Categories
ವಿಶೇಷ ಸುದ್ದಿ

ಧರೆಗೆ ಮುಂಗಾರು ಮಳೆ ಆಗಮನ: ಎಲ್ಲೆಲ್ಲೂ ಹನಿಯ ಚುಂಬನ..!

ಧರೆಗೆ ಮುಂಗಾರು ಮಳೆ ಆಗಮನ: ಎಲ್ಲೆಲ್ಲೂ ಹನಿಯ ಚುಂಬನ..!
– ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ..!
– ರೈತ ಸೇರಿ ಪ್ರತಿ ಜೀವಿಗೂ ಮಳೆಯೇ ಸ್ಫೂರ್ತಿಯ ಚಿಲುಮೆ

ವಿಶೇಷ ವರದಿ: ಅಮೃತ ಮಂಜುನಾಥ್

NAMMUR EXPRESS NEWS
ಓ ಮಳೆಯೇ ನೀನು ಧರೆಗೆ ಇಳಿದರೆ ಅದೆಷ್ಟು ಮುದ ನೀಡುತ್ತಿಯಾ..?. ಮಳೆಗಾಲ ಎಂದರೆ ಕೆಲವರಿಗೆ ಬೇಸರ ಅನಿಸಬಹುದು ಆದರೆ ಇನ್ನು ಕೆಲವರಿಗೆ ಅದೇ ಸ್ವರ್ಗ.
ಮಳೆಗಾಲದ ಮೊದಲ ಮಳೆ, ಆ ತಂಪು, ಹಸಿರಿನ ವಾತಾವರಣ ನೋಡೋದೇ ಒಂದು ಸೊಬಗು.
ಮಳೆ ವೇಳೆ ಹರಿಯುವ ನದಿ, ಕೊಳ್ಳಗಳು, ಮೋಡದ ಮರೆಯಲ್ಲಿ ಕಾಣುವ ಬೆಟ್ಟ ಗುಡ್ಡಗಳು, ಭೋರ್ಗರೆವ ಜಲಪಾತಗಳು. ಇದುವೇ ಭುವಿ ಮೇಲಿನ ಸ್ವರ್ಗ ಎನಿಸುವ ಸುಂದರ ದೃಶ್ಯಗಳು ಎಷ್ಟು ಚಂದ ಅಲ್ವಾ ಈ ಮಳೆಗಾಲ..?.
ಮಳೆಗಾಲದಲ್ಲಿ ಸುತ್ತಾಡುವ ಖುಷಿ ಬೇರೆಲ್ಲೂ ಸಿಗಲಾರದು. ಗಿಡ ಮರಗಳೆಲ್ಲ ಹಸಿರುಟ್ಟು ಸಂಭ್ರಮಿಸುವುದನ್ನು ನೋಡುವುದೇ ಒಂದು ವಿಶೇಷ ಖುಷಿ.
ಮಳೆಗಾಲದಲ್ಲಿ ಬೆಚ್ಚನೆ ತಿನಿಸು, ಕಾಫಿ, ಟೀ ಘಮ ಘಮ ಇದೆಷ್ಟು ಸುಮಧುರ. ಮನೆಯಲ್ಲಿ ಕುಳಿತು ಮಳೆಯ ಹನಿ ನೋಡುವ ಆ ರೋಮಾಂಚನ ಎಷ್ಟು ಚಂದ. ಮಳೆ ಬರೀ ಮನುಷ್ಯನಿಗೆ ಮಾತ್ರವಲ್ಲ, ಪ್ರಕೃತಿ,ಕೀಟ, ಪ್ರಾಣಿ ಪಕ್ಷಿಗಳಿಗೂ ಚೈತನ್ಯ ನೀಡುವ ವಿಶೇಷ ಕಾಲ.

ಕೃಷಿಗೆ ಹೊಸ ಕಳೆ ತಂದ ಮಳೆ..!

ಮಳೆಗಾಲ ಬರುತ್ತಿದಂತೆ ರೈತ ಚುರುಕಾಗುತ್ತಾನೆ. ಹಾಗೆ ಮಳೆಗಾಲ ಬಂತು ಅಂದ್ರೆ ಎಲ್ಲರೂ ಹೊಲ, ಗದ್ದೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ನಾಟಿ ಮಾಡೋದು ಸಸಿ ಕೀಳೋದು, ಹೂಟಿ ಮಾಡೋದು ಅದೆಲ್ಲ ನೋಡೋದೇ ಒಂಥರ ಸಂತೋಷ. ಆ ಗದ್ದೆ ಬೈಲಲ್ಲಿ ಮಣ್ಣು ಆಟ ಆಡೋದು ಅದೇ ನೀರಲ್ಲಿ ಈಜೋದು ವ್ಹಾವ್ ಹೇಳುತ್ತಾ ಹೋದ್ರೆ ಆ ಖುಷಿ ಸಂತೋಷಕ್ಕೆ ಕೊನೆಯೇ ಇಲ್ಲ.
ಮಳೆಗಾಲವು ವರ್ಷದ ಬಹು ನಿರೀಕ್ಷಿತ ಸಮಯವಾಗಿದ್ದು ಅದು ಎಲ್ಲರಿಗೂ ನೆಮ್ಮದಿ ಮತ್ತು ಸಂತೋಷದ ನಿಟ್ಟುಸಿರು ತರುತ್ತದೆ. ಮಳೆಗಾಲದಲ್ಲಿ ಸರಿಯಾದ ಪ್ರಮಾಣದ ಮಳೆಯಾಗದೆ ಹೋದರೆ ಅದೆಷ್ಟೋ ರೈತರ ಪಾಡು ಕಷ್ಟಕ್ಕೆ ಬಂದು ನಿಲ್ಲುತ್ತದೆ. ಹಾಗಾಗಿ ಮಳೆಗಾಲ ಶುರುವಾದರೆ ಎಲ್ಲಿಲ್ಲದ ಖುಷಿ. ಮಳೆಯ ಮಣ್ಣಿನ ಸುಗಂಧವನ್ನು ಅನುಭವಿಸಿದವರಿಗಷ್ಟೇ ಗೊತ್ತು.. ಮಳೆಗಾಲದ ಗಮ್ಮತ್ತು. ಮಳೆಯ ನಡುವೆ ಮೀನು ಹಿಡಿಯುವ, ಅಳಬೆ ಹುಡುಕುವ, ಹೊಸ ಹೊಸ ಅಡುಗೆ ಮಾಡುವ ಜೋಷ್ ಹೊಸ ಹುಮ್ಮಸ್ಸನ್ನು ಮೂಡಿಸುತ್ತದೆ.

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ..!

ಸುಸ್ವಾಗತ.. ಈ ಭುವಿಗೆ…!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.