ಒಟ್ಟಿಗೆ ಪಿಯುಸಿ ಪಾಸಾದ ಅಮ್ಮ ಮಗಳು!
– ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸ ನಿಲ್ಲಿಸಿದ್ದು, ಇದೀಗ ಮಗಳ ಜೊತೆಗೆ ಪಾಸ್!
– “ಓದಿಗೆ ವಯಸ್ಸಿನ ಹಂಗಿಲ್ಲ” ಎಂದ ಮಗಳು!
– ಸಮಾಜಕ್ಕೆ ಮಾದರಿಯಾದ ತಾಯಿ- ಮಗಳು
NAMMUR EXPRESS NEWS
ಬಂಟ್ವಾಳ: ತಾಲೂಕಿನ ನರಿಕೊಂಬು ಗ್ರಾಮದ ತಾಯಿ- ಮಗಳು ಈ ಬಾರಿ ಜೊತೆಯಾಗಿಯೇ ದ್ವಿತೀಯ ಪಿಯುಸಿ ಪಾಸ್ ಆಗಿ ಅಚ್ಚರಿ ಮೂಡಿಸಿದ್ದಾರೆ. ಮಾಣಿಮಜಲು ನಿವಾಸಿಗಳಾದ ತಾಯಿ ರವಿಕಲಾ ಹಾಗೂ ಅವರ ಪುತ್ರಿ ತ್ರಿಶಾ ಈ ಸಾಧನೆ ಮಾಡಿದವರು.
ರವಿಕಲಾ ಅವರು ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು ಪಾಸಾಗಿದ್ದರೆ, ತ್ರಿಶಾ ಪುತ್ತೂರು ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 586 ಅಂಕಗಳನ್ನು ಪಡೆದಿದ್ದಾರೆ.
1998ರಲ್ಲಿ SSLC ತೇರ್ಗಡೆಯಾಗಿದ್ದ ರವಿಕಲಾ, ಆರ್ಥಿಕ ಸಂಕಷ್ಟದಿಂದ ವಿದ್ಯಾಭ್ಯಾಸ ಮುಂದುವರಿಸಿರಲಿಲ್ಲ. ಹಲವು ವರ್ಷಗಳಿಂದ ನರಿಕೊಂಬಿನ ತಾರಿಪಡು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭವಾಗುತ್ತದೆ. ಹೀಗಾಗಿ ಕಾರ್ಯಕರ್ತೆಯರು ಪಿಯುಸಿ ಉತ್ತೀರ್ಣರನ್ನೇ ಎಂದು ತಜ್ಞ ಅಧಿಕಾರಿಯೊಬ್ಬರು ಹೇಳಿದರು ಛಲವಾಗಿ ಸ್ವೀಕರಿಸಿದ ರವಿಕಲಾ, ಪಿಯುಸಿ ಪರೀಕ್ಷೆ ಬರೆಯಲು ಮನಸ್ಸು ಮಾಡಿದರು. ಅದರಂತೆ ಮೂಡು ಸರಕಾರಿ ಕಾಲೇಜಿಗೆ ಬಂದು ಖಾಸಗಿಯಾಗಿ ಪರೀಕ್ಷೆ ಬರೆಯುವ ಕುರಿತು ಮಾಹಿತಿ ಕೇಳಿದ್ದರು. ಇದೀಗ ಎಸೆಸೆಲ್ಸಿ ಮುಗಿಸಿ ಬರೋಬ್ಬರಿ 27 ವರ್ಷಗಳ ಬಳಿಕ ಮೊದಲ ಪ್ರಯತ್ನದಲ್ಲೇ ಪಿಯುಸಿ ಉತ್ತೀರ್ಣರಾಗಿ ಸಾಧನೆ ಮಾಡಿದ್ದಾರೆ.
ಜೀವನದಲ್ಲಿ ಮುಂದೆ ಬರಲು ಈ ಪರೀಕ್ಷೆ ಬರೆದಿರುವೆ. ಪತಿ, ಮಕ್ಕಳು, ನಾದಿನಿ, ಇಲಾಖೆಯವರ ಸಹಕಾರದಿಂದ ಇದು ಸಾಧ್ಯವಾಗಿದೆ. ಬಹಳ ಸಂತೋಷವಾಗಿದೆ. ಕೆಲಸದ ಒತ್ತಡದ ನಡುವೆಯೂ ಆತ್ಮೀಯರಿಂದ ಪುಸ್ತಕ ಕೇಳಿ ಓದಿದ್ದು ಸಾರ್ಥಕವಾಯಿತು ಎನ್ನುತ್ತಾರೆ ರವಿಕಲಾ.
“ಓದಿಗೆ ವಯಸ್ಸಿನ ಹಂಗಿಲ್ಲ ಎಂದು ಸಾಬೀತುಪಡಿಸಿರುವ ನನ್ನ ಅಮ್ಮನೇ ನನಗೆ ಮಾದರಿ. ಅವರ ಕುರಿತು ಹೆಮ್ಮೆ ಇದೆ” ಎನ್ನುತ್ತಾಳೆ ತ್ರಿಶಾ.
