ಮಂಗಳೂರು ಟಾಪ್ ನ್ಯೂಸ್
ಮಂಗಳೂರು: ಕುಖ್ಯಾತ ರೌಡಿಶೀಟರ್ ತಲ್ಲತ್ ಗ್ಯಾಂಗ್ ಸದಸ್ಯ ಬಂಧನ: ಪೊಲೀಸರಿಂದ ಶೂಟೌಟ್!
– ಬೆಳ್ತಂಗಡಿ: ಏ. 6ರ, ಸೌಜನ್ಯ ಹೋರಾಟಕ್ಕೆ ಕೋರ್ಟ್ ಮಧ್ಯಂತರ ತಡೆ!
– ಬೆಳ್ತಂಗಡಿ: ರಿಕ್ಷಾಕ್ಕೆ ಕಾರು ಡಿಕ್ಕಿ, ರಿಕ್ಷಾ ಚಾಲಕ ಗಂಭೀರ!
NAMMUR EXPRESS NEWS
ಮಂಗಳೂರು: ಇತ್ತೀಚೆಗೆ ಅಂಕೋಲಾದ ರಾಮನಗುಳಿ ಬಳಿ ಕಾರೊಂದರಲ್ಲಿ ದಾಖಲೆ ರಹಿತ 1.14 ಕೋಟಿ ರೂ. ನಗದು ಸಿಕ್ಕಿದ ಸಂಬಂಧ ಆರೋಪಿಗಳನ್ನು ಮುಂಬೈಯಲ್ಲಿ ಬಂಧಿಸಿ ಕರೆತರುತ್ತಿರುವ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳ ಕಾಳಿಗೆ ಗುಂಡು ಹಾರಿಸಿದ ಘಟನೆ ಹಳಿಯಾಳ ತಾಲೂಕಿನ ಭಾಗವತಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮಂಗಳೂರು ಮೂಲದ ಕುಖ್ಯಾತ ತಲ್ಲತ್ ಗ್ಯಾಂಗ್’ನ ರೌಡಿಶೀಟರ್ ತಲ್ಲತ್, ನೌಫಾಲ್ ಹಾಗೂ ಸಾಹೀಲ್ ಅವರನ್ನು ಮುಂಬೈಯಲ್ಲಿ ಬಂಧಿಸಿ ಕರೆತರುತ್ತಿದ್ದ ಘಟನೆ ನಡೆದಿದೆ.
ಹಳಿಯಾಳದ ಭಾಗವತಿ ಅರಣ್ಯ ಪ್ರದೇಶದಲ್ಲಿ ಮೂತ್ರ ವಿಸರ್ಜನೆಗೆಂದು ವಾಹನ ನಿಲ್ಲಿಸಿದ್ದ ವೇಳೆ ತಲ್ಲಂ ಹಾಗೂ ನೌಫಾಲ್ ಪೊಲೀಸರ ಮೇಲೆ ಮದ್ಯದ ಬಾಟಲಿ ಹಾಗೂ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಗ ಅವರ ಕಾಲಿಗೆ ಗುಂಡು ಹಾರಿಸಿದರು. ಆರೋಪಿ ಸಾಹೀಲ್ ವಾಹನದಲ್ಲಿ ಕುಳಿತುಕೊಂಡ ಕಾರಣ ಆತನಿಗೆ ಗುಂಡು ಹಾರಿಸದೆ ಅಂಕೋಲಾ ಪೊಲೀಸ್ ಠಾಣೆಗೆ ರವಾನಿಸಲಾಗಿದೆ. ಘಟನೆಯಲ್ಲಿ ಪೊಲೀಸರಿಗೂ ಗಾಯಗಳಾಗಿದ್ದರೆ, ಹಳಿಯಾಳ ಆಸ್ಪತ್ರೆಯಲ್ಲಿ ಆರೋಪಿಗಳು ಹಾಗೂ ಪೊಲೀಸರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಎಸ್ ಪಿ ಎಂ. ನಾರಾಯಣ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದರು.
– ಬೆಳ್ತಂಗಡಿ: ಏ. 6ರ, ಸೌಜನ್ಯ ಹೋರಾಟಕ್ಕೆ ಕೋರ್ಟ್ ಮಧ್ಯಂತರ ತಡೆ!
ಬೆಳ್ತಂಗಡಿ: ಸೌಜನ್ಯ ಸಾವಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಇದೇ 6ರಂದು, ಭಾನುವಾರ ಬೆಳ್ತಂಗಡಿಯಿಂದ ಧರ್ಮಸ್ಥಳಕ್ಕೆ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
‘ಧರ್ಮಸ್ಥಳ ಗ್ರಾಮ ಹಿತರಕ್ಷಣಾ ವೇದಿಕೆ’ಯ ಕಾರ್ಯದರ್ಶಿ ಧನಕೀರ್ತಿ ಅರಿಗ ಅವರು ‘ಸೌಜನ್ಯ ಸಾವಿಗೆ ನ್ಯಾಯ ದೊರಕಿಸುವ ನೆಪದಲ್ಲಿ ಧರ್ಮಸ್ಥಳಕ್ಕೆ ನುಗ್ಗುವ ಮತ್ತು ದಾಂದಲೆ ಎಬ್ಬಿಸುವ ದುರುದ್ದೇಶದಿಂದ ಹಮ್ಮಿಕೊಂಡಿರುವ ಬೆಳ್ತಂಗಡಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳದವರೆಗಿನ ಪ್ರತಿಭಟನಾ ರ‍್ಯಾಲಿಯನ್ನು ತಡೆಯಬೇಕು’ ಎಂದು ರಿಟ್ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದ ಹೈಕೋರ್ಟ್ ಉದ್ದೇಶಿತ ರ‍್ಯಾಲಿಗೆ ಮಧ್ಯಂತರ ತಡೆ ನೀಡಿದೆ.
ವಾದ- ಪ್ರತಿ ವಾದಗಳನ್ನು ಆಲಿಸಿದ ಕೋರ್ಟ್ ಅರ್ಜಿಯ ಜೊತೆಗೆ ಲಗತ್ತಿಸಲಾಗಿರುವ ಕೆಲವು ವಾಟ್ಸ್ ಆಪ್ ಸಂದೇಶಗಳನ್ನು ಗಮನಿಸಿ ಈ ತೀರ್ಪು ನೀಡಿದೆ. ಪ್ರತಿಭಟನೆಯ ಹೆಸರಿನಲ್ಲಿ ಧರ್ಮಸ್ಥಳಕ್ಕೆ ನುಗ್ಗುವ ಮತ್ತು ಅಲ್ಲಿನ ಶಾಂತಿ ಕದಡುವ ಕಾರಣ ಕೊಟ್ಟು ನ್ಯಾಯಪೀಠ ಆದೇಶ ನೀಡಿದೆ.
– ಬೆಳ್ತಂಗಡಿ: ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ, ರಿಕ್ಷಾ ಚಾಲಕ ಗಂಭೀರ!
ಬೆಳ್ತಂಗಡಿ: ಆಟೋ ರಿಕ್ಷಾಕ್ಕೆ ಕಾರು ಡಿಕ್ಕಿ ಹೊಡೆದು ಎರಡೂ ವಾಹನಗಳು ಜಖಂಗೊಂಡು ರಿಕ್ಷಾ ಚಾಲಕ ಗಂಭೀರಗಾಗಿ ಗಾಯಗೊಂಡ ಘಟನೆ ವೇಣೂರು ಗ್ರಾಮದ ಕುಂಭಶ್ರೀ ಶಾಲೆಯ ಸಮೀಪ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.
ಗಂಭೀರ ಗಾಯಗೊಂಡ ರಿಕ್ಷಾ ಚಾಲಕನನ್ನು ನೌಶದ್ ಎಂದು ಗುರುತಿಸಲಾಗಿದೆ.
ಕಾರು ಚಾಲಕ ಅತೀ ವೇಗದಲ್ಲಿ ಕಾರನ್ನು ಚಲಾಯಿಸಿ ಲಾರಿಯೊಂದನ್ನು ಓವರ್ ಟೇಕ್ ಮಾಡಿ ಎದುರಿನಿಂದ ಬರುತ್ತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದು, ಕಾರು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.
ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಗಂಭೀರ ಗಾಯಗೊಂಡ ರಿಕ್ಷಾ ಚಾಲಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.