2025-26 ನೇ ಸಾಲಿನ ಬಜೆಟ್ ಮಂಡಿಸಿದ ಶೃಂಗೇರಿ ಪಟ್ಟಣ ಪಂಚಾಯ್ತಿ
* ಪಟ್ಟಣದ ಅಭಿವೃದ್ಧಿ ದೃಷ್ಠಿಯಿಂದ ಬಜೆಟ್ ಲೆಕ್ಕಾಚಾರ
* ಪ್ರಮುಖ ಆದಾಯ ಮೂಲ ವಾಹನ ಪಾರ್ಕಿಂಗ್ ಈ ಬಾರಿ ಡೌಟ್
NAMMUR EXPRESS NEWS
ಶೃಂಗೇರಿ: 2025-26 ನೇ ಸಾಲಿನ ಶೃಂಗೇರಿ ಪಟ್ಟಣ ಪಂಚಾಯ್ತಿಯ ಬಜೆಟ್‌ನ್ನು ಅಧ್ಯಕ್ಷ ಹೆಚ್.ಎಸ್ ವೇಣುಗೋಪಾಲ್ ಮಂಡಿಸಿದರು.
ಪಟ್ಟಣದ ಅಭಿವೃದ್ಧಿಯನ್ನು ದೃಷ್ಠಿಯಲ್ಲಿಟ್ಟು ಪಟ್ಟಣ ಪಂಚಾಯ್ತಿಯ ಆದಾಯವನ್ನು ಗಮನದಲ್ಲಿಟ್ಟು 2025-26 ನೇ ಸಾಲಿಗೆ ಸುಮಾರು 7,67,67,631 ರೂ.ಗಳ ಬಜೆಟ್‌ನ್ನು ಮಂಡಿಸಲಾಗಿದ್ದು ಇದರಲ್ಲಿ ಸುಮಾರು 7,45,89,500 ರೂ.ಗಳ ಖರ್ಚನ್ನು ಅಂದಾಜು ಮಾಡಲಾಗಿದೆ,ಇದರಿಂದ ಸುಮಾರು 21,78,131 ರೂ.ಗಳ ಉಳಿತಾಯ ನಿರೀಕ್ಷಿಸಲಾಗಿದೆ ಎಂದು ಅಧ್ಯಕ್ಷ ಹೆಚ್.ಎಸ್ ವೇಣುಗೋಪಾಲ್ ತಿಳಿಸಿದ್ದಾರೆ.
ಪಟ್ಟಣ ಪಂಚಾಯ್ತಿಗೆ ಆದಾಯ ಮೂಲ ವಾಹನ ಪಾರ್ಕಿಂಗ್
ಶೃಂಗೇರಿ ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿಗೆ ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ ಹಾಗೂ ಪ್ರವಾಸಿಗರ ವಾಹನವನ್ನು ಗಾಂಧಿ ಮೈದಾನದಲ್ಲಿ ನಿಗದಿ ಪಡಿಸಲಾದ ಪ್ರದೇಶದಲ್ಲಿ ನಿಲುಗಡೆ ಮಾಡಿ ಅವರಿಂದ ನಿಗದಿತ ಶುಲ್ಕ ಸಂಗ್ರಹಿಸಲಾಗುತ್ತಿತ್ತು ಈ ಕಾರ್ಯಕ್ಕೆ ಪ್ರತಿ ವರ್ಷ ಟೆಂಡರ್ ಕರೆದು ಆ ಮುಖಾಂತರ ಬಿಡ್ಡುದಾರರಿಗೆ ವಹಿಸಿ ಹರಾಜಿನ ಮೊತ್ತವನ್ನು ಪಟ್ಟಣ ಪಂಚಾಯ್ತಿಯ ಆದಾಯ ಮೂಲವಾಗಿ ವಿವಿಧ ಕಾಮಗಾರಿಗೆ,ಪಂಚಾಯ್ತಿಯ ನೌಕರರ ಸಂಬಳ ಸೇರಿದಂತೆ ಇನ್ನಿತರ ಖರ್ಚು ವೆಚ್ಚಗಳಿಗೆ ಬಳಸಿಕೊಳ್ಳಲಾಗುತ್ತಿತ್ತು. ಈ ಆದಾಯವೇ ಪಟ್ಟಣ ಪಂಚಾಯ್ತಿಗೆ ದೊಡ್ಡ ಆದಾಯದ ಮೂಲವಾಗಿತ್ತು. ಆದರೆ ಕೆಲ ದಿನಗಳ ಹಿಂದೆ ಜಿಲ್ಲಾಧಿಕಾರಿಗಳ ಮೌಖಿಕ ಆದೇಶದ ಮೇರೆಗೆ ಪಟ್ಟಣ ಪಂಚಾಯ್ತಿಯು ವಾಹನಗಳ ಪಾರ್ಕಿಂಗ್ ಪ್ರದೇಶದ ಹರಾಜು ನಡೆಸುವಂತಿಲ್ಲ ಈ ಪ್ರದೇಶ ಹೊಳೆ ಕರಾಬಿಗೆ ಸೇರಿದ್ದು ಎಂದು ಹೇಳಲಾಗಿದೆ. ಇದರಿಂದ ಇನ್ಮುಂದೆ ಪಟ್ಟಣ ಪಂಚಾಯ್ತಿಂದ ಈ ಆದಾಯದ ಮೂಲ ಕೈತಪ್ಪುವ ಸಾಧ್ಯತೆಯೇ ಹೆಚ್ಚಾಗಿದೆ. ಹೀಗೇನಾದರೂ ಆದಲ್ಲಿ ಈಗ ಮಂಡಿಸಿರೋ ಬಜೆಟ್‌ನಲ್ಲಿ ಸಂಪೂರ್ಣ ವಿಫಲವಾಗಲಿದೆ.
ಮುಂದಿನ ಪರಿಣಾಮಗಳಿಗೆ ಸಂಪೂರ್ಣ ಡಿ.ಸಿಯವರೇ ಹೊಣೆ..
ನಿಯಮದಂತೆ ಇದೇ ಮಾರ್ಚ್ 31ರಂದು ಈಗ ಚಾಲ್ತಿಯಲ್ಲಿರು ವಾಹನ ಪಾರ್ಕಿಂಗ್ ಟೆಂಟರ್ ಅಂತ್ಯಗೊಳ್ಳಲಿದೆ. ಏಪ್ರಿಲ್ 1 ರಿಂದ ಡಿ.ಸಿಯವರ ಮೌಖಿಕ ಆದೇಶದಂತೆ ಪಟ್ಟಣ ಪಂಚಾಯ್ತಿ ನಡೆದುಕೊಂಡಲ್ಲಿ ಎಂದಿನಂತೆ ವಾಹನ ನಿಲುಗಡೆಯಾಗುತ್ತದೆ ಆದರೆ ಪಂಚಾಯ್ತಿ ವತಿಯಿಂದ ದೈನಂದಿನ ಯಾವುದೇ ಸ್ವಚ್ಛತಾ ಕಾರ್ಯಗಳು ನಡೆಯುವುದಿಲ್ಲ,ಅಲ್ಲಿ ಯಾವುದೇ ಗಲಾಟೆ,ಘರ್ಷಣೆಗಳು ನಡೆದರೆ ಅದಕ್ಕೂ ಪಟ್ಟಣ ಪಂಚಾಯ್ತಿಗೂ ಯಾವುದೇ ರೀತಿಯ ಸಂಬಂಧವಿಲ್ಲ, ಮುಂದೆ ಇದರಿಂದ ಏನೇ ಪರಿಣಾಮಗಳಾದಲ್ಲಿ ಇದಕ್ಕೆ ನೇರ ಜಿಲ್ಲಾಧಿಕಾರಿಯವರೇ ನೇರ ಹೊಣೆಯಾಗಿರುತ್ತಾರೆ ಎಂದು ಪಟ್ಟಣ ಪಂಚಾಯ್ತಿ ಅಧ್ಯಕ್ಷ ಹೆಚ್.ಎಸ್ ವೇಣುಗೋಪಾಲ್ ಎಚ್ಚರಿಸಿದ್ದಾರೆ. ಜಿಲ್ಲಾಧಿಕಾರಿಗಳು ನ್ಯಾಯಾಲಯದಲ್ಲಿ ಮೊಕದ್ದಮೆ ಇರುವುದರಿಂದ ಅಂತ ಹೇಳುತ್ತಿದ್ದು, ಈ ಮೊಕದ್ದಮೆಗಳಿಗೂ ಪಾರ್ಕಿಂಗ್ ಬಿಡ್ಡಿಂಗ್‌ಗೂ ಯಾವುದೇ ಸಂಬಂಧವಿಲ್ಲಾ, ಈ ಮೊಕದ್ದಮೆಗಳು ಸುಮಾರು 20ವರ್ಷಗಳಿಂದಲೂ ಇದ್ದು ಆಗಲೂ ಕೂಡ ಹರಾಜು ಪ್ರಕ್ರಿಯೆ ನಡೆದಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.
ಪಾರ್ಕಿಂಗ್ ಸ್ಥಳದಿಂದಾಗುವ ನಷ್ಟ ಜನರ ಮೇಲೆ ಹೊರಿಸಲು ಬಿಡಲ್ಲ..
ಜಿಲ್ಲಾಧಿಕಾರಿಗಳ ಮೌಖಿಕ ಆದೇಶದಂತೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗಳು ಲಿಖಿತ ಆದೇಶ ನೀಡಿದ್ದು ವಾಹನ ಪಾರ್ಕಿಂಗ್ ಸ್ಥಳ ಪಟ್ಟಣ ಪಂಚಾಯ್ತಿಯಿಂದ ಕೈ ತಪ್ಪುತ್ತದೆ. ಇದರಿಂದಾಗುವ ನಷ್ಟದ ಹೊರೆಯನ್ನು ಯಾವುದೇ ಕಾರಣಕ್ಕೂ ಜನರ ಮೇಲೆ ಹೊರಿಸಲಾಗದು ಹೊರಿಸಲು ಬಿಡುವುದಿಲ್ಲ ಎಂದು ಪಟ್ಟಣ ಪಂಚಾಯ್ತಿ ಉಪಾಧ್ಯಕ್ಷ ಪ್ರಕಾಶ್ ಎಂ.ಎಲ್ ಹೇಳಿದ್ದಾರೆ.
ಅನುದಾನ ಕೊಡಿಸಿ ಪಟ್ಟಣದ ಅಭಿವೃದ್ಧಿಗೆ ನೆರವಾಗಿ
ತುಂಬಾ ಹಿಂದಿನಿಂದಲೂ ಪಟ್ಟಣ ಪಂಚಾಯ್ತಿಯ ದೊಡ್ಡ ಆದಾಯದ ಮೂಲವಾಗಿದ್ದ ವಾಹನ ಪಾರ್ಕಿಂಗ್ ಸ್ಥಳ ಡಿ.ಸಿ ಆದೇಶದಿಂದ ಪಂಚಾಯ್ತಿ ಕೈ ತಪ್ಪಿದ್ದು ಆದ್ದರಿಂದ ಈ ಬಾರಿ ಪಟ್ಟಣ ಪಂಚಾಯ್ತಿ ಆದಾಯದಲ್ಲಿ ಭಾರೀ ಇಳಿಕೆಯಾಗಲಿದೆ ಇದರಿಂದ ಪಂಚಾಯ್ತಿಯ ನೌಕರರ ವೇತನ,ಕಛೇರಿಯ ಖರ್ಚುವೆಚ್ಚ ಹಾಗೂ ಪಟ್ಟಣದ ಅಭಿವೃದ್ದಿಗೆ ದೊಡ್ಡ ಪೆಟ್ಟು ಬೀಳಲಿದೆ. ಆದ್ದರಿಂದ ಪಟ್ಟಣದ ಅಭಿವೃದ್ಧಿಗಾಗಿ ಕ್ಷೇತ್ರದ ಶಾಸಕರು,ಜಿಲ್ಲಾಧಿಕಾರಿಗಳು ಅಗತ್ಯ ಅನುದಾನವನ್ನು ನೀಡಿ ಹಾಗೂ ವಿಶೇಷ ಅನುದಾನವನ್ನು ಸರ್ಕಾರದಿಂದ ಕೊಡಿಸಿ ಪಟ್ಟಣದ ಅಭಿವೃದ್ಧಿಗೆ ಸಹಕರಿಸುವಂತೆ ಇದೇ ಸಂದರ್ಭದಲ್ಲಿ ಅಧ್ಯಕ್ಷ ಹೆಚ್.ಎಸ್ ವೇಣುಗೋಪಾಲ್ ಶಾಸಕರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
