ಪಹಲ್ಗಾಮ್ ಘಟನೆ ಖಂಡಿಸಿ ಸುಳ್ಯ ಸ್ಥಳೀಯರಿಂದ ಪ್ರತಿಭಟನೆ!
– ಸ್ವಯಂಪ್ರೇರಿತ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರೊಟೆಸ್ಟ್
– ರಿಕ್ಷಾ ಚಾಲನೆ ಸ್ಥಗಿತಗೊಳಿಸಿ ಘಟನೆ ಖಂಡಿಸಿದ ಸ್ಥಳೀಯರು
NAMMUR EXPRESS NEWS
ಸುಳ್ಯ: ಪಹಲ್ಗಾಮ್ ಘಟನೆ ಖಂಡಿಸಿ ಸ್ಥಳೀಯರು ಏ. 23ರಂದು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟಿಸಿದರು.
ಕೆಲವು ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದವು. ನಗರದಲ್ಲಿ ಬೆಳಗ್ಗೆ 11ರಿಂದ 12ರವರೆಗೆ ವರ್ತಕರು ಸ್ವಯಂಪ್ರೇರಿತ ಬಂದ್ ನಡೆಸಿದರು. ಗುತ್ತಿಗಾರು, ಅರಂತೋಡು ಭಾಗದಲ್ಲೂ ವರ್ತಕರು ಅಂಗಡಿ ಮುಚ್ಚಿ ಪ್ರತಿಭಟಿಸಿದರು.
ರಿಕ್ಷಾ ಸಂಚಾರ ಸ್ಥಗಿತ!
ತಾಲೂಕಿನ ಹರಿಹರ ಪಳ್ಳತ್ತಡ್ಕ, ಗುತ್ತಿಗಾರು, ಅರಂತೋಡು, ಜಾಲೂಂರು, ಪಂಜದಲ್ಲಿ ಅಟೋ ರಿಕ್ಷಾ ಚಾಲಕರು ಬೆಳಗ್ಗೆ ಒಂದರಿಂದ 2 ತಾಸು ರಿಕ್ಷಾ ಚಾಲನೆಯನ್ನು ಸ್ಥಗಿತಗೊಳಿಸಿ ಘಟನೆಯನ್ನು ಖಂಡಿಸಿದರು.
ರಾಷ್ಟ್ರೀಯವಾದಿ ಸಂಘಟನೆಗಳ ನೇತೃತ್ವದಲ್ಲಿ ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನಾ ಸಭೆಯನ್ನು ನಡೆಸಿ ಘಟನೆಯನ್ನು ಖಂಡಿಸಿತು.
ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಉಗ್ರರ ದಾಳಿ ಖಂಡನೀಯ. ಈ ರೀತಿಯ ಘಟನೆಗಳು ಮುಂದೆ ನಡೆಯದಂತೆ ತಡೆಯಲು ಎಲ್ಲರೂ ಒಗ್ಗಟ್ಟಾಗಬೇಕಿದೆ. ಉಗ್ರರಿಗೆ ತಕ್ಕ ಶಿಕ್ಷೆ ಆಗಬೇಕು. ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ನಾವೆಲ್ಲರೂ ಇನ್ನಷ್ಟು ಬಲ ಕೊಡೋಣ. ಭಯೋತ್ಪಾದನೆ ಕೊನೆಗಾಣಿಸಲು ಸೈನಿಕರಿಗೆ ಬಲ ತುಂಬೋಣ ಎಂದರು.
ಸುಳ್ಯ ನ.ಪಂ. ಮಾಜಿ ವಿನಯ ಕುಮಾರ್ ಕಂದಡ್ಕ ಮಾತನಾಡಿ, ಹಿಂದೂ ಸಮಾಜ ಇನ್ನಾದರೂ ಎಚ್ಚೆತ್ತು ಕೊಳ್ಳಬೇಕು ಎಂದರು.
ವರ್ತಕರಾದ ಜಿ.ಜಿ. ನಾಯಕ್ ಮಾತನಾಡಿ, ದೇಶದ ಅಭಿವೃದ್ಧಿ ಬಗ್ಗೆ ತುಡಿತ ಇದ್ದವರಿಗೆ ನಿನ್ನೆಯ ಘಟನೆಯಿಂದ ನೋವಾಗಿದೆ. ಮನಸ್ಸನ್ನು ಕಲಕಿದೆ. ಇದಕ್ಕೆ ಕೇಂದ್ರ ಸರಕಾರ ಪ್ರತ್ಯುತ್ತರ ನೀಡಬೇಕು ಎಂದು ಹೇಳಿದರು.
ಉದ್ಯಮಿ ರಾಜೇಶ್ ಶೆಟ್ಟಿ ಮೇನಾಲ ಮಾತನಾಡಿ, ಧರ್ಮ ಒಡೆಯುವ ಕೆಲಸ ಕೆಲವರ ನಿರಂತರ ಪ್ರಯತ್ನಕ್ಕೆ ನಾವು ಆಸ್ಪದ ನೀಡಬಾರದು ಎಂದರು. ಬಿಜೆಪಿ ಮಂಡಲ ಸಮಿತಿ ಕೋಶಾಧಿಕಾರಿ ಸುಭೋದ್ ಶೆಟ್ಟಿ ಮೇನಾಲ ಮಾತನಾಡಿ, ದೇಶ ದ್ರೋಹದ ಘಟನೆ ನಡೆಯಬಾರದು. ನಾವು ಜಾಗೃತರಾಗೋಣ ಎಂದರು.
ನ.ಪಂ. ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ, ಬಿಜೆಪಿ ಮಂಡಲ ಸಮಿತಿ ಕೋಶಾ ಧಿಕಾರಿ ಸುಭೋದ್ ಶೆಟ್ಟಿ ಮೇನಾಲ, ಪ್ರಮುಖರಾದ ಡಾ| ಮನೋಜ್ ಅಡ್ಡಂತಡ್ಕ, ಹರೀಶ್ ಕಂಜಿಪಿಲಿ ಮತ್ತಿತರರು ಭಾಗವಹಿಸಿದ್ದರು
