Categories
ರಾಜ್ಯ

ಬೆಂಗಳೂರು : ರಾಜ್ಯದ ಮೊದಲ ಟ್ರಾಫಿಕ್ ಸಿಗ್ನಲ್ ಆರಂಭಿಸಿದ್ದ ಗರುಡಾಚಾರ್ ನಿಧನ..!!

ಟಾಪ್ 4 ನ್ಯೂಸ್ ಕರ್ನಾಟಕ

ಬೆಂಗಳೂರು : ರಾಜ್ಯದ ಮೊದಲ ಟ್ರಾಫಿಕ್ ಸಿಗ್ನಲ್ ಆರಂಭಿಸಿದ್ದ ಗರುಡಾಚಾರ್ ನಿಧನ..!!
– ಬೆಳಗಾವಿ : ಮಾನಕ್ಕೆ ಹೆದರಿ ಸೈಬ‌ರ್ ಖದೀಮರಿಗೆ 6 ಲಕ್ಷ ರು. ಹಣ ಕೊಟ್ಟಿದ್ದ ದಂಪತಿ ಆತ್ಮಹತ್ಯೆ..!!
– ಚಿತ್ರದುರ್ಗ: ಟಿಟಿ ವಾಹನ ಪಲ್ಟಿಯಾಗಿ ಮೂವರು ಸಾವು..!!
– ಮೈಸೂರು: ಕೆರೆಯಲ್ಲಿ ಹಸು ತೊಳೆಯಲು ಹೋಗಿದ್ದ ಮೂವರು ನೀರುಪಾಲು ..!!

NAMMUR EXPRESS NEWS
ಬೆಂಗಳೂರು : ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ, ಶಾಸಕ ಉದಯ್ ಗರುಡಾಚಾರ್ ಅವರ ತಂದೆ ಬಿ.ಎನ್.ಗರುಡಾಚಾರ್ (96) ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ. ಬಸವನಗುಡಿ ನಿವಾಸದಲ್ಲಿ ಮುಂಜಾನೆ ಸುಮಾರು 3 ಗಂಟೆಗೆ ವಯೋಸಹಜವಾಗಿ ಮೃತಪಟ್ಟಿದ್ದು, ಶನಿವಾರ ಸಂಜೆ ಸುಮಾರು 4 ಗಂಟೆಗೆ ವಿಲ್ಸನ್ ಗಾರ್ಡನ್‌ ಸ್ಮಶಾನದಲ್ಲಿ ಅಂತ್ಯ ಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.
ಮಂಡ್ಯದ ನಾಗಮಂಗಲ ತಾಲೂಕು ಬಿಂಡಿಗನವಿಲೆ ಗ್ರಾಮದ ಗರುಡಾಚಾ‌ರ್ ಐಪಿಎಸ್ ಅಧಿಕಾರಿಯಾಗಿ ಸುದೀರ್ಘ ಕಾಲ ಕಾರ್ಯ ನಿರ್ವಹಿಸಿದ್ದರು. ಬೆಂಗಳೂರು ಜಿಲ್ಲೆಯ ಎಸ್ಪಿ, ಬೆಂಗಳೂರು ನಗರದ ಡಿಸಿಪಿಯಾಗಿ ಸುಮಾರು 8 ವರ್ಷ ಕಾರ್ಯನಿರ್ವಹಿಸಿದ್ದರು. ನಂತರ ನಗರ ಪೊಲೀಸ್ ಆಯುಕ್ತರಾಗಿ 4 ವರ್ಷ ಕೆಲಸ ಮಾಡಿದ್ದರು. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿ 3 ವರ್ಷ 8 ತಿಂಗಳು ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಗರುಡಾಚಾರ್ 1963ರಲ್ಲಿ ಬೆಂಗಳೂರು ನಗರ ಸಂಚಾರ ಪೊಲೀಸ್ ಉಪ ಆಯುಕ್ತರಾಗಿದ್ದ ವೇಳೆ ಕಾರ್ಪೊರೇಷನ್ ವೃತ್ತದಲ್ಲಿ ರಾಜ್ಯದ ಮೊದಲ ಟ್ರಾಫಿಕ್ ಸಿಗ್ನಲ್ ಪ್ರಾರಂಭಿಸಿದ್ದರು.
ಕಾರ್ಯದಕ್ಷತೆ ಮೆಚ್ಚಿ ಸರ್ಕಾರ ಇತಿಹಾಸದಲ್ಲಿ ಪ್ರಥಮ ಬಾರಿಗೆ ನಿವೃತ್ತ ಐಪಿಎಸ್ ಅಧಿಕಾರಿಯನ್ನು ಕೆಎಟಿ ಸದಸ್ಯರನ್ನಾಗಿ ನೇಮಿಸಿತ್ತು.ಸುದೀರ್ಘ ಸೇವೆ, ಪ್ರಾಮಾಣಿಕತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಪ್ರಶಸ್ತಿ-ಪುರಸ್ಕಾರಳಿಗೆ ಭಾಜನರಾಗಿದ್ದರು.

– ಬೆಳಗಾವಿ : ಮಾನಕ್ಕೆ ಹೆದರಿ ಸೈಬ‌ರ್ ಖದೀಮರಿಗೆ 6 ಲಕ್ಷ ರು. ಹಣ ಕೊಟ್ಟಿದ್ದ ದಂಪತಿ ಆತ್ಮಹತ್ಯೆ..!!

ಬೆಳಗಾವಿ : ಸೈಬರ್ ಖದೀಮರು ತಾವು ಪೊಲೀಸರೆಂದು ವೃದ್ದ ದಂಪತಿಗೆ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟು, ಹಣ ಕೊಡದಿದ್ದರೆ ನಿಮ್ಮ ನಗ್ನ ಚಿತ್ರಗಳನ್ನು ವೈರಲ್ ಮಾಡುವುದಾಗಿ ಬೆದರಿಸಿದ ಪರಿಣಾಮ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ನಡೆದಿದೆ. ನಿವೃತ್ತ ರೈಲ್ವೆ ಉದ್ಯೋಗಿ ಡಿಯಾಗೋ ನಜರತ್ (83) ಮತ್ತು ಪಾವಿಯಾ (79) ಮೃತ ದಂಪತಿ. ದಂಪತಿಗೆ 1 ತಿಂಗಳಿಂದ ಬೆದರಿಕೆ ಹಾಕುತ್ತಿದ್ದ ಸೈಬ‌ರ್ ಖದೀಮರ ಖಾತೆಗೆ ಹೆದರಿ ವೃದ್ಧ ದಂಪತಿ 6 ಲಕ್ಷ ವರ್ಗಾವಣೆ ಮಾಡಿದ್ದಾರೆ. ಆದರೂ ಖದೀಮರು ಮತ್ತೆ ಹಣ ನೀಡುವಂತೆ ಪೀಡಿಸಿದ್ದರಿಂದ ಬೇಸತ್ತು ನಿದ್ರೆ ಮಾತ್ರೆ ಸೇವಿಸಿ ಪಾವಿಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಪತಿ ಡಿಯಾಗೋ ಡೆತ್ ನೋಟ್ ಬರೆದಿಟ್ಟು ಚಾಕುವಿನಿಂದ ಕತ್ತು ಕೊಯ್ದು ಕೊಂಡು ಜೀವ ಕಳೆದುಕೊಂಡಿದ್ದಾರೆ. ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

– ಚಿತ್ರದುರ್ಗ: ಟಿಟಿ ವಾಹನ ಪಲ್ಟಿಯಾಗಿ ಮೂವರು ಸಾವು..!!

ಚಿತ್ರದುರ್ಗ: ಟಿಟಿ ವಾಹನ ಪಲ್ಟಿಯಾಗಿ ಮೂವರು ಜನರು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದಲ್ಲಿ ನಡೆದಿದೆ. ಶಂಕರಿಬಾಯಿ(65), ಕುಮಾರ ನಾಯ್ಕ್(46) ಮತ್ತು ಶ್ವೇತಾ(38) ಮೃತರು. ಐವರಿಗೆ ಗಂಭೀರ ಗಾಯಗಳಾಗಿದ್ದು, ಚಳ್ಳಕೆರೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

– ಮೈಸೂರು: ಕೆರೆಯಲ್ಲಿ ಹಸು ತೊಳೆಯಲು ಹೋಗಿದ್ದ ಮೂವರು ನೀರುಪಾಲು ..!!

ಮೈಸೂರು: ಕೆರೆಯಲ್ಲಿ ಹಸು ತೊಳೆಯಲು ಹೋಗಿದ್ದ ಮೂವರು ನೀರುಪಾಲಾಗಿರುವಂತಹ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಾಮಳ್ಳಿಯಲ್ಲಿ ನಡೆದಿದೆ. ಮುದ್ದೇಗೌಡ(48), ಬಸವೇಗೌಡ(45), ವಿನೋದ್(17) ಮೃತರು. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹಬ್ಬ ಹಿನ್ನೆಲೆ ಹಸುಗಳನ್ನು ತೊಳೆಯಲು ವಿನೋದ್ ಕೆರೆಗೆ ಹೋಗಿದ್ದರು. ಈ ವೇಳೆ ವಿನೋದ್‌ನನ್ನು ಹಸು ಕೆರೆಗೆ ಎಳೆದೊಯ್ದಿದೆ. ಆತನ ರಕ್ಷಣೆಗೆ ಮುದ್ದೇಗೌಡ ಮತ್ತು ಬಸವೇಗೌಡ ಕೆರೆಗೆ ಇಳಿದಿದ್ದಾರೆ. ಆದರೆ ಈಜು ಬಾರದೆ ನೀರಿನಲ್ಲಿ ಮುಳುಗಿ ಮೂವರೂ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.