ಶಿವಮೊಗ್ಗ : ಕಾರಾಗೃಹದ ಖೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆ..!
– ಶಿವಮೊಗ್ಗ : ಸಂಘದ ಸಾಲದ ವಿಚಾರವಾಗಿ ಪತ್ನಿಯ ಮೂಗನ್ನೆ ಕಚ್ಚಿ ತುಂಡರಿಸಿದ ಪತಿ..!!
– ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪೊಲೀಸ್ ಚೌಕಿಗೆ ಡಿಕ್ಕಿ..!!
– ಶಿವಮೊಗ್ಗ : ತುಂಗಾ ಮೇಲ್ದಂಡೆ ನಾಲೆಗೆ ಬಿದ್ದ ಆಕಳು ರಕ್ಷಣೆ!
NAMMUR EXPRESS NEWS
ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹದ ಖೈದಿಯೊಬ್ಬನ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಪತ್ತೆಯಾಗಿದೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ಮೊಬೈಲ್ ಫೋನ್ ಹೊರಗೆ ತೆಗೆಯಲಾಗಿದೆ. ಖೈದಿ ದೌಲತ್ ಅಲಿಯಾಸ್ ಗುಂಡ (30) ಎಂಬಾತನ ಹೊಟ್ಟೆಯಲ್ಲಿ ಒಂದು ಇಂಚು ಅಗಲದ, ಮೂರು ಇಂಚು ಉದ್ದದ ಮೊಬೈಲ್ ಫೋನ್ ಪತ್ತೆಯಾಗಿದೆ. ಕಲ್ಲು ನುಂಗಿದ್ದೀನಿ ಅಂತಾ ಆಸ್ಪತ್ರೆಗೆ ಬಂದ ಪ್ರಕರಣವೊಂದರಲ್ಲಿ ದೌಲತ್ ಅಲಿಯಾಸ್ ಗುಂಡನಿಗೆ ಶಿವಮೊಗ್ಗದ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಈತ ಜೂನ್ 24ರಂದು ಜೈಲಿನ ಆಸ್ಪತ್ರೆಗೆ ಬಂದು, ತಾನು ಕಲ್ಲು ನುಂಗಿದ್ದೇನೆ ಎಂದು ವೈದ್ಯರಿಗೆ ತಿಳಿಸಿದ್ದ. ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಿದ್ದರು. ಎಕ್ಸ್‌ರೇ ಮಾಡಿದಾಗ ಖೈದಿ ದೌಲತ್‌ನ ಹೊಟ್ಟೆಯಲ್ಲಿ ಹೊರಗಿನ ವಸ್ತು ಇರುವುದು ಗೊತ್ತಾಗಿತ್ತು. ಶಸ್ತ್ರಚಿಕಿತ್ಸೆ ನಡೆಸಿದಾಗ ಮೊಬೈಲ್ ಫೋನ್ ಪತ್ತೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಿಷೇಧವಿದ್ದರು ಜೈಲಿನೊಳಗೆ ಮೊಬೈಲ್ ಫೋನ್ ತಲುಪಿರುವ ಕುರಿತು ತನಿಖೆ ನಡೆಸುವಂತೆ ಕೇಂದ್ರ ಕಾರಾಗೃಹದ ಅಧೀಕ್ಷಕ ರಂಗನಾಥ್.ಪಿ ಅವರು ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
– ಶಿವಮೊಗ್ಗ : ಸಂಘದ ಸಾಲದ ವಿಚಾರವಾಗಿ ಪತ್ನಿಯ ಮೂಗನ್ನೆ ಕಚ್ಚಿ ತುಂಡರಿಸಿದ ಪತಿ..!!
ಶಿವಮೊಗ್ಗ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಜಗಳವಾಗಿ ಪತಿಯೆ ಪತ್ನಿಯ ಮೂಗನ್ನು ಕಚ್ಚಿ ತುಂಡರಿಸಿದ್ದಾನೆ. ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ತುಂಡಾದ ಮೂಗಿನೊಂದಿಗೆ ಪತ್ನಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿದ್ದಾಳೆ. ವಿಜಯ್ ಮತ್ತು ವಿದ್ಯಾ ದಂಪತಿ ಧರ್ಮಸ್ಥಳ ಸ್ವಸಹಾಯ ಸಂಘದಿಂದ ₹2 ಲಕ್ಷ ಸಾಲ ಪಡೆದಿದ್ದರು. ಇಬ್ಬರು ಸೇರಿ ಕಂತು ಕಟ್ಟುತ್ತಿದ್ದರು. ಕಳೆದ ಎರಡು ವಾರ ಹಣವಿಲ್ಲದ್ದರಿಂದ ವಿದ್ಯಾ ಸಾಲದ ಕಂತು ಪಾವತಿಸಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಂಘದವರು ಪತಿ ವಿಜಯ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಈ ವಿಚಾರವಾಗಿ ದಂಪತಿ ಮಧ್ಯೆ ಜಗಳವಾಗಿತ್ತು ಎಂದು ಆರೋಪಿಸಲಾಗಿದೆ. ಜಗಳದ ಸಂದರ್ಭ ವಿದ್ಯಾಳ ಮೂಗನ್ನೇ ಪತಿ ವಿಜಯ್ ಕಚ್ಚಿ ತುಂಡರಿಸಿದ್ದಾನೆ. ಸ್ಥಳೀಯರು ಗಲಾಟೆ ಬಿಡಿಸಿದ್ದಾರೆ. ತುಂಡಾದ ಮೂಗಿನೊಂದಿಗೆ ವಿದ್ಯಾ ಚನ್ನಗಿರಿಯ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಮೂಗು ಜೋಡಿಸುವ ಶಸ್ತ್ರಚಿಕಿತ್ಸೆಗಾಗಿ ಸರ್ಜಿ ಆಸ್ಪತ್ರೆಗೆ ವಿದ್ಯಾಳನ್ನು ರವಾನಿಸಲಾಗಿದೆ.
ಈ ಹಿನ್ನೆಲೆ ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಪ್ರಕರಣವನ್ನು ಚನ್ನಗಿರಿ ಠಾಣೆಗೆ ವರ್ಗಾಯಿಸಲಾಗಿದೆ.
– ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಲಾರಿ ಪೊಲೀಸ್ ಚೌಕಿಗೆ ಡಿಕ್ಕಿ..!!
ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಲಾರಿಯೊಂದು ಕಳೆದ ರಾತ್ರಿ ಅಮೀರ್ ಅಹಮದ್ ಸರ್ಕಲ್‌ನಲ್ಲಿದ್ದ ಪೊಲೀಸ್ ಚೌಕಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾರಿಗು ಸಮಸ್ಯೆಯಾಗಿಲ್ಲ. ಸರ್ಕಲ್‌ನಲ್ಲಿ ಸ್ಮಾರ್ಟ್ ಸಿಟಿ ವತಿಯಿಂದ ಸ್ಥಾಪಿಸಲಾಗಿದ್ದ ಪೊಲೀಸ್ ಚೌಕಿಗೆ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಪೊಲೀಸ್ ಚೌಕಿ ಹಾನಿಗೀಡಾಗಿದೆ. ಈ ಸಂದರ್ಭ ಚೌಕಿಯ ಒಳಗೆ ಪೊಲೀಸರು ಇರಲಿಲ್ಲ. ಹಾಗಾಗಿ ಅನಾಹುತ ತಪ್ಪಿದೆ. ನಾಲ್ಕು ದಿನದ ಹಿಂದೆ ಇದೇ ಸರ್ಕಲ್‌ನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್ ಪಲ್ಟಿಯಾಗಿತ್ತು.
– ಶಿವಮೊಗ್ಗ : ತುಂಗಾ ಮೇಲ್ದಂಡೆ ನಾಲೆಗೆ ಬಿದ್ದ ಆಕಳು ರಕ್ಷಣೆ!
ಶಿವಮೊಗ್ಗ : ತುಂಗಾ ಮೇಲ್ದಂಡೆ ನಾಲೆಗೆ ಬಿದ್ದ ಆಕಳೊಂದನ್ನು ಅಗ್ನಿಶಾಮಕ ದಳ ರಕ್ಷಣೆ ಮಾಡಿದ ಘಟನೆ ಶಿವಮೊಗ್ಗ ನಗರದ ಹೊರವಲಯ ಜೆ ಹೆಚ್ ಪಟೇಲ್ ಬಡಾವಣೆ ಸಮೀಪ ನಡೆದಿದೆ.
ಸುಮಾರು ಅರ್ಧ ಗಂಟೆಗೂ ಅಧಿಕ ಕಾಲ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ ತಂಡ, ನಾಲೆಯಿಂದ ಸುರಕ್ಷಿತವಾಗಿ ಆಕಳನ್ನು ಮೇಲಕ್ಕೆತ್ತುವಲ್ಲಿ ಸಫಲವಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳ ತಂಡದ ಎ ಎಫ್ ಎಸ್ ಟಿ ಓ ಹುಸೇನ್, ಲೀಡಿಂಗ್ ಫೈರ್ ಮ್ಯಾನ್ ಲೋಹಿತ್ ಕುಮಾರ್, ಎಫ್ ಡಿ ಸಂಗಮೇಶ್, ಫೈರ್ ಮ್ಯಾನ್ ಗಳಾದ ವೆಂಕಟೇಶ್, ನಿಹಾಲ್, ಭೀಮಪ್ಪ ತುಂಗಾಳ್, ಯಶವಂತ್ ಭಾಗಿಯಾಗಿದ್ದರು.