ನಮ್ಮೂರ್ ಎಕ್ಸ್‌ಪ್ರೆಸ್ ಸ್ಪೋರ್ಟ್ಸ್ ನ್ಯೂಸ್
ಐಪಿಎಲ್ – 2025
* ಟೈಟಾನ್ಸ್ ವಿರುದ್ಧ ತವರಲ್ಲೇ ಮುಗ್ಗರಿಸಿದ ಆರ್‌ಸಿಬಿ
* ಫೆವಿಲಿಯನ್ ಪರೇಡ್ ನಡೆಸಿದ ಆರ್‌ಸಿಬಿ
NAMMUR EXPRESS SPORTS NEWS
ಬೆಂಗಳೂರು: ಐಪಿಎಲ್ 2025ರ ಟೂರ್ನಿಯಲ್ಲಿ ಆರ್‌ಸಿಬಿ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಗುಜರಾತ್ ಟೈಟನ್ಸ್ ವಿರುದ್ಧ ಸೋಲು ಕಂಡಿದೆ.
ಎಂ .ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ಆರ್ ಸಿಬಿ ಪರ ಲಿಯಾಮ್ ಲಿವಿಂಗ್‌ಸ್ಟೋನ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ RCB ಗುಜರಾತ್ ಟೈಟಾನ್ಸ್ ವಿರುದ್ಧ 169 ರನ್ ಪೇರಿಸಿತ್ತು. ತಂಡವು 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 169 ರನ್ ಗಳಿಸಿದ್ದು ಗುಜರಾತ್ ಟೈಟಾನ್ಸ್ ಗೆ 170 ರನ್ ಗಳ ಸ್ಪರ್ಧಾತ್ಮಕ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಟೈಟನ್ಸ್ 2 ವಿಕೆಟ್ ನಷ್ಟಕ್ಕೆ 170 ರನ್ ಬಾರಿಸಿ ಗೆಲುವಿನ ನಗೆ ಬೀರಿದೆ.
ಗುಜರಾತ್ ಟೈಟಾನ್ಸ್ ಪರ ಸಾಯಿ ಸುದರ್ಶನ್ 49 ರನ್ ಗೆ ಔಟಾಗಿ ಅರ್ಧಶತಕ ವಂಚಿತರಾದರು. ಶುಭ್ಮನ್ ಗಿಲ್ 14 ರನ್ ಗಳಿಸಿ ಔಟಾದರು. ನಂತರ ಜೋಸ್ ಬಟ್ಲರ್ ಅಜೇಯ 73 ಮತ್ತು ಶೆರ್ಫೇನ್ ರುದರ್ಫೋರ್ಡ್ ಅಜೇಯ 30 ರನ್ ಬಾರಿಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಫೆವಿಲಿಯನ್ ಪರೇಡ್ ನಡೆಸಿದ ಆರ್‌ಸಿಬಿ !!
ಆರಂಭಿಕ ಓವರ್‌ಗಳಲ್ಲಿ ಟೈಟಾನ್ಸ್ ಬೌಲರ್‌ಗಳಾದ ಅರ್ಷದ್ ಖಾನ್ ಮತ್ತು ಮೊಹಮ್ಮದ್ ಸಿರಾಜ್ ಆರ್‌ಸಿಬಿ ಬ್ಯಾಟಿಂಗ್ ಲೈನ್‌ಅಪ್‌ನ್ನು ಧ್ವಂಸಗೊಳಿಸಿದರು. ಮೊದಲು ವಿರಾಟ್ ಕೊಹ್ಲಿ 7 ರನ್ ಗಳಿಸಿ ಔಟಾದರೆ, ದೇವದತ್ ಪಡಿಕ್ಕಲ್ ಕೂಡ 4 ರನ್ ಗಳಿಸಿ ಔಟಾದರು. ಫಿಲ್ ಸಾಲ್ಟ್ ಮತ್ತು ನಾಯಕ ರಜತ್ ಪಾಟಿದಾರ್ ಸ್ವಲ್ಪ ಸಮಯ ತಂಡವನ್ನು ಮುನ್ನಡೆಸಿದರು, ಆದರೆ ಅವರು ಕೂಡ ಕ್ರಮವಾಗಿ 14 ಮತ್ತು 12 ರನ್ ಗಳಿಸಿ ಔಟಾದರು. ಕೇವಲ 42 ರನ್‌ಗಳಿಸುವಷ್ಟರಲ್ಲಿ ಆರ್‌ಸಿಬಿ ತನ್ನ ಮೋದಲ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.ವಿರಾಟ್ ಕೊಹ್ಲಿ ಮತ್ತು ರಜತ್ ಪಾಟಿದಾರ್ ಸೇರಿದಂತೆ ಎಲ್ಲಾ ಪ್ರಸಿದ್ಧ ಆಟಗಾರರು ವಿಫಲರಾದರು.
ಲಿಯಾಮ್ ಲಿವಿಂಗ್‌ಸ್ಟೋನ್ ಜವಾಬ್ದಾರಿಯನ್ನು ವಹಿಸಿಕೊಂಡರು ಮತ್ತು ಜಿತೇಶ್ ಶರ್ಮಾ ಅವರೊಂದಿಗೆ 52 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದರು. ಜಿತೇಶ್ 33 ರನ್‌ಗಳನ್ನು ಬಾರಿಸಿದರೆ, ಲಿವಿಂಗ್‌ಸ್ಟೋನ್ 54 ರನ್‌ಗಳ ಇನ್ನಿಂಗ್ಸ್‌ನಲ್ಲಿ 1 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದರು. ಮತ್ತೊಂದೆಡೆ, ಟಿಮ್ ಡೇವಿಡ್ ಕೊನೆಯ ಓವರ್‌ನವರೆಗೂ ಕ್ರೀಸ್‌ನಲ್ಲಿಯೇ ಇದ್ದು 18 ಎಸೆತಗಳಲ್ಲಿ 32 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು.
ಇಂದು ಕೆಕೆಆರ್ ಹಾಗೂ ಸನ್ ರೈಸರ್ಸ್ ನಡುವೆ ಪಂದ್ಯ
ಇಂದು ಕೊಲ್ಕತ್ತಾದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ಹಾಗೂ ಹಾಲಿ ರನ್ನರ್ ಅಪ್ ಹೈದ್ರಾಬಾದ್ ತಂಡಗಳ ನಡುವೆ ಪಂದ್ಯ ನಡೆಯಲಿದ್ದು,ಉಭಯ ತಂಡಗಳು ಗೆಲುವಿಗಾಗಿ ರೋಚಕ ಪೈಪೋಟಿ ನಡೆಸುವ ನಿರೀಕ್ಷೆಯಿದೆ.
