Categories
ಕ್ರಿಕೆಟ್ ಕ್ರೀಡಾ ಸುದ್ದಿ

ಪಂಜಾಬ್ ಫೈನಲ್‌ಗೆ ಎಂಟ್ರಿ,ಮುಂಬೈ ಮನೆಗೆ

ನಮ್ಮೂರ್ ಎಕ್ಸ್‌ಪ್ರೆಸ್ ಸ್ಫೋರ್ಟ್ಸ್ ನ್ಯೂಸ್

ಐಪಿಎಲ್ -2025
* ಪಂಜಾಬ್ ಫೈನಲ್‌ಗೆ ಎಂಟ್ರಿ,ಮುಂಬೈ ಮನೆಗೆ
* ನಾಳೆ ಆರ್‌ಸಿಬಿ ಮತ್ತು ಪಂಜಾಬ್ ತಂಡಗಳ ನಡುವೆ ಫೈನಲ್ ಹಣಾಹಣಿ

NAMMMUR EXPRESS SPORTS NEWS
ಅಹಮದಾಬಾದ್: ಐಪಿಎಲ್ ಸೀಸನ್ 18 ರ ಕ್ವಾಲಿಫೈರ್​-2 ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡ ಮುಂಬೈ ಇಂಡಿಯನ್ಸ್​ ತಂಡವನ್ನು ಮಣಿಸಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿತು.
ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದಿದ್ದ ಮಾಡು ಇಲ್ಲ ಮಡಿ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಮ್ಮ ಶಕ್ತಿಯನ್ನು ಪ್ರದರ್ಶಿಸಿತು. ನಾಯಕ ಶ್ರೇಯಸ್ ಅಯ್ಯರ್ (81*) ಭರ್ಜರಿ ಪ್ರದರ್ಶನದಿಂದಾಗಿ ತಂಡವು ಐಪಿಎಲ್ 2025ರ ಫೈನಲ್‌ಗೆ ಎಂಟ್ರಿ ಪಡೆದುಕೊಂಡಿದೆ.
ಮುಂಬೈ ನೀಡಿದ ಗುರಿಯನ್ನು ಬೆನ್ನತ್ತಿದ ಪಂಜಾಬ್​ ಆರಂಭಿಕ ಆಘಾತ ಎದುರಾಯ್ತು. ಪ್ರಭ್ಸಿಮ್ರಾನ್ 6 ರನ್‌ಗಳಿಸಿ ಪೆವಿಲಿಯನ್ ಸೇರಿದರು. ಆದರು ಪಂಜಾಬ್ ಆತ್ಮವಿಶ್ವಾಸದೊಂದಿಗೆ ಆಟವಾಡಿತು. ಬಳಿಕ ಇಂಗ್ಲಿಸ್ (38) ಕೆಲವು ಅದ್ಭುತ ಹೊಡೆತಗಳೊಂದಿಗೆ ಫ್ಯಾನ್ಸ್​ಗಳನ್ನು ರಂಜಿಸಿದರು. ಪ್ರಿಯಾಂಶ್ ಆರ್ಯ (20) ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಅಶ್ವನಿ ಬೌಲಿಂಗ್‌ನಲ್ಲಿ ವಿಕೆಟ್​ ಒಪ್ಪಿಸಿ ಹೊರ ನಡೆದರು. ಆರನೇ ಓವರ್‌ನಲ್ಲಿ ಅವರು ಔಟಾದಾಗ ಪಂಜಾಬ್ ಸ್ಕೋರ್ 55 ಆಗಿತ್ತು. ಎಂಟನೇ ಓವರ್‌ನಲ್ಲಿ ಇಂಗ್ಲಿಸ್ ಕೂಡ ಔಟಾದರೂ. ಈ ವೇಳೆ ಶ್ರೇಯಸ್ ಮತ್ತು ನೆಹಾಲ್ ವಧೇರಾ ಉತ್ತಮ ಬ್ಯಾಟಿಂಗ್ ಮೂಲಕ ಪಂಜಾಬ್ ತಂಡದ ಫೈನಲ್​ ಆಸೆಯನ್ನು ಜೀವಂತವಾಗಿರಿಸಿದರು.
ಪಂಜಾಬ್ 15 ಓವರ್‌ಗಳಲ್ಲಿ 147/3 ಸ್ಕೋರ್ ದಾಖಲಿಸಿ ಗೆಲುವಿನತ್ತ ಸಾಗುವ ಲಕ್ಷಣ ಕಾಣುತ್ತಿತ್ತು. ಆದರೆ ಮುಂದಿನ ಓವರ್‌ನಲ್ಲಿ ವಧೇರಾ ಔಟಾದರೂ ಮತ್ತು 17ನೇ ಓವರ್‌ನಲ್ಲಿ ಶಶಾಂಕ್ ಸಿಂಗ್​ ಕೂಡ ರನೌಟ್ ಬಲೆಗೆ ಬಿದ್ದರು. ಆದರೆ ಶ್ರೇಯಸ್ ಆತ್ಮವಿಶ್ವಾಸ ಕಳೆದುಕೊಳ್ಳದೆ ಬ್ಯಾಟಿಂಗ್ ಮುಂದುವರಿಸಿ ಪಂಜಾಬ್ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು. ಕೊನೆಯ ಎರಡು ಓವರ್‌ಗಳಲ್ಲಿ ಪಂಜಾಬ್‌ ಗೆಲುವಿಗೆ 23 ರನ್‌ಗಳು ಬೇಕಾಗಿದ್ದವು. ಈ ವೇಳೆ ಅಯ್ಯರ್ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿ ಕೇವಲ ಆರು ಎಸೆತಗಳಲ್ಲಿ ಗೆಲುವನ್ನು ಖಚಿತ ಪಡಿಸಿದರು.
ಇದಕ್ಕೂ ಮೊದಲು, ಟಾಸ್ ಸೋತು ಬ್ಯಾಟಿಂಗ್​ ಮಾಡಿದ್ದ ಮುಂಬೈ ಪರ ಆರಂಭಿಕ ಆಟಗಾರ ಬೈರ್‌ಸ್ಟೋವ್ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿದರು. ಅವರು ಅದ್ಭುತ ಇನ್ನಿಂಗ್ಸ್ ಮೂಲಕ ತಂಡಕ್ಕೆ ಬಲವಾದ ಅಡಿಪಾಯ ಹಾಕಿದರು. ಆದರೆ, ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದ ಮತ್ತೊಬ್ಬ ಆರಂಭಿಕ ಆಟಗಾರ ರೋಹಿತ್ ಶರ್ಮಾ (8) ಈ ಬಾರಿ ಬೇಗನೆ ಪೆವಿಲಿಯನ್​ ಸೇರಿದರು.
ರೋಹಿತ್ ನಿರ್ಗಮನವು ಬೈರ್‌ಸ್ಟೋವ್ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಅವರು ತಮ್ಮ ಆಕ್ರಮಣಕಾರಿ ಆಟದ ಮೂಲಕ ತಂಡದ ಸ್ಕೋರ್ ವೇಗವನ್ನು ಹೆಚ್ಚಿಸಿದರು. ಪವರ್‌ಪ್ಲೇ ಅಂತ್ಯದ ವೇಳೆಗೆ ಮುಂಬೈ ಸ್ಕೋರ್ 65/1 ಆಗಿತ್ತು.ಏಳನೇ ಓವರ್‌ನಲ್ಲಿ ಅಪಾಯಕಾರಿ ಬೈರ್‌ಸ್ಟೋವ್ ಅವರನ್ನು ಔಟ್ ಮಾಡುವ ಮೂಲಕ ವೈಶಾಖ್ ಮುಂಬೈಗೆ ಕೊಂಚ ಹಿನ್ನಡೆ ಉಂಟುಮಾಡಿದರು. ಬಳಿಕ ತಿಲಕ್​ ವರ್ಮಾ (44), ಸೂರ್ಯಕುಮಾರ್​ ಯಾದವ್​ (44) ನಮನ್​ಧೀರ್ (37) ಬ್ಯಾಟಿಂಗ್​ ಸಹಾಯದಿಂದ ಮುಂಬೈ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 203 ರನ್​ ಕಲೆಹಾಕಿತು.
ನಾಳೆ ಆರ್​ಸಿಬಿ ಮತ್ತು ಪಂಜಾಬ್​ ತಂಡಗಳು ಫೈನಲ್​ನಲ್ಲಿ ಮುಖಾಮುಖಿ ಆಗಲಿವೆ. ಎರಡೂ ತಂಡಗಳು ಚೊಚ್ಚಲ ಟ್ರೋಫಿಗಾಗಿ ಸೆಣಸಾಡಲಿವೆ.ಆರ್​ಸಿಬಿ ಟ್ರೋಫಿ ಗೆಲ್ಲುವ ಫೆವರೀಟ್​ ತಂಡವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.