ಮಂಗಗಳಿಗೆ ಮತ್ತು ಬರಿಸುವ ಔಷಧಿ ಹಾಕಿದ ದುರುಳರು!
– ಹತ್ತಾರು ಮಂಗಗಳ ರೋಧನೆ: ಸ್ಥಳೀಯರ ರಕ್ಷಣೆ
– ಹೊಸನಗರ ತಾಲೂಕಿನ ಯಡೂರು ಬಳಿ ಘಟನೆ
NAMMUR EXPRESS NEWS
ಯಡೂರು : ನೂರಾರು ಮಂಗಗಳಿಗೆ ಮತ್ತು ಬರಿಸುವ ಮದ್ದು ನೀಡಿ ಯಡೂರಿನ ಹತ್ತಿರ ತಂದು ಹಾಕಿದ ಕಿಡಿಗೇಡಿಗಳ ವರ್ತನೆ ಇದೀಗ ಸ್ಥಳೀಯರಲ್ಲಿ ಆತಂಕ ಸೃಷ್ಟಿ ಮಾಡಿದೆ. ಅಲ್ಲದೆ ಈ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮಂಗಗಳ ಚೀರಾಟ ಕಂಡು ಅದೇ ದಾರಿಯಲ್ಲಿ ಹೋಗುತ್ತಿದ್ದ ಅನೇಕ ಜನ ಆದಷ್ಟು ಮಂಗಗಳಿಗೆ ನೀರು ಕುಡಿಸಿ ಆದಷ್ಟು ಮಂಗಗಳಿಗೆ ಚಿಕಿತ್ಸೆ ನೀಡಿ ಕಾಡಿನೊಳಗೆ ಬಿಡಲಾಯಿತು. ಈಗ ಮಂಗನ ಖಾಯಿಲೆ ಹೆಚ್ಚುತ್ತಿದ್ದು ಅರಣ್ಯ ಅಧಿಕಾರಿಗಳಿಗೆ ಹಾಗೂ ಆರೋಗ್ಯ ಇಲಾಖೆಗೂ ಈ ವಿಷಯ ತಿಳಿಸಲಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಈ ಕೃತ್ಯ ಎಸಗಿದವರಿಗೆ ಶಿಕ್ಷೆ ಆಗಬೇಕೆಂದು ಯಡೂರು ಸುಳುಗೋಡು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇದರ ಬಗ್ಗೆ ಹೆಚ್ಚಿನ ತನಿಖೆ ಆಗಬೇಕಿದೆ. ಪ್ರಾಣಿಗಳಿಗೇ ವಿಷವುಣಿಸುವ ಈ ರಾಕ್ಷಸ ಕೃತ್ಯ ನಡೆಸುವವರಿಗೆ ಬುದ್ದಿ ಕಲಿಸಬೇಕಿದೆ.
ಯುವಕರು, ಗ್ರಾಮಸ್ಥರ ಸೇವೆಗೆ ಮೆಚ್ಚುಗೆ!
ಹತ್ತಾರು ಮಂಗಗಳ ಜೀವ ಉಳಿಸಲು ಶತಪ್ರಯತ್ನ ಪಟ್ಟ ಸಂಪುಗೌಡ, ಸನತ್ ಕೊಳವಾಡಿ ,ದಿನೇಶ್ ಹಾಗೂ ಆ ದಾರಿಯಲ್ಲೇ ಸಾಗುತ್ತಿದ್ದ ಲಾರಿ ಡ್ರೈವರ್ ಒಬ್ಬರು, ಕೃಷ್ಣಮೂರ್ತಿ ಇವರೆಲ್ಲರ ಅವಿರತ ಶ್ರಮದಿಂದ ಹಲವು ಜೀವಗಳು ಉಳಿದಿವೆ. ಜೊತೆಗೆ ಯಡೂರು ಸುಳುಗೋಡು ಗ್ರಾಮದ ಎಲ್ಲಾ ಗ್ರಾಮಸ್ಥರು ಸಹಾಯಕ್ಕೆ ಬಂದಿದ್ದಾರೆ.
