Categories
ರಾಜ್ಯ

ಪಟೇಲ್ ಶಿವರಾಂ ವಿಧಿವಶ: ಎಲ್ಲೆಡೆ ಸಂತಾಪ

ಪಟೇಲ್ ಶಿವರಾಂ ವಿಧಿವಶ: ಎಲ್ಲೆಡೆ ಸಂತಾಪ
– ಮಾಜಿ ಪ್ರಧಾನಿ ದೇವೇಗೌಡರು ಸೇರಿ ಅಪಾರ ಮಂದಿಯ ಕಂಬನಿ
– ಹುಟ್ಟೂರಲ್ಲಿ ಅಂತ್ಯಕ್ರಿಯೆ: ಹಾಸನದ ಹಿರಿಯ ರಾಜಕಾರಣಿ

NAMMUR EXPRESS NEWS
ಹಾಸನ: ಹಾಸನ ಜಿಲ್ಲೆಯ ಹಿರಿಯ ರಾಜಕೀಯ ಮುಖಂಡ, ಜಿಲ್ಲಾ ಪರಿಷತ್, ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪರಮಾಪ್ತ ಪಟೇಲ್ ಶಿವರಾಂ(೭೭) ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಹಾಸನ ಜಿಲ್ಲೆಯ ಹಿರಿಯ ರಾಜಕಾರಣಿಯಾಗಿದ್ದ ಶಿವರಾಂ ಅವರ ಸಾವಿಗೆ ಎಲ್ಲೆಡೆ ಕಂಬನಿ ವ್ಯಕ್ತವಾಗುತ್ತಿದೆ. ಕಳೆದ ಹಲವು ತಿಂಗಳಿಂದ ವಯೋ ಸಹಜ ಅನಾರೋಗ್ಯದಿಂದ ಕುವೆಂಪುನಗರದ ಹೌಸಿಂಗ್ ಬೋರ್ಡ್‌ನಲ್ಲಿರುವ ತಮ್ಮ ನಿವಾಸದಲ್ಲೇ ಉಳಿದಿದ್ದ ಶಿವರಾಂ ಅವರು, ಇಂದು ಮುಂಜಾನೆ ೪.೩೦ರ ಸುಮಾರಿಗೆ ಕೊನೆಯುಸಿರೆಳೆದರು. ಈ ಮೂಲಕ ಹಿರಿಯ ರಾಜಕಾರಣಿಯೊಬ್ಬರನ್ನು ಜಿಲ್ಲೆ ಕಳೆದುಕೊಂಡಿದೆ. ಹೆಚ್.ಡಿ.ದೇವೇಗೌಡರ ಕಟ್ಟಾ ಅಭಿಮಾನಿಯಾಗಿದ್ದ ಪಟೇಲ್ ಶಿವರಾಂ ಅವರು, ಅದೇ ಕಾರಣಕ್ಕೆ ಆಗಿನ ಜನತಾದಳ ಮೂಲಕವೇ ರಾಜಕೀಯ ಆರಂಭಿಸಿದರು. ೧೯೮ ರ ದಶಕದಲ್ಲಿ ಆಗಿದ್ದ ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಪಟೇಲ್ ಶಿವರಾಂ ಮೊದಲ ಪ್ರಯತ್ನದಲ್ಲೇ ಚುನಾಯಿತರಾಗಿ ನಂತರ ಸಾಲಗಾಮೆ ಬಾಲಕೃಷ್ಣಮೂರ್ತಿ ಬಳಿಕ ನಾಲ್ಕು ವರ್ಷಗಳ ಕಾಲ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿದರು. ನಂತರ ಜಿಲ್ಲಾ ಜನತಾದಳದ ಅಧ್ಯಕ್ಷರಾಗುವ ಮೂಲಕ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ೨೦೦೬ ರಿಂದ ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿ ರೈತರು, ಗ್ರಾಹಕರ ಆಶೋತ್ತರಗಳಿಗೆ ಸ್ಪಂದಿಸಿದರು. ಜೊತೆಗೆ ಹಾಲಿ ಇರುವ ಬ್ಯಾಂಕ್ ಕಟ್ಟಡ ತಲೆ ಎತ್ತಿದ್ದು ಇವರ ಕಾಲದಲ್ಲೇ. ನವದೆಹಲಿಯ ಕ್ರಿಪ್ಕೋ ಸದಸ್ಯರೂ ಆಗಿದ್ದ ಶಿವರಾಂ ಅವರು, ತರುವಾಯ ಮೊದಲ ಬಾರಿಗೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರೂ ಆದರು. ಅದೇ ಸ್ಥಾನಕ್ಕೆ ಎರಡನೇ ಬಾರಿ ಸ್ಪರ್ಧಿಸಿ ಪರಾಭವಗೊಂಡರು. ಆ ಸೋಲಿನ ಬಳಿಕ ಸಕ್ರಿಯ ರಾಜಕೀಯದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಆದರೂ ದೇವೇಗೌಡರು ಜೆಡಿಎಸ್ ರಾಜ್ಯ ಉಪಾಧ್ಯಕ್ಷರನ್ನಾಗಿ ಮಾಡಿದ್ದರು. ಹಾಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿದ್ದರು. ಇತ್ತೀಚೆಗೆ ರಾಜ್ಯಮಟ್ಟದ ಸಹಕಾರ ರತ್ನ ಪ್ರಶಸ್ತಿ ಸಹ ಇವರಿಗೆ ಒಲಿದಿತ್ತು. ಶಿವರಾಂ ಅವರು ಮೂವರು ಪುತ್ರಿಯರು, ಒಬ್ಬ ಮಗ ಹಾಗೂ ಅಪಾರ ಬಂಧು ಬಳಗ ಅಗಲಿದ್ದಾರೆ. ಮಧ್ಯಾಹ್ನ ನಂತರ ಮೃತರ ಅಂತ್ಯಕ್ರಿಯೆ ಮೃತರ ಸ್ವಗ್ರಾಮ ದೊಡ್ಡಗೇಣಿಗೆರೆಯಲ್ಲಿ ನೆರವೇರಿತು. ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಶಾಸಕ ಹೆಚ್.ಪಿ.ಸ್ವರೂಪ್ ಪ್ರಕಾಶ್ ಮೆರವಣಿಗೆ ಉದ್ದಕ್ಕೂ ಭಾಗಿಯಾದರು. ನಂತರ ಅಂತ್ಯಕ್ರಿಯೆ ನೆರವೇರುವವರೆಗೂ ಸ್ಥಳದಲ್ಲೇ ಇದ್ದರು. ಹಲವರಿಂದ ಅಂತಿಮ ದರ್ಶನ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಸಚಿವ ಬಿ.ಶಿವರಾಂ, ಶಾಸಕರಾದ ಹೆಚ್.ಡಿ.ರೇವಣ್ಣ, ಸ್ವರೂಪ್ ಪ್ರಕಾಶ್, ಸಿಮೆಂಟ್ ಮಂಜು, ಸಿ.ಎನ್.ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ, ಮಾಜಿ ಶಾಸಕರಾದ ಎ.ಟಿ.ರಾಮಸ್ವಮಿ, ಪ್ರೀತಂ ಜೆ.ಗೌಡ, ಹೆಚ್.ಕೆ.ಕುಮಾರಸ್ವಾಮಿ, ಕೆ.ಎಸ್.ಲಿಂಗೇಶ್, ಎಂ.ಎ.ಗೋಪಾಲಸ್ವಾಮಿ, ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ಮೊದಲಾದವರು ಪಟೇಲ್ ಶಿವರಾಂ ಅವರ ಅಂತಿಮ ದರ್ಶನ ಪಡೆದರು. ದೇವೇಗೌಡರು, ರೇವಣ್ಣ, ಸ್ವರೂಪ್ ಪ್ರಕಾಶ್ ಅವರು ಕಣ್ಣೀರಿಟ್ಟರು. ಉಳಿದವರೂ ಕಂಬನಿ ಮಿಡಿದರು.

ಕುಮಾರಸ್ವಾಮಿ ಸಂತಾಪ

ನಮ್ಮ ತಂದೆಯವರ ಆತ್ಮೀಯರೂ ಆಗಿದ್ದ ಹಿರಿಯರಾದ ಪಟೇಲ್ ಶಿವರಾಂ ಅಗಲಿಕೆ ವೈಯಕ್ತಿಕವಾಗಿ ಅತೀವ ದುಃಖ ತಂದಿದೆ. ಆರಂಭದಿಂದ ಕಡೆಯವರೆಗೂ ನಮ್ಮ ಪಕ್ಷದಲ್ಲೇ ಇದ್ದ ಶಿವರಾಂ ಅವರು, ಜಿಲ್ಲೆಯಲ್ಲಿ ನಮ್ಮ ಪಕ್ಷ ಸಂಘಟನೆಗೆ ಅತ್ಯಂತ ಪ್ರಾಮಾಣಿಕವಾಗಿ ಪಕ್ಷ ದುಡಿದಿದ್ದರು. ಅವರ ಮಾರ್ಗದರ್ಶನದಿಂದ ನಾನೂ ಸಾಕಷ್ಟು ಕಲಿತಿದ್ದೇನೆ. ಅವರ ಆದರ್ಶ ನನಗೆ ಮಾರ್ಗದರ್ಶನ. ಅವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.

-ಹೆಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ ರೇವಣ್ಣ ಸಂತಾಪ

ಜಿಲ್ಲೆಯಲ್ಲಿ ಜನಾನುರಾಗಿ ನಾಯಕರಾಗಿದ್ದ ಪಟೇಲ್ ಶಿವರಾಂ ಅವರು ಎಂಎಲ್‌ಸಿಯಾಗಿ ಮತ್ತು ಸಹಕಾರಿ ಕ್ಷೇತ್ರದಲ್ಲೂ ಉತ್ತಮ ಕೆಲಸ ಮಾಡಿದ್ದರು.
ಅವರದೇ ಆದ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದರು.ಹಾಲಿ ಅಪೆಕ್ಸ್ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದರು. ಇಂದು ಜಿಲ್ಲೆಯ ಹಿರಿಯ ಮುಖಂಡರನ್ನು ನಾವು ಕಳೆದುಕೊಂಡಿದ್ದೇವೆ. ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ.
-ಹೆಚ್.ಡಿ.ರೇವಣ್ಣ, ಮಾಜಿ ಸಚಿವ

ಶಾಸಕ ಸ್ವರೂಪ್ ಸಂತಾಪ

ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿ ತಮ್ಮದೇ ಛಾಪು ಮೂಡಿಸಿದ್ದರು. ಹಲವು ದಶಕಗಳಿಂದ ರಾಜಕೀಯದಲ್ಲಿದ್ದರೂ ಸಣ್ಣ ಕಪ್ಪು ಚುಕ್ಕೆ ಇಲ್ಲದಂತೆ ಪ್ರಾಮಾಣಿಕ, ನಿಷ್ಠೆಯಿಂದ ಕೆಲಸ ಮಾಡಿದ್ದರು. ನಮ್ಮ ತಂದೆಯ ಆಪ್ತರೂ ಆಗಿದ್ದ ಪಟೇಲ್ ಶಿವರಾಂ ಅವರ ಅಗಲಿಕೆ ಅತೀವ ನೋವು ತಂದಿದೆ.
-ಸ್ವರೂಪ್ ಪ್ರಕಾಶ್, ಶಾಸಕ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.