು 69 ಮೆಡಲ್ ಪಡೆದಿದೆ. ಇಂತಹ ವಿಶೇಷ ಸಾಧನೆ ಮಾಡಿದ ದೂಜನ ಹೆಸರಿನಲ್ಲಿ ಅಂಚೆ ಚೀಟಿ ಬಿಡುಗಡೆಯಾಗುತ್ತಿರುವುದು ಕಂಬಳ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
