ಟಾಪ್ 4 ನ್ಯೂಸ್ ಕರ್ನಾಟಕ
ಬೆಂಗಳೂರು : ಅಲೋವೇರಾ ಜ್ಯೂಸ್ ಎಂದು ವಿಷ ಕುಡಿದ ಬಾಲಕಿ ಸಾವು..!!
– ಬೆಳಗಾವಿ : ಶಾಸಕ ರಾಜು ಸಹೋದರ ಪುತ್ರನ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು..!!
– ಕಲಬುರಗಿ : ಪತ್ನಿ, ಮಕ್ಕಳನ್ನು ಕೊಂದು, ಸರ್ಕಾರಿ ನೌಕರ ಆತ್ಮಹತ್ಯೆ..!!
– ಮೈಸೂರು: ಬಸ್ ಚಾಲಕನಿಗೆ ಹೃದಯಾಘಾತದಿಂದ ಪಾದಚಾರಿ ಮಹಿಳೆಯೂ ಸಾವು..!!
NAMMUR EXPRESS NEWS
ಬೆಂಗಳೂರು : ಅಲೋವೇರಾ ಜ್ಯೂಸ್ ಎಂದು ಭಾವಿಸಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೀಪಾಂಜಲಿನಗರ ನಿವಾಸಿ ನಿಧಿಕೃಷ್ಣ (14) ಮೃತ ದುರ್ದೈವಿ. ನಿಧಿ ಮಾ.14ರಂದು ಮನೆಯಲ್ಲಿ ಅಲೋವೇರಾ ಜ್ಯೂಸ್ ಎಂದು ಭಾವಿಸಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಳಾಗಿದ್ದಳು. ಬಳಿಕ ಆಕೆಯನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾ.31ರ ಮುಂಜಾನೆ ಚಿಕಿತ್ಸೆ ಫಲಿಸದೆ ನಿಧಿ ಮೃತಪಟ್ಟಿದ್ದಾಳೆ. ಈ ಸಂಬಂಧ ಆಕೆಯ ಪೋಷಕರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತ ನಿಧಿ ದೀಪಾಂಜಲಿ ನಗರದಲ್ಲಿ ತಾಯಿ ಸುಜಾತಾ ಜತೆಗೆ ನೆಲೆಸಿದಳು. ಶಾಲೆಯೊಂದರಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆರೋಗ್ಯ ಕಾಪಾಡಿಕೊಳ್ಳಲು ಆಗಾಗ ಅಲೋವೇರಾ ಜ್ಯೂಸ್ ಕುಡಿಯುತ್ತಿದ್ದಳು. ಆಲೋವೇರಾ ಜ್ಯೂಸ್ ಖಾಲಿಯಾದ ಹಿನ್ನೆಲೆಯಲ್ಲಿ ಆ ಬಾಟಲಿಯಲ್ಲಿ ಆಕೆಯ ತಾಯಿ ತರಕಾರಿ, ಹೂವಿಗೆ ಸಿಂಪಡಿಸುವ ಕ್ರಿಮಿನಾಶಕ ತುಂಬಿಸಿಟ್ಟಿದ್ದರು. ಇದನ್ನು ಗಮನಿಸದ ನಿಧಿ, ಮಾ.14ರಂದು ಅಲೋವೇರಾ ಜ್ಯೂಸ್ ಎಂದು ಭಾವಿಸಿ ಕ್ರಿಮಿನಾಶಕ ಸೇವಿಸಿ ಕೆಲವೇ ಕ್ಷಣದಲ್ಲಿ ಅಸ್ವಸ್ಥಗೊಂಡಿದ್ದಳು. ಕೂಡಲೇ ತಾಯಿ ಸುಜಾತಾ ಹಾಗೂ ಸ್ಥಳೀಯರೂ ನಿಧಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಚಿಕಿತ್ಸೆ ಫಲಿಸದೆ ನಿಧಿ ಮೃತಪಟ್ಟಿದ್ದಾಳೆ. ಈ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
– ಬೆಳಗಾವಿ : ಶಾಸಕ ರಾಜು ಸಹೋದರ ಪುತ್ರನ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸಾವು..!!
ಬೆಳಗಾವಿ : ಬೆಳಗಾವಿಯಿಂದ ಕಿತ್ತೂರು ಕಡೆ ಬರುತ್ತಿದ್ದ ಬೈಕ್‌ಗೆ ಶಾಸಕ ರಾಜು ಕಾಗೆ ಅವರ ಸಹೋದರನ ಪುತ್ರ ಶ್ರೀಪ್ರಸಾದ ಸಿದ್ದನಗೌಡ ಯವರ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಿತ್ತೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಗೋಕಾಕನ ಬಸವರಾಜ ಪುಡುಕಲಕಟ್ಟಿ (24) ಮೃತ ವ್ಯಕ್ತಿ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡು ಬೆಳಗಾವಿಯ ವಿಜಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ಬೈಕ್‌ನಲ್ಲಿ ಮೂವರು ಸಂಚರಿಸುತ್ತಿದ್ದರು ಎನ್ನಲಾಗಿದೆ. ಈ ಮೂವರು ತಿಗಡೊಳ್ಳಿಯ ರಸ್ತೆಯಲ್ಲಿ ಪ್ರಾರಂಭವಾಗಿರುವ ಕೆರೆ ತುಂಬುವ ಯೋಜನೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಕೆಲಸದ ಮೇಲೆ ಹಟ್ಟಿಹೊಳಿ ಗ್ರಾಮಕ್ಕೆ ತೆರಳಿದ್ದರು. ಮರಳಿ ಕಿತ್ತೂರು ಪಟ್ಟಣಕ್ಕೆ ಬರುತ್ತಿರುವಾಗ ಈ ಅವಘಡ ಸಂಭವಿಸಿದೆ.
– ಕಲಬುರಗಿ : ಪತ್ನಿ, ಮಕ್ಕಳನ್ನು ಕೊಂದು, ಸರ್ಕಾರಿ ನೌಕರ ಆತ್ಮಹತ್ಯೆ..!!
ಕಲಬುರಗಿ : ಆತ ಸರ್ಕಾರಿ ನೌಕರ. ಮದುವೆಯಾಗಿ ಸುಖಃ ಸಂಸಾರ ನಡೆಸುತ್ತಿದ್ದ. ಅದಕ್ಕೆ ಸಾಕ್ಷಿವೆಂಬಂತೆ ಎರಡು ಮಕ್ಕಳು ಸಹ ಇದ್ದರು. ಆದರೆ ಅದೇನಾಯ್ತೋ ಗೊತ್ತಿಲ್ಲ, ಡೆತ್ನೋಟ್ ಬರೆದಿಟ್ಟು ತನ್ನ ಪತ್ನಿ ಸೇರಿದಂತೆ ಇಬ್ಬರು ಮಕ್ಕಳನ್ನು ಕೊಂದು ತಾನು ಕೂಡ ನೇಣಿಗೆ ಶರಣಾಗಿರುವಂತಹ ಘಟನೆ ನಗರದ ಗಾಬರೆ ಲೇಔಟ್ನ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದೆ. ಈ ಘನಘೋರ ಕೃತ್ಯ ಕಂಡು ಇಡೀ ಕಲಬುರಗಿ ಬೆಚ್ಚಿಬಿದ್ದಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಕಲಬುರಿಗಿ ಘನಘೋರ ಮತ್ತು ಕರಳು ಹಿಂಡುವ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಇಂತಹದೊಂದು ದೊಡ್ಡ ಅನಾಹುತಕ್ಕೆ ಕಾರಣವಾಗಿದ್ದು, ಸಂತೋಷ್ ಕೊರಳಿ ಎಂಬ ವ್ಯಕ್ತಿ. ಕಲಬುರಗಿಯ ಟೆಸ್ಕಾಂನಲ್ಲಿ ಸೀನಿಯರ್ ಅಕೌಂಟೆಂಟ್ ಆಗಿದ್ದ ಸಂತೋಷ್ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ. ಕೌಟುಂಬಿಕ ಕಲಹ ಹಿನ್ನಲೆ ಪತ್ನಿ ಇಬ್ಬರು ಮಕ್ಕಳ್ಳನ್ನ ಕೊಲೆ ಮಾಡಿರುವ ಸಂತೋಷ್ ಕೊನೆಗೆ ತಾನೂ ಕೂಡ ಮನೆಯ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
– ಮೈಸೂರು: ಬಸ್ ಚಾಲಕನಿಗೆ ಹೃದಯಾಘಾತ ಪಾದಚಾರಿ ಮಹಿಳೆಯೂ ಸಾವು..!!
ಮೈಸೂರು :ಬಸ್ ಚಾಲನೆ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಚಾಲಕ ಸಾವನ್ನಪ್ಪಿದ್ದು, ಬಳಿಕ ನಿಯಂತ್ರಣ ತಪ್ಪಿದ ಅದೇ ಬಸ್ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿಯಾಗಿ ಆಕೆಯೂ ಮೃತಪಟ್ಟ ಘಟನೆ ಎಚ್.ಡಿ. ಕೋಟೆ ತಾಲೂಕಿನ ಧಮ್ಮನಕಟ್ಟೆ ಸಮೀಪ ನಡೆದಿದೆ. ಹೊರಗುತ್ತಿಗೆ ಆಧಾರದ ಮೇಲೆ ಕೆಎಸ್‌ಆರ್‌ಟಿಸಿ ಬಸ್ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುನಿಲ್‌ಕುಮಾರ್ ಮತ್ತು ಧಮ್ಮನಕಟ್ಟೆ ಗ್ರಾಮದ ಲಕ್ಷ್ಮಮ್ಮ ಮೃತಪಟ್ಟವರು. ಬಸ್ ಚಾಲಕನ ಸಹೋದರಿ ವಿವಾಹಕ್ಕೆ ಒಂದು ವಾರವಷ್ಟೇ ಬಾಕಿ ಉಳಿದಿದ್ದು ಮದುವೆ ಸಮಾರಂಭದಲ್ಲಿ ಸಂತಸದಿಂದಿರಬೇಕಾದ ಕುಟುಂಬದಲ್ಲಿ ಈಗ ದುಃಖ ಮಡುಗಟ್ಟಿದೆ. ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.