ಭಾರತ-ಮಾಯನ್ಮಾರ್ ಗಡಿಯ ಬಳಿ 10 ಉಗ್ರರನ್ನು ಹೊಡೆದುರುಳಿಸಿದ ಸೇನೆ
* ಉಗ್ರರನ್ನು ಹುಡುಕಿ ಹುಡುಕಿ ಹೊಡೆಯುತ್ತಿರುವ ಭಾರತೀಯ ಸೇನೆ
* ಉಗ್ರರ ನೆಲೆಯಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ
NAMMUR EXPRESS NEWS
ಮಣಿಪುರ: ಭಾರತದೊಳಗೆ ನುಗ್ಗಿದ ಪಾಕ್ ಬೆಂಬಲಿತ ಉಗ್ರರನ್ನು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೇನೆಯಿಂದ ಬೇಟೆಯಾಡುತ್ತಿರುವ ಬೆನ್ನಲ್ಲಿಯೇ, ಮಾಯನ್ಮಾರ್ ಗಡಿಯಲ್ಲಿ ಕಾಣಸಿಕೊಂಡು ಉಪಟಳ ನೀಡುತ್ತಿದ್ದ 10 ಉಗ್ರರನ್ನು ಅಸ್ಸಾಂ ರೈಫಲ್ಸ್ ಪಡೆಯು ಮಣಿಪುರದಲ್ಲಿ ಹತ್ಯೆಗೈದಿದೆ.
ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ಬುಧವಾರ ಅಸ್ಸಾಂ ರೈಫಲ್ಸ್ ಮತ್ತು ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಕನಿಷ್ಠ 10 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ-ಮಾಯನ್ಮಾರ್ ಗಡಿಯ ಬಳಿ ಇರುವ ನ್ಯೂ ಸಮತಲ್ ಗ್ರಾಮದ ಸಮೀಪ ಶಸ್ತ್ರಸಜ್ಜಿತ ಉಗ್ರರ ಇರುವಿಕೆ ಬಗ್ಗೆ ಗುಪ್ತಚರ ಮಾಹಿತಿ ಸಿಕ್ಕ ನಂತರ ಈ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ಸೇನೆಯ ಪೂರ್ವ ಕಮಾಂಡ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ತಿಳಿಸಿದೆ. ಅಸ್ಸಾಂ ರೈಫಲ್ಸ್ ತಂಡವು ತಕ್ಷಣವೇ ಸ್ಥಳಕ್ಕೆ ತಲುಪಿ ಕಾರ್ಯಾಚರಣೆ ನಡೆಸಿತು. ಭದ್ರತಾ ಪಡೆಗಳು ಇನ್ನೂ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರೆಸಿವೆ.
* 10 ಉಗ್ರರ ಹತ್ಯೆ,ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ
ಮಣಿಪುರದ ಚಂದೇಲ್ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಶಂಕಿತ ಉಗ್ರಗಾಮಿಗಳು ಭದ್ರತಾ ಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದರು. ಪ್ರತಿಯಾಗಿ ಯೋಧರು ಕಾರ್ಯತಂತ್ರದಿಂದ ಕಾರ್ಯಾಚರಣೆ ನಡೆಸಿದ್ದು, 10 ಉಗ್ರಗಾಮಿಗಳನ್ನು ಹತ್ಯೆ ಮಾಡಲಾಗಿದೆ. ಕಾರ್ಯಾಚರಣೆಯ ಭಾಗವಾಗಿ ಭದ್ರತಾ ಪಡೆಗಳು ಪ್ರದೇಶವನ್ನು ಸುತ್ತುವರೆದಿದ್ದವು. ಆಗ ಅಡಗಿಕೊಂಡಿದ್ದ ಉಗ್ರರು ಗುಂಡಿನ ದಾಳಿ ನಡೆಸಿದರು, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಯಿತು. ಸೇನೆಯು ಈ ಕಾರ್ಯಾಚರಣೆಯನ್ನು ನಿಖರ ಮತ್ತು ಯೋಜಿತ ಎಂದು ಬಣ್ಣಿಸಿದೆ.
ಎನ್‌ಕೌಂಟರ್ ನಂತರ ಸ್ಥಳದಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.
