ಮಂಗಳೂರಿನ ಮಾಣೂರು ದೇವಸ್ಥಾನದ ವಿಶೇಷ ಆಕರ್ಷಣೆ ನವಿಲು
NAMMUR EXPRESS NEWS
ಮಾಣೂರಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ನವಿಲು ‘ಮಯೂರ’ ಭಕ್ತರೊಂದಿಗೆ ಬೆರೆಯುತ್ತಾ, ಸೆಲ್ಫಿಗೆ ನರ್ತನ ಮಾಡುತ್ತದೆ. ಆರು ವರ್ಷಗಳಿಂದ ದೇವಸ್ಥಾನದಲ್ಲಿ ಇರುವ ಈ ನವಿಲು, ಅರ್ಚಕ ರಾಜೇಶ್ ಭಟ್ ಕುಟುಂಬದೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದೆ.
ಕಾಡು ನಾಶವಾಗಿ ನಾಡಿಗೆ ಒಂದೊಂದೇ ಪ್ರಾಣಿ ಪಕ್ಷಿಗಳು ಲಗ್ಗೆ ಇಡುತ್ತಿವೆ. ಅದರಲ್ಲೂ ರಾಷ್ಟ್ರ ಪಕ್ಷಿ ನವಿಲು ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಗಳಲ್ಲಿ ಕಾಣಸಿಗೋದು ಸರ್ವೇ ಸಾಮಾನ್ಯವಾಗಿದೆ. ದೇವಸ್ಥಾನ ಪರಿಸರದಲ್ಲಿಯೇ ಇರುವ ಈ ನವಿಲು ಭಕ್ತರೊಂದಿಗೆ ಸುಲಭದಲ್ಲಿ ಬೆರೆಯುತ್ತದೆ. ಅವರ ಸೆಲ್ಫಿಗೆ ನರ್ತನ ಮಾಡಿ ಪೋಸ್ ಕೊಡುತ್ತದೆ. ಮೊಬೈಲ್ ಕಂಡರೆ ಎಷ್ಟು ಹೊತ್ತು ಬೇಕಾದರೂ ಗರಿಬಿಚ್ಚಿ ನರ್ತಿಸುತ್ತದೆ. ಅಲ್ಲದೇ ಮಾಣೂರಿನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ನವಿಲು ಮಾತ್ರ ಇತರ ನವಿಲಿಗಿಂತ ಕೊಂಚ ಡಿಫರೆಂಟ್.
ಈ ನವಿಲು ಕಳೆದ ಆರು ವರ್ಷಗಳಿಂದ ಈ ದೇವಸ್ಥಾನದಲ್ಲಿದೆ. ಸ್ಥಳೀಯರೊಬ್ಬರು ತಮಗೆ ದೊರೆತ ಮೂರು ತತ್ತಿಯನ್ನು ಕೋಳಿಯ ಕಾವಿಗೆ ಇಟ್ಟಿದ್ದರು. ತತ್ತಿ ಒಡೆದು ಕೋಳಿ ಮರಿಯೊಂದಿಗೆ ಮೂರು ನವಿಲಿನ ಮರಿಗಳು ಹೊರಬಂದಿತ್ತು. ಅವರು ಈ ನವಿಲು ಮರಿಗಳನ್ನು ದೇವಸ್ಥಾನಕ್ಕೆ ಒಪ್ಪಿಸಿದ್ದರು. ಎರಡೂ ಎಲ್ಲೋ ಹೋಗಿವೆ. ಆದರೆ ಈ ನವಿಲು ಮಾತ್ರ ದೇವಸ್ಥಾನದ ಪರಿಸರ, ಸುತ್ತಮುತ್ತಲಿನ ಮನೆಗಳ ಪರಿಸರದಲ್ಲಿಯೇ ಇದೆ. ಈ ನವಿಲಿಗೆ ದೇವಾಲಯದ ಅರ್ಚಕ ರಾಜೇಶ್ ಭಟ್ ‘ಮಯೂರ’ ಎಂದು ಹೆಸರಿಟ್ಟಿದ್ದಾರೆ.
ಅರ್ಚಕ ರಾಜೇಶ್ ಭಟ್ ಹಾಗೂ ಅವರ ಮನೆಯವರೊಂದಿಗೆ ಬಹಳ ಆತ್ಮೀಯವಾಗಿ ವರ್ತಿಸುತ್ತದೆ. ಕರೆಗೆ ಸ್ಪಂದಿಸಿ ಮೆಲ್ಲನೆ ಹೆಜ್ಜೆಯಿರಿಸಿ ಹತ್ತಿರಕ್ಕೆ ಬರುತ್ತದೆ. ಅವರು ಮಾಡುವ ಹಾವಭಾವಕ್ಕೆ ತಕ್ಕಂತೆ ಸ್ಪಂದಿಸುತ್ತದೆ. ಈ ಮಯೂರ ಪ್ರತಿದಿನವೂ ರಾತ್ರಿ ಪೂಜೆಯ ವೇಳೆ ನಮಸ್ಕಾರ ಮಂಟಪಕ್ಕೆ ತಪ್ಪದೇ ಬರುತ್ತದೆ. ನವಿಲಿನ ಎರಡೂ ಕಾಲಿಗೆ ರಾಜೇಶ್ ಭಟ್ ಬೆಳ್ಳಿಯ ಗೆಜ್ಜೆ ಹಾಕಿದ್ದಾರೆ. ಮನೆ, ದೇವಸ್ಥಾನದ ಸುತ್ತಮುತ್ತ ಮನಬಂದಂತೆ ಖುಷಿಯಿಂದ ಇರುವ ನವಿಲಿಗೂ ರಾಜೇಶ್ ಭಟ್ ಕುಟುಂಬ ಎಂದರೆ ಅಚ್ಚುಮೆಚ್ಚು. ಒಟ್ಟಿನಲ್ಲಿ ಕಾಡು ಪಕ್ಷಿಯಾದರೂ ಈ ನವಿಲು ಮನುಷ್ಯ ಪ್ರೀತಿಯನ್ನು ಬಯಸುತ್ತಿರುವುದು ಸೋಜಿಗವೇ ಸರಿ.