ಮಂಗಳೂರು: ಗುಂಪು ಹತ್ಯೆಗೀಡಾದ ವಲಸೆ ಕಾರ್ಮಿಕ ಕೇರಳದ ಮುಸ್ಲಿಂ ಯುವಕ ಅಶ್ರಫ್!
– ‘ಪಾಕ್ ಜಿಂದಾಬಾದ್’ ಎಂದ ಕಾರಣಕ್ಕೆ ಹತ್ಯೆ?
– ಮತ್ತೆ ಐವರು ಅರೆಸ್ಟ್, ಮೃತದೇಹ ಕೇರಳಕ್ಕೆ ಕೊಂಡೊಯ್ದ ಕುಟುಂಬಸ್ಥರು!
NAMMUR EXPRESS NEWS
ಮಂಗಳೂರು: ಗುಂಪು ಹಲ್ಲೆಯಿಂದ ಹತ್ಯೆಯಾದ ವ್ಯಕ್ತಿಯ ಗುರುತು ಪತ್ತೆಯಾಗಿದೆ. ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ಅಶ್ರಫ್ ಗುಂಪು ಹಲ್ಲೆಯಿಂದ ಮೃತರಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕ್ರಿಕೆಟ್ ಪಂದ್ಯಾವಳಿ ವೇಳೆ ಮೈದಾನಕ್ಕೆ ಬಂದು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾನೆ ಈ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು ನಗರ ಹೊರವಲಯದ ಕುಡುಪು ಬಳಿ ಗುಂಪು ಹಲ್ಲೆಯಿಂದ ಹತ್ಯೆಗೀಡಾದ ವಲಸೆ ಕಾರ್ಮಿಕ ಕೇರಳಿಗ ಎಂದು ಗುರುತಿಸಿದ್ದು, ಮೃತದೇಹವನ್ನು ಪರಿಶೀಲಿಸಿ ಹತ್ಯೆಗೀಡಾದ ವ್ಯಕ್ತಿ ಅಶ್ರಫ್ ಎಂದು ಗುರುತು ಪತ್ತೆ ಹಚ್ಚಿರುವುದಾಗಿ ತಿಳಿದುಬಂದಿದೆ.
– ಮತ್ತೆ ಐವರು ಅರೆಸ್ಟ್, ಮೃತದೇಹ ಕೇರಳಕ್ಕೆ ಕೊಂಡೊಯ್ದ ಕುಟುಂಬಸ್ಥರು!
ದಕ್ಷಿಣ ಕನ್ನಡ ಜಿಲ್ಲೆಯ ವಾಮಂಜೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ಮುಸ್ಲಿಂ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದು ಮತ್ತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಆ ಮೂಲಕ ಈ ಪ್ರಕರಣದಲ್ಲಿ ಬಂಧಿತರಾದ ಒಟ್ಟು ಆರೋಪಿಗಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಬಂಧಿತ ಆರೋಪಿಗಳನ್ನು ಯತಿರಾಜ್, ಸಚಿನ್, ಅನಿಲ್, ಸುಶಾಂತ್ ಮತ್ತು ಆದರ್ಶ್ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ಈ ಹಿಂದೆ ಇದೇ ಪ್ರಕರಣದಲ್ಲಿ 15 ಮಂದಿಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಐವರನ್ನು ಬಂಧಿಸುವ ಮೂಲಕ ತನಿಖೆಗೆ ಮತ್ತಷ್ಟು ಬಲ ಬಂದಿದೆ ಎಂದಿದ್ದಾರೆ.
ಗುಂಪು ಹತ್ಯೆಯಾದ ವ್ಯಕ್ತಿಯನ್ನು ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ತಾಲೂಕಿನ ಪುಲ್ಪಳ್ಳಿ ಗ್ರಾಮದ ನಿವಾಸಿ ಮುಹಮ್ಮದ್ ಅಶ್ರಫ್(38) ಎಂದು ಗುರುತಿಸಲಾಗಿದ್ದು, ಮಾಧ್ಯಮಗಳಲ್ಲಿ ವಿಚಾರ ತಿಳಿಯುತ್ತಿದ್ದಂತೆಯೇ ಮೃತನ ಗುರುತನ್ನು ಆತನ ಕುಟುಂಬಸ್ಥರು ಪತ್ತೆ ಹಚ್ಚಿದ್ದಾರೆ. ಮೃತ ವ್ಯಕ್ತಿಯು ಸಣ್ಣ ಪ್ರಮಾಣದಲ್ಲಿ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ.