ಟಾಪ್ 3 ನ್ಯೂಸ್ ಕರ್ನಾಟಕ
ಬಿಜೆಪಿಯತ್ತ ಮತ್ತೆ ಈಶ್ವರಪ್ಪ..!
ಕೃಷಿ ಭೂಮಿಯಲ್ಲಿ ಮರ ಕಡಿಯಲು ಅನುಮತಿ..!
* ರಾಜ್ಯ ಸರ್ಕಾರದ ಮಹತ್ವಕ್ಕೆ ಆದೇಶ
NAMMUR EXPRESS NEWS
ನವದೆಹಲಿ: ಕೇಂದ್ರ ಪರಿಸರ ಸಚಿವಾಲಯ ರಾಜ್ಯಗಳಿಗೆ ಕಳುಹಿಸಿರುವ ಪತ್ರದಲ್ಲಿ ಕೃಷಿ ಅರಣ್ಯೀಕರಣವನ್ನು ಬೆಂಬಲಿಸುವ ಸಲುವಾಗಿ, ಕೃಷಿ ಭೂಮಿಯಲ್ಲಿನ ಮರಗಳನ್ನು ಕಡಿಯಲು ಅನುಮತಿ ನೀಡುವಂತಹ ನಿಯಮಗಳನ್ನು ಅಳವಡಿಸಲಾಗಿದೆ. ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ ಭಾರತದ ಹವಾಮಾನ ಸುಧಾರಣೆಗೆ ಈ ರೀತಿಯ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇದರ ಮುಖ್ಯ ಉದ್ದೇಶ ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಹವಾಮಾನ ವೈಪರೀತ್ಯವನ್ನು ತಗ್ಗಿಸುವುದು, ಸುಸ್ಥಿರ ಭೂ ಬಳಕೆಯನ್ನು ಖಚಿತಪಡಿಸುವುದಾಗಿದೆ. 2016ರ ಅನ್ವಯ ರಚಿಸಲಾದ ರಾಜ್ಯ ಮಟ್ಟದ ಸಮಿತಿಯು ಈ ನಿಯಮಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದ್ದು, ಇದು ಕೃಷಿ ಮತ್ತು ಕಂದಾಯ ಇಲಾಖೆಗಳ ಅಧಿಕಾರಿಗಳನ್ನು ಸಹ ಒಳಗೊಂಡಿದೆ. ಕೃಷಿ ಅರಣ್ಯೀಕರಣವನ್ನು ಉತ್ತೇಜಿಸುವುದು, ಕೃಷಿ ಭೂಮಿಯಿಂದ ಮರದ ಉತ್ಪಾದನೆಯನ್ನು ಹೆಚ್ಚಿಸುವುದು ಹೇಗೆ ಎನ್ನುವುದರ ಕುರಿತು ಈ ಸಮಿತಿಯು ರಾಜ್ಯ ಸರ್ಕಾರಕ್ಕೆ ಸಲಹೆ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕೃಷಿಯಲ್ಲಿ ತೊಡಗಿರುವವರು ಅರ್ಜಿಯನ್ನು ಸಲ್ಲಿಸಿ, ತಮ್ಮ ಭೂಮಾಲಿಕತ್ವದ ವಿವರ, ಕೃಷಿ ಭೂಮಿ ಇರುವ ಸ್ಥಳದ ವಿವರಗಳನ್ನು ತೋಟ ಭೂಮಿಯ ಕುರಿತು ಇರುವ ವಿಶೇಷ ರಾಷ್ಟ್ರೀಯ ಮರದ ನಿರ್ವಹಣಾ ವ್ಯವಸ್ಥೆಯ ಪೋರ್ಟಲ್ ನಲ್ಲಿ ನೋಂದಾಯಿಸಿಕೊಳ್ಳಬೇಕೆಂದು ಮಾಹಿತಿ ನೀಡಲಾಗಿದೆ.
ರಾಜಕೀಯ ಭವಿಷ್ಯದ ಬಗ್ಗೆ ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ
* ಬಿಜೆಪಿಗೆ ನನ್ನ ಜೀವ ಮುಡಿಪು ಎಂದ ಮಾಜಿ ಉಪಮುಖ್ಯಮಂತ್ರಿ
ಬಳ್ಳಾರಿ: ಮಾಧ್ಯಮ ಪ್ರತಿನಿಧಿ ಸಭೆಯಲ್ಲಿ ಮಾತನಾಡಿದ ಹಿರಿಯ ರಾಜಕಾರಣಿ ಮತ್ತು ಮಾಜಿ ಉಪಮುಖ್ಯಮಂತ್ರಿ ಕೆ. ಎಸ್. ಈಶ್ವರಪ್ಪ ಅವರು ತಮ್ಮ ರಾಜಕೀಯ ಜೀವನಕ್ಕೆ ಸಂಬಂಧಿಸಿದ ವಿಚಾರಗಳ ಕುರಿತು ಕೆಲವು ಸ್ಪಷ್ಟ ನಿರ್ಧಾರಗಳನ್ನು ತಿಳಿಸಿದರು. “ಬೇರೆ ಪಕ್ಷಗಳಿಂದ ನನಗೆ ಅವಕಾಶಗಳು ಒದಗಿ ಬಂದರೂ ನಾನು ನಿರಾಕರಿಸಿದೆ. ಏಕೆಂದರೆ ನಾನು ಮುಂದೊಂದು ದಿನ ಮತ್ತೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತೇನೆ ಎಂಬ ನಂಬಿಕೆ ನನಗಿದೆ. ನಾನು ಸತ್ತರೂ ಬಿಜೆಪಿ ಬಿಡುವುದಿಲ್ಲ. ನನ್ನ ಜೀವ ಎಂದಿಗೂ ಅದಕ್ಕೇ ಮುಡಿಪು” ಎಂಬ ಮಾತುಗಳನ್ನು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದರು.
ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಬಾನು ಮುಷ್ತಾಕ್ ಆಯ್ಕೆ
* ರಾಜ್ಯ ಕಸಾಪ ಅಧ್ಯಕ್ಷರಾದ ಮಹೇಶ್ ಜೋಷಿ ಘೋಷಣೆ
ಬಳ್ಳಾರಿ: ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಎಂಭತ್ತೆಂಟನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಇತ್ತೀಚಿಗೆ ಬೂಕರ್ ಪ್ರಶಸ್ತಿಗೆ ಭಾಜನರಾಗುವ ಮೂಲಕ ಕನ್ನಡದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಪಸರಿಸಿದ ಖ್ಯಾತ ಬಂಡಾಯ ಲೇಖಕಿ ಬಾನು ಮುಷ್ತಾಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಬಳ್ಳಾರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವರ ಒಪ್ಪಿಗೆ ಮೇರೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಾನು ಮುಷ್ತಾಕ್ ಅವರು ಶಿಕ್ಷಕಿಯಾಗಿ, ಪತ್ರಕರ್ತೆಯಾಗಿ, ಪ್ರಸ್ತುತ ವಕೀಲೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಮುಖ ಸ್ತ್ರೀವಾದಿ ಲೇಖಕಿಯಾಗಿ ತಮ್ಮದೇ ಆದ ಬರವಣಿಗೆ ಶೈಲಿಯ ಮೂಲಕ ಗುರುತಿಸಿಕೊಂಡಿದ್ದಾರೆ.ಐದು ಕಥಾ ಸಂಕಲನಗಳು, ಕುಬ್ರ ಎಂಬ ಕಾದಂಬರಿ, ಇಬ್ಬನಿಯ ಕಾವು ಎನ್ನುವ ಲೇಖನ ಸಂಕಲನ, ಒದ್ದೆ ಕಣ್ಣಿನ ಬಾಗಿನ ಕವನ ಸಂಕಲನ ಮತ್ತು ಕೌಟುಂಬಿಕ ದೌರ್ಜನ್ಯ ಕಾನೂನು ಎಂಬ ಕಾನೂನು ಸಂಬಂಧಿತ ಕೃತಿಗಳು ಬಾನು ಮುಷ್ತಾಕ್ ಅವರ ಲೇಖನಿಯಿಂದ ಮೂಡಿಬಂದಿದೆ.