ಸಹಕಾರ ಸಚಿವ ಕೆ.ಎನ್ ರಾಜಣ್ಣ ಎರಡು ದಿನಗಳ ಕಾಫಿನಾಡು ಪ್ರವಾಸ
* ಶೃಂಗೇರಿ ಶ್ರೀಶಾರದಾ ಪೀಠಕ್ಕೆ ಭೇಟಿ
* ಚಿಕ್ಕಮಗಳೂರು-ಅರಸೀಕೆರೆ ಸೇರಿಸಿ ಜಿಲ್ಲೆಯಲ್ಲಿ ಹಾಲಿನ ಡೈರಿ ಆರಂಭಿಸಲು ಮುಖ್ಯಮಂತ್ರಿ ಒಪ್ಪಿದ್ದಾರೆ
NAMMMUR EXPRESS NEWS
ಚಿಕ್ಕಮಗಳೂರು: ಜಿಲ್ಲೆಗೆ ಎರಡು ದಿನಗಳ ಪ್ರವಾಸದಲ್ಲಿರುವ ಸಹಕಾರ ಸಚಿವ ಕೆ.ಎನ್ ರಾಜಣ್ಣ ನಿನ್ನೆ ಶೃಂಗೇರಿಯ ಶ್ರೀ ಶಾರದಾ ಪೀಠಕ್ಕೆ ಮಂತ್ರಿಯಾದ ಬಳಿಕ ಮೊದಲನೇ ಬಾರಿಗೆ ಭೇಟಿ ನೀಡಿ ಶಾರದೆ ಹಾಗು ಜಗದ್ಗುರು ಶ್ರೀಭಾರತೀ ತೀರ್ಥ ಶ್ರೀಗಳ ದರ್ಶನ ಮಾಡಿ ಆಶೀರ್ವಾದ ಪಡೆದಿದ್ದಾರೆ. ಎರಡು ದಿನ ಚಿಕ್ಕಮಗಳೂರು ಪ್ರವಾಸ ಕೈಗೊಂಡಿರುವ ಸಚಿವ ರಾಜಣ್ಣ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇಂದು ಚಿಕ್ಕಮಗಳೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಲಿದ್ದಾರೆ.
* ಚಿಕ್ಕಮಗಳೂರು-ಅರಸೀಕೆರೆ ಸೇರಿಸಿ ಜಿಲ್ಲೆಯಲ್ಲಿ ಹಾಲಿನ ಡೈರಿ ಆರಂಭಿಸಲು ಮುಖ್ಯಮಂತ್ರಿ ಒಪ್ಪಿದ್ದಾರೆ
ಗ್ರಾಮೀಣ ರೈತರ ಆರ್ಥಿಕ ಸಧೃಡರಾದರೆ ದೇಶದ ಆರ್ಥಿಕತೆ ಸದೃಢವಾಗುತ್ತದೆ. ಸಹಕಾರಿ ಆಂದೋಲನಗಳು ಜನರ ಆಂದೋಲನವಾಗಬೇಕೇ ಹೊರತು ಸರ್ಕಾರದ ಆಂದೋಲನವಾಗಬಾರದು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, `ಪಿಎಸಿಎಸ್‌ಗಳು ತಪ್ಪಿ ನಡೆದಾಗ ಅದನ್ನು ಸರಿದಾರಿಗೆ ತರುವುದು ಸರ್ಕಾರದ ಕೆಲಸ. ಎಲ್ಲಿಯವರೆಗೆ ರೈತರು ಬೆಳೆದ ಬೆಳೆಗೆ ರೈತರೇ ದರ ನಿಗದಿ ಮಾಡಿ ಮಾರಾಟಮಾಡುವ ಸ್ಥಿತಿಗೆ ಬರುವುದಿಲ್ಲವೂ ಅಲ್ಲಿಯವರೆಗೆ ಆರ್ಥಿಕ ಸಂಕಷ್ಟ ಎದುರಿಸುವುದು ಸಾಮಾನ್ಯ. ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ. ಆದರೆ, ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಮುಂದಾದರೆ ದೇಶದ ಆರ್ಥಿಕ ಪರಿಸ್ಥಿತಿ ಅಲ್ಲೊಲ್ಲ ಕಲ್ಲೋಲ ಆಗುತ್ತದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳುತ್ತಿದ್ದಾರೆ. ರೈತರ ಪರ ಯಾವ ಸರ್ಕಾರ ಇದೆ ಎಂಬುದನ್ನು ಜನ ತಿರ್ಮಾನ ಮಾಡಲಿ’ ಎಂದರು.
ಚಿಕ್ಕಮಗಳೂರು-ಅರಸೀಕೆರೆ ಸೇರಿಸಿ ಜಿಲ್ಲೆಯಲ್ಲಿ ಹಾಲಿನ ಡೈರಿ ಆರಂಭಿಸಲು ಮುಖ್ಯಮಂತ್ರಿ ಒಪ್ಪಿದ್ದಾರೆ. ಶೀಘ್ರದಲ್ಲೇ ಹಾಲು ಸಂಗ್ರಹಿಸುವ ಡೈರಿ ಆರಂಭಗೊಳ್ಳಲಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ಸಹಕಾರಿ ಸಂಸ್ಥೆಗಳಲ್ಲಿ ರಾಜಕಾರಣ ಮಾಡಬಾರದು. ಸಹಕಾರಿ ರಂಗದಲ್ಲಿ ಸಮರ್ಪಣಾ ಭಾವದಿಂದ ಕೆಲಸ ಮಾಡಿದಲ್ಲಿ ರಾಜಕೀಯದಲ್ಲೂ ಸ್ಥಾನ ಪಡೆಯಬಹುದು ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ‘ಸರ್ಕಾರದ ಸೌಲಭ್ಯವನ್ನು ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ನೆರವಾಗಿವೆ. ಕಡಿಮೆ ದರದಲ್ಲಿ ರೈತರಿಗೆ ಸಾಲ ನೀಡುವ ಮೂಲಕ ಸರ್ಕಾರ ರೈತರ ಆರ್ಥಿಕ ಸಬಲೀಕರಣಕ್ಕೆ ಮುಂದಾಗಿದೆ. ಸಂಗಮೇಶ್ವರ ಪೇಟೆ ಪಿಎಸಿಎಸ್‌ನಲ್ಲಿ ವಾರ್ಷಿಕ ₹180 ಕೋಟಿ ವ್ಯವಹಾರ ನಡೆಸುತ್ತಿದೆ. ಸುಮಾರು 4 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ₹2.5ಕೋಟಿ ವೆಚ್ಚದಲ್ಲಿ ಉಗ್ರಾಣ ನಿರ್ಮಾಣ ಮಾಡಿದ್ದು ರೈತರು ಸದುಪಯೋಗ ಪಡೆದುಕೊಳ್ಳಿ’ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಎಸ್.ವಿ.ಮಂಜುನಾಥ್, ಉದಯಕುಮಾರ್ ಹೆಗ್ಡೆ ಸೇರಿದಂತೆ ಹತ್ತು ಜನರನ್ನು ಸನ್ಮಾನಿಸಿ, ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಬೆಳೆ ದಾಸ್ತಾನಿಗಾಗಿ ನಿರ್ಮಿಸಿದ್ದ ಉಗ್ರಾಣ ಉದ್ಘಾಟಿಸಲಾಯಿತು.
ಪಿಎಸಿಎಸ್ ಅಧ್ಯಕ್ಷ ಕೆ.ಎಲ್.ಚಂದ್ರೇಗೌಡ, ಉಪಾಧ್ಯಕ್ಷ ಯು.ವಿ.ಜಯರಾಮ್, ಮಹಿಳಾ ಸಹಕಾರಿ ಬ್ಯಾಂಕ್ ಅಧ್ಯಕ್ಷೆ ಬಿ.ಸಿ.ಗೀತಾ, ಮಾಜಿ ಎಂಎಲ್‌ಸಿ ಎಸ್.ವಿ.ಮಂಜುನಾಥ್, ಟಿ.ಇ.ಮಂಜುನಾಥ್, ತ್ರಿವೇಣಿರಾವ್, ಬಿ.ಎನ್.ಸೋಮೇಶ್, ಸಿಇಒ ಬಾಲಕೃಷ್ಣ, ರಮಣ ರೆಡ್ಡಿ, ಡಿ.ಎಸ್.ತೇಜಸ್ವಿನಿ, ಪ್ರತಾಪ್ ರೆಡ್ಡಿ, ಸ್ನೇಹಾ ನೀಲಪ್ಪಗೌಡ, ಸಾದ್ವಿನಿ ಕೊಪ್ಪ ಭಾಗವಹಿಸಿದ್ದರು.
