ಸಾಲ ಕೊಟ್ಟು ಜೀವ ತೆಗೆಯುವ ಲೋನ್ ಆಪ್..!!
– ಸಾಲ ನೀಡುವ ನೆಪದಲ್ಲಿ ಆ್ಯಪ್ ಗಳ ಮಾನಸಿಕ ಕಿರುಕುಳ
– ಆಪ್ ಸಾಲ ಮಾಡಿ ಜೀವ, ಜೀವನ ಕಳೆದುಕೊಳ್ಳಬೇಡಿ ಸ್ನೇಹಿತರೇ..
ನಮ್ಮೂರ್ ಎಕ್ಸ್‌ಪ್ರೆಸ್ ನ್ಯೂಸ್
ವಿಶೇಷ ವರದಿ: ರಚನಾ ಕಾಮತ್
ಮಂಗಳೂರು: ಬಡ ಹಾಗೂ ಮಧ್ಯಮ ವರ್ಗದ ಜನರು ಬೇಗ ಸಾಲ ಪಡೆಯಬೇಕೆಂಬ, ಆ ಮೂಲಕ ತಕ್ಷಣ ವ್ಯವಹಾರವೊಂದನ್ನು ಪ್ರಾರಂಭಿಸಿ, ಲಾಭ ಗಳಿಸಬೇಕೆಂಬ ಹಪಾಹಪಿಯಿಂದ ಸಾಲ ನೀಡುವುದಾಗಿ ಬಿಂಬಿಸುವಂತಹ ಮೊಬೈಲ್ ಆ್ಯಪ್ ಗಳನ್ನು ಬಳಸುವವರ ಸಂಖ್ಯೆ ಇತ್ತೀಚೆಗೆ ಅಧಿಕಗೊಂಡಿದೆ. ಇದರಿಂದ ಮನುಷ್ಯ ತನ್ನ ಜೀವನ ಹಾಗೂ ಜೀವವನ್ನೂ ಕಳೆದುಕೊಳ್ಳುವ ಮಟ್ಟಕ್ಕೆ ಬಂದು ನಿಂತಿದ್ದಾನೆ. ಜತೆಗೆ ಸರ್ಕಾರ ಕೂಡ ಇಂತಹ ಅಕ್ರಮ ತಡೆಯುವಲ್ಲಿ ಫೇಲ್ ಆಗಿರುವುದು ಬಹಳಷ್ಟು ಕುತೂಹಲಕ್ಕೂ ಕಾರಣವಾಗಿದೆ.
ಆ್ಯಪ್ ಗಳಲ್ಲಿ ಸಾಲ ಮಾಡಿ, ಅದನ್ನು ವ್ಯವಹಾರಗಳಿಗೆ ಹೂಡಿಕೆ ಮಾಡಿ, ನಷ್ಟ ಅನುಭವಿಸಿ, ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈಗಾಗಲೇ ನೂರಾರು ಮಂದಿ ಇದಕ್ಕೆ ಬಲಿ ಆಗಿದ್ದಾರೆ. ಐಪಿಎಲ್ ವೇಳೆ ಐಪಿಎಲ್ ಬೆಟ್ಟಿಂಗ್ ಆಪ್ ಹಲವರ ಪ್ರಾಣ ತೆಗೆದಿವೆ.
ಕರಾವಳಿಯಲ್ಲಿ ಮತ್ತೊಬ್ಬ ಯುವಕ ಆಪ್ ಕಿರುಕುಳಕ್ಕೆ ಬಲಿ!
ಮಂಗಳೂರು ಕೋಡಿಕಲ್ ಯುವಕ ನಿಖಿಲ್ ಪೂಜಾರಿ. ಈತ ವಿವಿಧ ಆ್ಯಪ್ ಗಳಲ್ಲಿ ಸಾಲ ಮಾಡಿ, ಬಳಿಕ ಅದನ್ನು ತೀರಿಸಲಾಗದೆ ನೇಣಿಗೆ ಶರಣಾದ ವಿಚಾರ ಬೆಳಕಿಗೆ ಬಂದಿದೆ. ಆ್ಯಪ್ ಗಳಲ್ಲಿ ಸಾಲ ಪಡೆಯುವ ವ್ಯಕ್ತಿಗಳ ಫೋನನ್ನು ನಿಯಂತ್ರಣಕ್ಕೆ ಪಡೆದು, ಅವರ ಫೋಟೊ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಕಿರುಕುಳ ನೀಡುವುದಷ್ಟೇ ಅಲ್ಲದೆ. ಫೋಟೊಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಮತ್ತು ಸಾಲ ಪಡೆದ ವ್ಯಕ್ತಿಯ ಸಂಪರ್ಕದಲ್ಲಿರುವ ಇತರರಿಗೂ ಕರೆ ಮಾಡಿ ಮಾನಸಿಕ ಹಿಂಸೆಗೆ ಒಳಪಡಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ. ನಿಖಿಲ್ ಅವರ ಘಟನೆಯಿಂದಾಗಿ ಇದರ ಕುರಿತು ಊರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆ್ಯಪ್ ಗಳನ್ನು ಬಳಸುವ ಮೊದಲು ಎಚ್ಚರದಿಂದಿರಬೇಕೆಂಬುದು ಇಂತಹ ಸಂದರ್ಭಗಳಿಂದ ತಿಳಿದು ಬರುತ್ತಿದೆ.
ಪೊಲೀಸ್ ಇಲಾಖೆ ಮೌನ ಏಕೆ?
ಲೋನ್ ಆಪ್ ವಿರುದ್ದ ಸರ್ಕಾರ ಅಗಲಿ ಪೊಲೀಸ್ ಇಲಾಖೆ ಅಗಲಿ ಕ್ರಮ ಕೈಗೊಂಡ ಉದಾಹರಣೆ ಬಹಳ ಕಡಿಮೆ. ಈ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಜನ ಅಗ್ರಹಿಸಿದ್ದಾರೆ.
