ಬದುಕು ಕಲಿಸಿದ ಗುರುಗಳೇ.. ನಮಸ್ಕಾರ
– ಶಿಕ್ಷಕರ ದಿನದಂದು ಎಲ್ಲಾ ಗುರುಗಳಿಗೆ ನಮನಗಳು
– ವಿದ್ಯೆ, ಬುದ್ದಿ, ಕಲೆ, ಜೀವನ ಕಲಿಸಿದ್ದಕ್ಕೆ ಥ್ಯಾಂಕ್ಸ್
NAMMUR EXPRESS NEWS
ಶಿಷ್ಯರನ್ನು ಆಕರ್ಷಕ ಶಿಲೆಗಳನ್ನಾಗಿ ರೂಪಿಸುವ ಶಿಲ್ಪಿಗಳಿಗೆ ಧನ್ಯವಾದಗಳು. ಶಿಕ್ಷಕರ ದಿನದ ಈ ಸಂದರ್ಭದಲ್ಲಿ ಎಲ್ಲಾ ಗುರುಗಳಿಗೆ ನಮ್ಮ ನಮನಗಳು.
‘ಶ್ರೀ ಗುರುವೇ ಎನಗೆ ಕಾಯವು, ಶ್ರೀ ಗುರುವೇ ಎನಗೆ ಪ್ರಾಣವು’ ಎನ್ನುವುದು ಅಲ್ಲಮ ಪ್ರಭು ಅವರ ಸಾಲುಗಳು. ಶಿಷ್ಯನು ತನ್ನನ್ನು ಗುರುಗಳ ಚರಣಕ್ಕೆ ಸಮರ್ಪಿಸಿಕೊಂಡ ಬಗೆ ಇದು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎನ್ನುವುದು ಕೂಡ ಇದೇ ಬಗೆಯದಾಗಿದೆ. ಶಿಕ್ಷಕ ಅಥವಾ ಗುರುವನ್ನು ಭಕ್ತಿ, ಗೌರವ ಎಲ್ಲಕ್ಕಿಂತ ಮಿಗಿಲಾಗಿ ಪ್ರೀತಿಯಿಂದ ಕಾಣುವ ಪ್ರತಿಯೊಬ್ಬ ವ್ಯಕ್ತಿ ಮುಂದೆ ಅಸಮಾನ್ಯನಾಗಿ ಬೆಳೆಯುತ್ತಾನೆ, ಸಮಾಜಕ್ಕೆ ಒಂದು ಕೊಡುಗೆಯಾಗಿ ರೂಪುಗೊಳ್ಳುತ್ತಾನೆ ಎನ್ನುವುದಕ್ಕೆ ಹಲವಾರು ನಿದರ್ಶನಗಳಿವೆ. ಅದೇ ರೀತಿ ವಿದ್ಯೆ ಕಲಿಸಿದ ಗುರುಗಳನ್ನು ಅಗೌರವದಿಂದ ಕಂಡು, ಅವರ ಮುಂದೆ ಅಹಂಕಾರ ತೋರಿದವರು ಸಮಾಜಕಂಟಕರಾಗಿರುವುದನ್ನೂ ನೋಡಬಹುದಾಗಿದೆ. ಇದರರ್ಥ ಗುರು ಕೇವಲ ಪಠ್ಯವನ್ನು ಕಲಿಸುವುದಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಅದಕ್ಕಿಂತ ಮಿಗಿಲಾದ, ಮನುಷ್ಯನ ಅಂತಿಮ ದಿನಗಳವರೆಗೂ ಕಾಪಾಡಿಕೊಂಡು ಬರಬೇಕಾಗಿರುವಂತಹ, ಜೀವನದ ಮೌಲ್ಯಗಳನ್ನು ಕಲಿಸುವಲ್ಲಿ ಗುರುವಿನ ಪಾತ್ರ ಬಹಳ ಮಹತ್ವದ್ದಾಗಿದೆ. ಯಥಾ ರಾಜ ತಥಾ ಪ್ರಜಾ ಎನ್ನುವಂತೆ, ಉತ್ತಮ ಗುರು ದೊರೆತರೆ, ಶಿಷ್ಯರು ಕೂಡ ಉತ್ತಮ ರೀತಿಯಲ್ಲಿ ರೂಪುಗೊಳ್ಳುತ್ತಾರೆ. ಅಂದರೆ ಗುರುಗಳ ಮಾತನ್ನು ಒಳ್ಳೆಯ ರೀತಿಯಲ್ಲಿ ಸ್ವೀಕರಿಸುವ ಮನಸ್ಥಿತಿ ಕೂಡ ಕೆಲವೊಮ್ಮೆ ಶಿಷ್ಯರಿಗೆ ಇರಬೇಕಾಗುತ್ತದೆ. ಅದೇ ರೀತಿ ಶಿಕ್ಷಕರು ಕೂಡ ತಮ್ಮ ಸ್ಥಾನಮಾನ ಮತ್ತು ಜವಾಬ್ದಾರಿಗಳನ್ನು ಅರಿತುಕೊಂಡು ನಡೆದುಕೊಳ್ಳಬೇಕಾಗುತ್ತದೆ. ತಮ್ಮ ವೃತ್ತಿಯನ್ನು ಅಪವಿತ್ರಗೊಳಿಸುವಂತಹ ಶಿಕ್ಷಕರು ಸಮಾಜದಲ್ಲಿ ಕಂಡು ಬಂದದ್ದಿದೆ. ಜೊತೆಗೆ ಶಿಷ್ಯರ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಮಸ್ಯೆ ಎದುರಾದಾಗ, ತಮ್ಮ ವೇತನದಲ್ಲಿ ಓದಿಸಿದ ಶಿಕ್ಷಕರು, ತಪ್ಪು ದಾರಿ ಹಿಡಿಯಲು ಹೊರಟ ಶಿಷನಿಗೆ, ತನ್ನ ಒಳ್ಳೆಯ ಮಾತುಗಳ ಮೂಲಕ, ಮನವನ್ನು ಪರಿವರ್ತಿಸಿ ಉತ್ತಮ ದಾರಿಗೆ ಕರೆತಂದ ಎಷ್ಟೋ ಶಿಕ್ಷಕರಿದ್ದಾರೆ. ಶಿಕ್ಷಕರಲ್ಲಿ ಕಠಿಣತೆಯ ಜೊತೆಗೆ ತಂದೆಯ ಕಾಳಜಿ, ತಾಯಿಯ ಮಮತೆ ಕೂಡ ಅಡಕವಾಗಿರುತ್ತದೆ. ಹೀಗಾಗಿ ಎಷ್ಟೋ ಮಕ್ಕಳಿಗೆ, ಕೆಲವೊಮ್ಮೆ ಯುವಕರಿಗೆ ಶಿಕ್ಷಕರು ಸ್ಪೂರ್ತಿದಾಯಕ ವ್ಯಕ್ತಿಗಳಾಗಿರುತ್ತಾರೆ. ತಂದೆ ತಾಯಿಗಳ ಮಾತನ್ನು ಕೇಳದ ಎಷ್ಟೋ ಜನರು ಚಾಚೂತಪ್ಪದೆ ಗುರುಗಳ ಮಾತನ್ನು ಅನುಸರಿಸುತ್ತಾರೆ. ಇದಕ್ಕೆ ಕಾರಣ ಭಯವೆಂದು ಹೇಳುವುದು ಸಹಜ. ಆದರೆ ಅದಕ್ಕಿಂತ ಮಿಗಿಲಾಗಿ ಒಂದು ತೂಕ ಹೆಚ್ಚೇ ಎನ್ನುವಂತೆ ಪ್ರೀತಿ ಮನದಲ್ಲಿ ಅಡಗಿರುತ್ತದೆ.
ಶಿಕ್ಷಕ ವೃತ್ತಿಯಲ್ಲಿ ಮಾದರಿಯಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ ಪ್ರತಿವರ್ಷ ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದು ಅರ್ಥಪೂರ್ಣವಾಗಬೇಕಿದೆ. ಅವರ ಹಾದಿಯಲ್ಲಿಯೇ ನಡೆದು, ಸಮಾಜದಲ್ಲಿನ ವಿವಿಧ ಕ್ಷೇತ್ರಗಳಿಗೆ ತಮ್ಮ ಶಿಷ್ಯರನ್ನು ಕೊಡುಗೆಯಾಗಿ ನೀಡುವ ಮೂಲಕ, ಇಂದಿಗೂ ತಮ್ಮ ವೃತ್ತಿ ಪವಿತ್ರವಾಗಿರುವಂತೆ ನೋಡಿಕೊಳ್ಳುತ್ತಿರುವ ಕೆಲವು ಮಕ್ಕಳ ಮತ್ತು ಯುವಕರ ಪಾಲಿನ ನಿಜದ ಆದರ್ಶ ವ್ಯಕ್ತಿಗಳಾಗಿ ಉಳಿದಿರುವ ಎಲ್ಲಾ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು
ಸಮಸ್ತ ಶಿಕ್ಷಕರು, ವಿದ್ಯೆ ಕಲಿಸಿದ ಎಲ್ಲಾ ಗುರುಗಳಿಗೆ ನಮನಗಳು
