ವರವ ಕೊಡೇ ವರಮಹಾಲಕ್ಷ್ಮಿ..!
– ವರಮಹಾಲಕ್ಷ್ಮೀ ಹಬ್ಬದ ಮಹತ್ವ ಏನು… ಆಚರಣೆ ಹೇಗೆ..?
– ಮುತ್ತೈದೆಯರ ಶ್ರಾವಣ ಮಾಸದ ಪ್ರಮುಖ ಹಬ್ಬ
– ಬಟ್ಟೆ, ಅಲಂಕಾರಿಕ ವಸ್ತು, ಚಿನ್ನದ ಅಂಗಡಿಗಳಲ್ಲಿ ಭರ್ಜರಿ ಖರೀದಿ
ನಮ್ಮೂರ್ ಎಕ್ಸ್ ಪ್ರೆಸ್: ವಿಶೇಷ ವರದಿ ರಚನಾ ಕಾಮತ್
ಶ್ರಾವಣ ಮಾಸ ಬಂತೆಂದರೆ ಭೂಮಿತಾಯಿ ಮಳೆಯ ನೀರಿನಲ್ಲಿ ಮಿಂದು, ಅದರ ಹನಿಗಳ ಆಭರಣ ತೊಟ್ಟು, ಹಸಿರು ಸೀರೆಯುಟ್ಟು ಸಂಭ್ರಮಿಸುವಂತೆ ಕಂಗೊಳಿಸುತ್ತಾಳೆ. ಇನ್ನು ಅದರ ಪ್ರತಿರೂಪವಾದ ಹೆಣ್ಣು ಹಬ್ಬದ ನೆಪದಲ್ಲಿ ಸಂಭ್ರಮಿಸಿ ಉತ್ಸಾಹದ ಚಿಲುಮೆಯಾಗಿರುತ್ತಾಳೆ. ಈ ಮಾಸವು ಮಹಿಳೆಯರ ಬಿಡುವಿಲ್ಲದ ಕಾಲದಂತಾಗಿರುತ್ತದೆ. ಏಕೆಂದರೆ ಹಬ್ಬಗಳ ಸಾಲು ಸಾಲು, ಅವುಗಳ ಆಚರಣೆಗೆ ಬೇಕಾದ ಪೂಜಾ ತಯಾರಿ, ಅಡುಗೆ ತಯಾರಿಯಲ್ಲಿ ನಿರತರಾಗಿರುತ್ತಾರೆ. ಶ್ರಾವಣ ಮಾಸದಲ್ಲಿ ಮಹಿಳೆಯರಿಗೆ ಅತ್ಯಂತ ಸಂತಸ ಮತ್ತು ಸಾರ್ಥಕತೆಯನ್ನು ತಂದುಕೊಡುವ ಮಹತ್ವದ ಹಬ್ಬವೆಂದರೆ ಅದು ವರಮಹಾಲಕ್ಷ್ಮೀ ವ್ರತ.
ಶ್ರಾವಣಮಾಸದ ಎರಡನೇ ಶುಕ್ರವಾರದಂದು ಆಗಮಿಸುವ ಮಹಾಲಕ್ಷ್ಮೀಯು ಮುತ್ತೈದೆತನದ ಸಂಕೇತವಾಗಿದ್ದಾಳೆ. ಸಾಮಾನ್ಯವಾಗಿ ವರಮಹಾಲಕ್ಷ್ಮೀ ವ್ರತದಂದು ಮುತ್ತೈದೆಯರು ಮುಂಜಾನೆಯೇ ಎದ್ದು ಶುಚಿರ್ಭೂತರಾಗಿ, ಇಡೀ ದಿನ ಉಪವಾಸವಿದ್ದು, ಸಂಜೆ ಗೋಧೂಳಿ ಸಮಯದಲ್ಲಿ, ಉತ್ತಮ ಸೀರೆ ಒಡವೆಗಳನ್ನು ಧರಿಸಿ, ಅಕ್ಕಪಕ್ಕದ ಮತ್ತು ಪರಿಚಯಸ್ತ ಮಹಿಳೆಯರನ್ನು ತನ್ನ ಮನೆಗೆ ಆಹ್ವಾನಿಸಿಕೊಂಡು , ವರಮಹಾಲಕ್ಷ್ಮೀ ಪೂಜೆಯನ್ನು ನೆರವೇರಿಸಿ, ಅರಿಶಿನ ಕುಂಕುಮ, ಪ್ರಸಾದವನ್ನು ವಿತರಿಸುವ ಮೂಲಕ ಹಬ್ಬವನ್ನು ಸಂಪೂರ್ಣಗೊಳಿಸುತ್ತಾಳೆ. ನಂತರವೇ ಆಕೆ ಆಹಾರವನ್ನು ಸೇವಿಸುವುದು ವಾಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೊರಗಡೆ ದುಡಿಯುವ ಸನ್ನಿವೇಶ ಎದುರಾಗಿದ್ದು, ಇಡೀ ದಿನ ಉಪವಾಸವಿರಲು ಸಾಧ್ಯವಾಗದಿದ್ದಾಗ, ಮುಂಜಾನೆಯೇ ವರಮಹಾಲಕ್ಷ್ಮೀ ವ್ರತವನ್ನು ಕೈಗೊಂಡು, ಪೂಜೆಯ ನಂತರ ಆಹಾರವನ್ನು ಸೇವಿಸಿ ಪೂರ್ಣಗೊಳಿಸಿಬಿಡುತ್ತಾರೆ. ಪ್ರತಿಯೊಂದು ಆಚರಣೆಯ ಹಿಂದೆಯೂ ಒಂದು ಪೌರಾಣಿಕ ಐತಿಹಾಸಿಕ ಮತ್ತು ಜನಪದ ಹಿನ್ನೆಲೆ ಇದ್ದೇ ಇರುತ್ತದೆ. ಅದು ನಮ್ಮ ಭಾರತೀಯ ಪರಂಪರೆಯ ವಿಶಿಷ್ಟತೆ.
ಧಾರ್ಮಿಕ ಕಥೆ ಏನು..?
ವರಮಹಾಲಕ್ಷ್ಮಿ ವ್ರತದ ಹಿಂದೆಯೂ ಒಂದು ಕಥೆಯಿದೆ. ಈ ವೃತದ ಮಹತ್ವವನ್ನು ಸ್ವತಃ ಪರಶಿವನೇ ತನ್ನ ಮಡದಿ ಪಾರ್ವತಿಗೆ ಹೇಳಿದ್ದಾನೆ ಎನ್ನಲಾಗಿದೆ. ಒಮ್ಮೆ ಶಿವ ಮತ್ತು ಪಾರ್ವತಿ ಏಕಾಂತದಲ್ಲಿ ಮಾತನಾಡುತ್ತಾ ಕುಳಿತಿರುವಾಗ, ಪಾರ್ವತಿಯು “ಭೂಲೋಕದಲ್ಲಿ ಮಹಿಳೆಯರು ತಮ್ಮ ಕುಟುಂಬದ ಒಳಿತಿಗಾಗಿ ಆಚರಿಸುವಂತಹ ಯಾವುದೇ ಹಬ್ಬ ಇಲ್ಲವೇ?” ಎಂದು ಪ್ರಶ್ನಿಸುತ್ತಾಳೆ. ಆಗ ಶಿವನು ಕೂಡಲೇ ವರಮಹಾಲಕ್ಷ್ಮಿ ವ್ರತ ಎಂದು ಹೇಳಿ, ಒಂದು ಕಥೆಯ ಮೂಲಕ ಅದರ ಮಹತ್ವವನ್ನು ಪಾರ್ವತಿಗೆ ತಿಳಿಯಪಡಿಸುತ್ತಾನೆ. ಅಂದಿನ ಮಗಧ ದೇಶದಲ್ಲಿ ಚಾರುಮತಿ ಎಂಬ ಬಡ ಮಹಿಳೆಯು ಪತಿ, ಅತ್ತೆ, ಮಾವನ ಸೇವೆ ಮತ್ತು ಮಗುವಿನ ಆರೈಕೆಯಲ್ಲಿ ತಲ್ಲೀನಳಾಗುವ ಮೂಲಕ ಆದರ್ಶ ಪತ್ನಿ, ಒಳ್ಳೆಯ ಸೊಸೆ ಮತ್ತು ಉತ್ತಮ ತಾಯಿ ಎನಿಸಿಕೊಂಡಿರುತ್ತಾಳೆ. ಒಮ್ಮೆ ಆಕೆಯ ಕರ್ತವ್ಯ ನಿಷ್ಠೆಗೆ ಮೆಚ್ಚಿ, ಮಹಾಲಕ್ಷ್ಮೀಯು ಚಾರುಮತಿಯ ಕನಸಿನಲ್ಲಿ ಬಂದು, “ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ನಾನು ಭೂಲೋಕಕ್ಕೆ ಆಗಮಿಸುತ್ತೇನೆ. ಆಗ ನೀನು ವ್ರತವನ್ನು ಕೈಗೊಳ್ಳಬೇಕು” ಎಂದು ತಿಳಿಸುತ್ತಾಳೆ. ಮರುದಿನ ಚಾರುಮತಿಯು ತಾನು ಕಂಡ ಕನಸಿನ ಕುರಿತು ಅಕ್ಕಪಕ್ಕದ ಮಹಿಳೆಯರಲ್ಲಿ ಮತ್ತು ಬಂಧುಬಳಗದವರಲ್ಲಿ ಹೇಳಿಕೊಳ್ಳುತ್ತಾಳೆ. ನಂತರ ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಎಲ್ಲಾ ಮುತ್ತೈದೆಯರೊಂದಿಗೆ ಕೂಡಿಕೊಂಡು ಮಹಾಲಕ್ಷ್ಮೀಯ ಆದೇಶದಂತೆ ವೃತವನ್ನು ಕೈಗೊಳ್ಳುತ್ತಾಳೆ. ಆಗ ಚಾರುಮತಿ ಮತ್ತು ಅವಳೊಂದಿಗೆ ವ್ರತದಲ್ಲಿ ಭಾಗವಹಿಸಿದ ಮುತ್ತೈದೆಯರಿಗೆ ಮಹಾಲಕ್ಷ್ಮೀಯು ಐಶ್ವರ್ಯವನ್ನು ಕರುಣಿಸಿ ಬಡತನವನ್ನು ನಿವಾರಿಸುತ್ತಾಳೆ. ಇದು ನಂಬಿಕೆ.
ಆಚರಣೆ ಹೇಗೆ..?
ಪ್ರತಿ ಮುತ್ತೈದೆಯರು ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮೀ ವೃತವನ್ನು ನಡೆಸಿಕೊಂಡು ಬರುತ್ತಿದ್ದಾರೆ. ತಮ್ಮ ಆರ್ಥಿಕತೆಗೆ ಅನುಕೂಲವಾಗಿ, ಎಷ್ಟು ಸಾಧ್ಯವೊ ಅಷ್ಟರಮಟ್ಟಿಗೆ ತಯಾರಿ ನಡೆಸಿ, ನಿಯಮಬದ್ಧವಾಗಿ ಆಚರಿಸುವುದು ಈ ವ್ರತದ ವಿಶೇಷತೆ. ಆಭರಣ ಪ್ರಿಯಳಾದ ಮಹಾಲಕ್ಷ್ಮೀಗೆ ರೇಷ್ಮೆ ಸೀರೆ, ಆಭರಣಗಳ ಮೂಲಕ ಸಿಂಗರಿಸುತ್ತಾರೆ. ಈ ಸಮಯದಲ್ಲಿ ಹೆಚ್ಚಾಗಿ ಅಷ್ಟದಳ ರಂಗೋಲಿಯನ್ನು ಹಾಕುವುದು ಸಾಮಾನ್ಯ ಸಂಗತಿ. ಜೊತೆಗೆ ಕಮಲದ ಹೂವು ಲಕ್ಷ್ಮೀಗೆ ಶ್ರೇಷ್ಠವಾದ ಕಾರಣ ಪೂಜೆಯಲ್ಲಿ ಅದನ್ನು ಬಳಸಲಾಗುತ್ತದೆ. ಮಹಾಲಕ್ಷ್ಮೀಗೆ ಕಡ್ಲೆಬೇಳೆ ಪ್ರಿಯವಾದ ಕಾರಣ ಅದರಿಂದ ತಯಾರಿಸಿದ ಹಯಗ್ರೀವ, ಪಾಯಸ ಇಲ್ಲವೆ ಹೋಳಿಗೆಯನ್ನು ತಯಾರಿಸಿ, ನೈವೇದ್ಯ ಮಾಡಿ ಪ್ರಸಾದದ ರೂಪದಲ್ಲಿ ವಿತರಿಸಲಾಗುತ್ತದೆ. ಇನ್ನು ಪ್ರತಿಯೊಬ್ಬ ಮುತ್ತೈದೆಯೂ ವ್ರತದ ನಿಯಮಕ್ಕೆ ಅನುಗುಣವಾಗಿ ಪೂಜಾ ವಿಧಾನವನ್ನು ನೆರವೇರಿಸುತ್ತಾಳೆ. ಎರಡನೇ ಶುಕ್ರವಾರದಂದು ಪೂಜೆಯನ್ನು ಕೈಗೊಳ್ಳಲು ಮಹಿಳೆಯರಿಗೆ ಸಾಧ್ಯವಾಗದಿದ್ದರೆ ಮುಂದಿನ ಶುಕ್ರವಾರ ಮಾಡಬಹುದಾಗಿದೆ. ಅದೂ ಕೂಡ ತಪ್ಪಿದರೆ, ನವರಾತ್ರಿಯ ಸಂದರ್ಭದಲ್ಲಿ ಶುಕ್ರವಾರದಂದು ಪೂಜೆಯನ್ನು ಕೈಗೊಳ್ಳಲು ಅವಕಾಶವಿದೆ.
ಬಟ್ಟೆ, ಅಲಂಕಾರಿಕ ವಸ್ತು, ಚಿನ್ನದ ಅಂಗಡಿಗಳಲ್ಲಿ ಭರ್ಜರಿ ಖರೀದಿ ಮಾಡಲಾಗುತ್ತದೆ. ಸಮಸ್ತ ಜನತೆಗೆ ಹಬ್ಬದ ಶುಭಾಶಯಗಳು.
