ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ -2025
* ಡೆಲ್ಲಿ ವಿರುದ್ಧ ಗೆದ್ದ ಕೆಕೆಆರ್ ಪ್ಲೇ ಆಫ್ ಕನಸು ಜೀವಂತ
* ಪಂದ್ಯ ಗೆದ್ದು ಮೊದಲ ಸ್ಥಾನಕ್ಕೇರುವ ಡೆಲ್ಲಿ ಕನಸು ಭಗ್ನ
NAMMMUR EXPRESS SPORTS NEWS
ಡೆಲ್ಲಿ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಹಾಗೂ ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ 14 ರನ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇಆಫ್ ಕನಸು ಜೀವಂತವಾಗಿದೆ. ಕೆಕೆಆರ್ ತಂಡ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಡೆಲ್ಲಿ ಸೋಲನ್ನು ಎದುರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿತು. ನಿಗದಿತ 20 ಓವರ್‌ಗಳಲ್ಲಿ ಕೋಲ್ಕತ್ತಾ 9 ವಿಕೆಟ್ ಕಳೆದುಕೊಂಡರೂ 204 ರನ್ ಗಳಿಸಿತು. ಈ ಬೃಹತ್ ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 9 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಕೆಕೆಆರ್ 14 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು.
* 7 ವರ್ಷಗಳ ಬಳಿಕ ಜಯಗಳಿಸಿದ ಕೆಕೆಆರ್
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ 2017 ರ ನಂತರ ಕೆಕೆಆರ್ ತಂಡವು ಡೆಲ್ಲಿಯನ್ನು ಸೋಲಿಸಿದೆ. ಕೆಕೆಆರ್ ತಂಡ ಡೆಲ್ಲಿಗೆ 205 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಚೇಸಿಂಗ್ ಆರಂಭಿಸಿದ ಡೆಲ್ಲಿ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಯುವ ಬ್ಯಾಟರ್ ಅಭಿಷೇಕ್ ಪೊರೆಲ್ ಕೇವಲ 4 ರನ್ ಗಳಿಸಿ ಔಟಾದರು. ಬಳಿಕ ಬಂದ ಕರುಣ್ ನಾಯರ್ ಅವರು ಫಾಫ್ ಡು ಪ್ಲೆಸಿಸ್ ಜೊತೆಯಾದರು. ಈ ಜೋಡಿ ಡೆಲ್ಲಿ ತಂಡಕ್ಕೆ ಚೇತರಿಕೆ ನೀಡಿತು. ಉತ್ತಮವಾಗಿ ಆಡುತ್ತಿದ್ದ ಕರುಣ್ ನಾಯರ್ 15 ರನ್ ಗಳಿಸಿ ವಿಕೆಟ್ ಕಳೆದುಕೊಂಡರೆ, ಕೆಎಲ್ ರಾಹುಲ್ 7 ರನ್ ಗಳಿಸಿದಾಗ ದುರದೃಷ್ಟಕರ ರನೌಟ್‌ಗೆ ಬಲಿಯಾದರು.
ಡೆಲ್ಲಿ ತಂಡ 60 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಡು ಪ್ಲೆಸಿಸ್‌ಗೆ ನಾಯಕ ಅಕ್ಸರ್ ಪಟೇಲ್ ಬೆಂಬಲವಾಗಿ ನಿಂತು 23 ಎಸೆತಗಳಲ್ಲಿ 43 ರನ್ ಗಳಿಸುವ ಮೂಲಕ ಕೆಕೆಆರ್ ತಂಡಕ್ಕೆ ಸೋಲಿನ ಭಯ ಕಾಣಿಸಿದರು. ಆದರೆ ಇದಾದ ನಂತರ, ಸುನಿಲ್ ನರೈನ್ ಅವರ ಓವರ್ ಮಹತ್ವದ ತಿರುವು ನೀಡಿತು.
ಸುನಿಲ್ ನರೈನ್ ಒಂದೇ ಓವರ್‌ನಲ್ಲಿ ಅಕ್ಸರ್ ಪಟೇಲ್ (43) ಮತ್ತು ಟ್ರಿಸ್ಟಾನ್ ಸ್ಟಬ್ಸ್ (1) ಅವರ ವಿಕೆಟ್ ಕೆಡವಿದರು. ಇದಾದ ಬಳಿಕವೂ ನರೈನ್ ಡು ಪ್ಲೆಸಿಸ್ ಅವರನ್ನು 62 ರನ್‌ಗಳಿಗೆ ಔಟ್ ಮಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಮತ್ತೊಂದೆಡೆ ವರುಣ್ ಚಕ್ರವರ್ತಿ ಕೂಡ ತಮ್ಮ ಓವರ್‌ನಲ್ಲಿ ಸತತ ಎರಡು ವಿಕೆಟ್‌ಗಳನ್ನು ಕಬಳಿಸಿದರು.
ಡೆಲ್ಲಿ ಆಲ್‌ರೌಂಡರ್ ವಿಪ್ರಜ್ ನಿಗಮ್ 19 ಎಸೆತಗಳಲ್ಲಿ 38 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡುವ ಮೂಲಕ ಕೆಕೆಆರ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರು. ಆದರೆ ಕೊನೆಯ ಓವರ್‌ನಲ್ಲಿ 5 ಎಸೆತಗಳಲ್ಲಿ 24 ರನ್ ಗಳಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಕೆಕೆಆರ್ ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು.
