Categories
ಕ್ರಿಕೆಟ್ ಕ್ರೀಡಾ ಸುದ್ದಿ

ಇಂಗ್ಲೆಂಡ್ ವಿರುದ್ಧದ ಮಹಿಳಾ ಟಿ20 ಪಂದ್ಯದಲ್ಲಿ ಭಾರತಕ್ಕೆ ಜಯ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್

* ಇಂಗ್ಲೆಂಡ್ ವಿರುದ್ಧದ ಮಹಿಳಾ ಟಿ20 ಪಂದ್ಯದಲ್ಲಿ ಭಾರತಕ್ಕೆ ಜಯ
* ದಾಖಲೆ ನಿರ್ಮಿಸಿದ ನಾಯಕಿ ಸೃತಿ ಮಂಧಾನ

NAMMMUR EXPRESS SPORTS NEWS
ಇಂಗ್ಲೆಂಡ್: ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವೆ ನಡೆಯುತ್ತಿರುವ ಐದುಪಂದ್ಯಗಳ ಟಿ20 ಸರಣಿಯ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸ್ಮೃತಿ ಮಂಧಾನ ನಾಯಕತ್ವದ ಭಾರತ ಮಹಿಳಾ ತಂಡ ಬರೋಬ್ಬರಿ 97 ರನ್​ಗಳ ದಾಖಲೆಯ ಗೆಲುವು ದಾಖಲಿಸಿದೆ. ಭಾರತ ನೀಡಿದ 210 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ವನಿತಾ ಪಡೆ, ಸ್ಮೃತಿ ಪಡೆಯ ಮಾರಕ ದಾಳಿಗೆ ತತ್ತರಿಸಿ ಪೂರ್ಣ 20 ಓವರ್​ಗಳನ್ನು ಆಡಲು ಸಾಧ್ಯವಾಗದೆ ಕೇವಲ 113 ರನ್​ಗಳಿಗೆ ಆಲೌಟ್ ಆಯಿತು. ತಂಡದ ಪರ ನಾಯಕಿ ನ್ಯಾಟ್ ಸಿವರ್-ಬ್ರಂಟ್ ಏಕಾಂಗಿ ಹೋರಾಟ ನೀಡಿ 66 ರನ್ ಬಾರಿಸಿದರಾದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲಾಗಲಿಲ್ಲ. ಇತ್ತ ಭಾರತದ ಪರ ನಾಯಕಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಸಿಡಿಸಿದರೆ, ಭಾರತದ ಪರ ಚೊಚ್ಚಲ ಪಂದ್ಯವನ್ನಾಡಿದ ಶ್ರೀ ಚರಣಿ 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

* ಅತ್ಯಧಿಕ ಟಿ-20 ಸ್ಕೋರ್ ದಾಖಲು
ಇದೇ ವೇಳೆ ನಾಯಕಿ ಮಂಧಾನ ಕೇವಲ 51 ಎಸೆತಗಳಲ್ಲಿ ತಮ್ಮ ಮೊದಲ ಟಿ20 ಅಂತರ್ರಾಷ್ಟ್ರೀಯ ಶತಕ ಪೂರೈಸಿದರು. ಇದರೊಂದಿಗೆ ಈ ಸಾಧನೆ ಮಾಡಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಅರ್ಧಶತಕದಂಚಿನಲ್ಲಿ ಎಡವಿದ ಹರ್ಲೀನ್ ಡಿಯೋಲ್ 43 ರನ್ ಗಳಿಸಿ ಔಟಾದರು. ಡಿಯೋಲ್ ವಿಕೆಟ್ ಪತನದ ಬಳಿಕ ಬಂದ ಕೆಳ ಕ್ರಮಾಂಕದ ಬ್ಯಾಟರ್​ಗಳಿಗೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ಆದಾಗ್ಯೂ ಸ್ಮೃತಿ ಅವರ ಸ್ಫೋಟಕ ಶತಕದಿಂದಾಗಿ ಭಾರತ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್‌ಗಳಿಗೆ 210 ರನ್ ಗಳಿಸಿ ಇಂಗ್ಲೆಂಡ್ ವಿರುದ್ಧ ಎರಡನೇ ಅತ್ಯಧಿಕ ಮತ್ತು ಅತ್ಯಧಿಕ ಟಿ20 ಸ್ಕೋರ್ ದಾಖಲಿಸಿತು. ಇಂಗ್ಲೆಂಡ್ ಪರ, ವೇಗಿ ಲಾರೆನ್ ಬೆಲ್ 27 ರನ್‌ಗಳಿಗೆ 3 ವಿಕೆಟ್ ಪಡೆದರು.

* ದಾಖಲೆ ನಿರ್ಮಿಸಿದ ನಾಯಕಿ ಸೃತಿ ಮಂಧಾನ
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ಸ್ಫೋಟಕ ಶತಕ ಸಿಡಿಸಿದ್ದಾರೆ. ಇದು ಅಂತರ್ರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಸ್ಮೃತಿ ಅವರ ಚೊಚ್ಚಲ ಶತಕವಾಗಿದೆ. ಈ ಶತಕದೊಂದಿಗೆ ಮೂರು ಸ್ವರೂಪಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಮಹಿಳಾ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಮಂಧಾನ ಪಾತ್ರರಾಗಿದ್ದಾರೆ.ಇದೀಗ ಟಿ20 ಕ್ರಿಕೆಟ್​ನಲ್ಲಿ ಶತಕ ಸಿಡಿಸಿರುವ ಸ್ಮೃತಿ ಮಂಧಾನ ಈಗಾಗಲೇ ಏಕದಿನ ಕ್ರಿಕೆಟ್‌ನಲ್ಲಿ 11 ಶತಕಗಳು ಮತ್ತು ಟೆಸ್ಟ್‌ನಲ್ಲಿ 2 ಶತಕಗಳನ್ನು ಸಿಡಿಸಿದ್ದಾರೆ. ಈ ಮೂಲಕ ವಿಶ್ವ ಮಹಿಳಾ ಕ್ರಿಕೆಟ್​ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನ ಮೂರು ಸ್ವರೂಪಗಳಲ್ಲಿ ಶತಕ ಸಿಡಿಸಿದ ಐದನೇ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.